ವರದಿಗಾರ-ಬೆಂಗಳೂರು: ವೈಚಾರಿಕ ಅಸಹನೆ ಮತ್ತು ಧಾರ್ಮಿಕ ದ್ವೇಷದ ಭಾಗವಾಗಿ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆಯಾಗಿದೆ. ಮತ್ತು ಗೌರಿ ಹತ್ಯೆ ಹಿಂದಿನ ನೈಜತೆಯನ್ನು ಮುಚ್ಚಿ ಹಾಕವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿರುವುದು ಖೇಧಕರ. ನಕ್ಸಲೀಯರು ಗೌರಿ ಲಂಕೇಶ್ ರನ್ನು ಹತ್ಯೆ ಮಾಡುವುದಕ್ಕೆ ಯಾವುದೇ ಕಾರಣಗಳಿಲ್ಲ. ಗೌರಿ ಹತ್ಯೆಯ ಹಿಂದೆ ಸಂಘ ಪರಿವಾರದ ಕೈವಾಡವಿರುವ ಸಾಧ್ಯತೆಗಳು ದಟ್ಟವಾಗಿವೆ ಎಂದು ನಕ್ಸಲ್ ಚಳವಳಿಯಿಂದ ಹೊರಬಂದಿರುವ ನೂರ್ ಶ್ರೀಧರ್ ಹೇಳಿದ್ದಾರೆ.
ಅವರು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಗೌರಿಯನ್ನು ಅತಿಯಾಗಿ ದ್ವೇಷಿಸುತ್ತಿದ್ದವರೇ ಈ ಹತ್ಯೆ ಮಾಡಲು ಸಾಧ್ಯ. ಅವರನ್ನು ಸಂಘ ಪರಿವಾರದವರು ಶತ್ರುಗಳಂತೆ ಭಾವಿಸಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸುತ್ತಿದ್ದ ರೀತಿಯೇ ಇದಕ್ಕೆ ಸಾಕ್ಷಿ. ವೈಚಾರಿಕ ಭಿನ್ನಾಭಿಪ್ರಾಯದ ಕಾರಣದಿಂದಾಗಿಯೇ ಹತ್ಯೆಯಾಗಿರುವುದು ಸ್ಪಷ್ಟ. ಆದರೀಗ ತನಿಖೆಯ ದಿಕ್ಕು ತಪ್ಪಿಸಲು ನಕ್ಸಲರತ್ತ ಬೊಟ್ಟು ಮಾಡಲಾಗುತ್ತಿದೆ ನೂರ್ ಶ್ರೀಧರ್ ಹೇಳಿದ್ದಾರೆ.
ತನಿಖೆಯು ಸಂಘ ಪರಿವಾರದ ಕಚೇರಿಯಿಂದ ಆರಂಭವಾಗಬೇಕು. ಕೆಲ ಮಾಧ್ಯಮಗಳು ಮತ್ತು ಕೇಂದ್ರ ಸಚಿವರು ನಕ್ಸಲರೇ ಈ ಕೃತ್ಯ ಮಾಡಿದ್ದಾರೆ ಎಂದು ತೀರ್ಮಾನಿಸಿರುವಂತೆ ಪ್ರತಿಕ್ರಿಯಿಸುತ್ತಿರುವುದು ಖಂಡನಾರ್ಹ. ನಕ್ಸಲ್ ಚಳವಳಿಯ ಇತಿಹಾಸ ಮತ್ತು ಗೌರಿಯೊಂದಿಗೆ ನಕ್ಸಲರಿಗಿದ್ದ ಒಡನಾಟ ಎಂತಹದ್ದು ಎಂಬುದನ್ನು ಅರಿತು ಮಾತನಾಡಬೇಕು ಎಂದು ಹೇಳಿದ್ದಾರೆ.
ಗೌರಿ ಅವರ ಹತ್ಯೆಯನ್ನು ಬಲಪಂಥೀಯರು ಮಾಡಿದ್ದಾರೆ ಎಂಬುದು ಸಾಬೀತಾದರೆ, ನಕ್ಸಲರೇ ಹತ್ಯೆ ಮಾಡಿದ್ದಾರೆಂದು ಪ್ರತಿಪಾದಿಸುತ್ತಿರುವ ಮಾಧ್ಯಮ ಮತ್ತು ಸಚಿವರುಗಳನ್ನೂ ಆರೋಪಿಗಳೆಂದು ಪರಿಗಣಿಸಬೇಕು ಎಂದು ಅವರು ಸರಕಾರದೊಂದಿಗೆ ಒತ್ತಾಯಿಸಿದ್ದಾರೆ.
