ವರದಿಗಾರ – ಸಿರ್ಸಾ: ಸ್ವಯಂ ಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್’ನ ಮುಖ್ಯ ಕಚೇರಿಯಲ್ಲಿ ನಡೆದ ಶೋಧದ ನಂತರ ಆಘಾತಕಾರಿ ಮಾಹಿತಿಗಳು ಹೊರಬಂದಿವೆ.
ಶೋಧ ಕಾರ್ಯ ನಡೆಸಿದ ಭದ್ರತಾ ಪಡೆಗಳು ಈತನ ಖಾಸಗಿ ನಿವಾಸದಿಂದ ಸಾಧ್ವಿಗಳ ನಿವಾಸಕ್ಕಿರುವ ಸುರಂಗ ಮಾರ್ಗವನ್ನು ಪತ್ತೆ ಹಚ್ಚಿದ್ದಾರೆ. ಇದಲ್ಲದೆ ಮುಖ್ಯ ಕಚೇರಿಯಿಂದ 5 ಕಿಲೋಮೀಟರ್ ದೂರದವರೆಗೆ ಕೊಂಡೊಯ್ಯುವ ಇನ್ನೊಂದು ಪಾರುಮಾರ್ಗವನ್ನೂ ಪತ್ತೆ ಹಚ್ಚಲಾಗಿದೆ.
ದೇರಾ ಮುಖ್ಯ ಕಚೇರಿಯ ಆವರಣದಲ್ಲಿದ್ದ ಆಸ್ಪತ್ರೆಯೊಂದರ ಮೇಲೆ ಅಕ್ರಮ ಸ್ಕಿನ್ ಬ್ಯಾಂಕ್, ಅಬಾರ್ಷನ್ ಕ್ಲಿನಿಕ್, ಆಂಗ ದಾನ ಯೋಜನೆಗಳನ್ನು ನಡೆಸಿದ ಆರೋಪದಲ್ಲಿ ಕೇಸು ದಾಖಲಿಸಲಾಗಿದೆ.
ಇದಲ್ಲದೆ ದೇರಾ ಮುಖ್ಯ ಕಚೇರಿಯಿಂದ ಅಕ್ರಮ ಸ್ಪೋಟಕಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಶೋಧ ಪ್ರಾರಂಬಿಸಿದ ಎರಡೇ ಘಂಟೆಗಳೊಳಗೆ ತನಿಖಾಧಿಕಾರಿಗಳು ನಿಷೇಧಿತ ನೋಟುಗಳನ್ನೊಳಗೊಂಡಂತೆ ಭಾರೀ ಪ್ರಮಾಣದ ನಗದನ್ನು ಪತ್ತೆ ಹಚ್ಚಿದ್ದರು.
ದೇರಾ ಮುಖ್ಯ ಕಚೇರಿಯೊಳಗಿರುವ ಸಪ್ತ ತಾರಾ ಎಂಎಸ್ಜಿ ರೆಸಾರ್ಟ್ ಹಾಗೂ ತಾಜ್ ಮಹಲ್, ಐಫಿಲ್ ಟವರ್, ಕ್ರೆಮ್ಲಿನ್, ಡಿಸ್ನಿ ವರ್ಲ್ಡ್’ಗಳ ಪ್ರತಿಕೃತಿಗಳು ರಾಮ್ ರಹೀಮ್ ಸಿಂಗ್’ನ ಆಸ್ತಿಯ ಹಾಗೂ ಬಲದ ಬಗ್ಗೆ ತಿಳಿಸುತ್ತಿವೆ.
ರಾಮ್ ರಹೀಮ್ ಸಿಂಗ್ ಕಳೆದ ತಿಂಗಳಿಂದ ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಯನುಭವಿಸುತ್ತಿದ್ದಾನೆ.
