ವರದಿಗಾರ : ಹಂತಕರ ಗುಂಡಿಗೆ ಬಲಿಯಾದ ನಾಡಿನ ಖ್ಯಾತ ಪತ್ರಕರ್ತೆ , ವಿಚಾರವಾದಿ ಗೌರಿ ಲಂಕೇಶ್ ಹತ್ಯೆಗೆ ನ್ಯಾಯ ದೊರಕಿಸಿಕೊಡುವ ಪ್ರತಿರೋಧ ಸಮಾವೇಶದಲ್ಲಿ ದೇಶದಾದ್ಯಂತ ಆಗಮಿಸಿದ್ದ ಸಾವಿರಾರು ಜನರಿಂದು ಬೆಂಗಳೂರಿನಲ್ಲಿ ಒಕ್ಕೊರಳಿನಿಂದ ‘ನಾನು ಗೌರಿ, ನಾವೆಲ್ಲರೂ ಗೌರಿ’ ಎಂಬ ಘೋಷಣೆ ಮೊಳಗಿಸುವುದರೊಂದಿಗೆ ಗೌರಿ ಹತ್ಯೆಯಾದರೂ ಅವರ ಧ್ಯೇಯ ಮತ್ತು ವಿಚಾರಗಳನ್ನು ಸಾಯಿಸಲು ನಾವು ಬಿಡೆವು ಎಂಬ ಸಂದೇಶವನ್ನು ಸಾರಿ ಹೇಳಿದರು.
ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಮೃತ್ಯುಂಜಯ ಸ್ವಾಮಿ ತಮಟೆ ಬಾರಿಸುವುದರೊಂದಿಗೆ ಪ್ರತಿಭಟನಾ ರಾಲಿ ಆರಂಭಗೊಂಡು, ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಸಮಾವೇಶಗೊಂಡಿತು. ಸಭೆಯಲ್ಲಿ ಟೀಸ್ತಾ ಸೆಟಲ್ವಾಡ್ “ಒಂದು ಗೌರಿಯನ್ನು ಹತ್ಯೆ ಮಾಡಿ ಸಾವಿರಾರು ಗೌರಿಯರ ಹುಟ್ಟಿಗೆ ಕಾರಣರಾಗಿದ್ದಾರೆ” ಎಂದರು. ಸಭೆಯಲ್ಲಿ ಕಮ್ಯುನಿಸ್ಟ್ ಪಕ್ಷದ ನಾಯಕ ಸೀತಾರಾಂ ಯೆಚೂರಿ, ಮೇಧಾ ಪಾಟ್ಕರ್, ಮುರುಘಾ ಮಠದ ಸ್ವಾಮೀಜಿಗಳು, ಜಿಗ್ನೇಶ್ ಮೆವಾನಿ, ಸಿ ಎಸ್ ದ್ವಾರಕನಾಥ್, ಸಾಹಿತಿ ದೇವನೂರು ಮಹದೇವಪ್ಪ, ಸಿದ್ಧಾರ್ಥ ವರದರಾಜನ್, ದೊರೆಸ್ವಾಮಿ, ನಿಡುಮಾಮಿಡಿ ಸ್ವಾಮೀಜಿ, ಸ್ವಾಮಿ ಅಗ್ನಿವೇಶ್, ಪಿ ಸಾಯಿನಾಥ್, ನಿಜಗುಣಾನಂದ ಸ್ವಾಮೀಜಿ, ಇಂದಿರಾ ಲಂಕೇಶ್ ಮತ್ತು ಕವಿತಾ ಲಂಕೇಶ್ ಸೇರಿದಂತೆ ಇತರೆ ಹಲವು ಗಣ್ಯರು ಪಾಲ್ಗೊಂಡಿದ್ದರು. ರಾಲಿಯಲ್ಲಿ ರಾಜ್ಯದ ಹಲವಾರು ರಾಜಕೀಯ ಪಕ್ಷಗಳು, ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ಮತ್ತು ಶಾಲಾ ವಿದ್ಯಾರ್ಥಿಗಳೂ ಪಾಲ್ಗೊಂಡಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ “ಗೌರಿ ಲಂಕೇಶ್” ಪತ್ರಿಕೆಯ ವಿಶೇಷ ಸಂಚಿಕೆಯೊಂದನ್ನು ಹೊರ ತಂದಿದ್ದು, ಅದರಲ್ಲಿ ‘ನನ್ನ ದನಿ ಅಡಗುವುದಿಲ್ಲ‘ ಎಂಬ ಒಕ್ಕಣೆ ಅರ್ಥಪೂರ್ಣವಾಗಿತ್ತು
ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸೆಂಟ್ರಲ್ ಕಾಲೇಜಿನವರೆಗಿನ ಪ್ರತಿಭಟನಾ ಸಮಾವೇಶದ ಒಟ್ಟು ದೃಶ್ಯಗಳ ಒಂದು ನೋಟ
