ವರದಿಗಾರ-ಚಿಕ್ಕಮಗಳೂರು: ಸಾಮಾಜಿಕ ಹೋರಾಟಗಾರ್ತಿ, ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ರವರನ್ನು ದುಷ್ಕರ್ಮಿಗಳು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಗುಂಡಿಕ್ಕಿ ಕೊಲ್ಲುವ ಮೂಲಕ ಸತ್ಯದ ಧ್ವನಿಯನ್ನು ಮರೆಮಾಚುವ ಷಡ್ಯಂತ್ರವನ್ನು ಮುಂದುವರಿಸಿದ್ದಾರೆ. ಭಾರತ ಮಾತ್ರವಲ್ಲದೆ ವಿವಿಧ ರಾಷ್ಟ್ರಗಳಿಂದ ಗೌರಿ ಲಂಕೇಶ್ ರವರ ಹತ್ಯೆಗೆ ಖಂಡನೆ ವ್ಯಕ್ತವಾಗಿದ್ದು, ಆರೋಪಿಗಳನ್ನು ಬಂಧಿಸುವಂತೆ ಸರಕಾರವನ್ನು ಒತ್ತಾಯಿಸಲಾಗಿದೆ. ತೆರೆಮರೆಯಲ್ಲಿ ಹತ್ಯೆಯ ಪ್ರಕರಣವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನಗಳೂ ಮುಂದುವರಿಯುತ್ತಿದೆ.
ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಗೌರಿ ಲಂಕೇಶ್ ಹತ್ಯೆಯಲ್ಲಿ ನಕ್ಸಲರ ಕೈವಾಡವಿರುವ ಸಾಧ್ಯತೆಯಿಲ್ಲ ಎಂದು ಹೇಳಿದ್ದಾರೆ.
ನಕ್ಸಲರ ಶರಣಾಗತಿಯನ್ನು ಕಟ್ಟರ್ ನಕ್ಸಲರು ವಿರೋಧಿಸುತ್ತಾರೆ ಎಂಬುವುದು ಸರಿಯಲ್ಲ. ಜಿಲ್ಲೆಯಲ್ಲಿ ಇದುವರೆಗೂ ಬಹಳಷ್ಟು ನಕ್ಸಲರು ಶರಣಾಗಿದ್ದು, ಅವರ ಮೇಲಿದ್ದ ಪ್ರಕರಣವನ್ನು ಪರಿಹರಿಸಿಕೊಂಡು ಸಹಜ ಜೀವನ ನಡೆಸುತ್ತಿದ್ದಾರೆ ಹಾಗೂ ಶರಣಾಗತಿಗೆ ಗೌರಿ ಲಂಕೇಶ್ ಆಳವಾದ ಪ್ರಯತ್ನ ನಡೆಸುತ್ತಿದ್ದರು ಎಂದು ಅಣ್ಣಾಮಲೈ ಹೇಳಿದ್ದಾರೆ.
ನಕ್ಸಲರ ಶರಣಾಗತಿಯ ಹಿನ್ನಲೆಯಲ್ಲಿ ವಿರೋಧಿ ನಕ್ಸಲ್ ತಂಡ ಹತ್ಯೆಯ ಕೃತ್ಯ ಮಾಡಲು ಸಾಧ್ಯವಿಲ್ಲ. ಮೇಲ್ನೋಟಕ್ಕೆ ಗೌರಿ ಲಂಕೇಶ್ ಹತ್ಯೆಗೂ ನಕ್ಸಲರಿಗೂ ಸಂಬಂಧವಿಲ್ಲ. 2014ರಲ್ಲಿ ನಕ್ಸಲರಿಗಾಗಿ ಜಾರಿಗೆ ತಂದ ನೂತನ ಪ್ಯಾಕೇಜ್ ನಿಂದ ಹಲವರು ಶರಣಾಗಿದ್ದಾರೆ. ಇತ್ತೀಚಿನ ತಿಂಗಳಲ್ಲಿ 7 ನಕ್ಸಲರು ಶರಣಾಗಿದ್ದಾರೆ ಮತ್ತು ಎಲ್ಲರೂ ಜಾಮೀನಿನಿಂದ ಹೊರ ಬಂದಿದ್ದಾರೆ. ರಾಜ್ಯದಲ್ಲಿ ಇನ್ನೂ ನಾಲ್ಕೈದು ನಕ್ಸಲರರಿದ್ದು, ಅವರನ್ನು ಶರಣಾಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಇದೇ ಸಂದರ್ಭ ಅಣ್ಣಾಮಲೈ ಹೇಳಿದ್ದಾರೆ.
