ವರದಿಗಾರ-ಮಲೇಷಿಯಾ: ಇಲ್ಲಿನ ಕೋಸ್ಟ್ ಗಾರ್ಡ್ ಗಳು ರೋಹಿಂಗ್ಯಾ ಮುಸ್ಲಿಮರನ್ನು ಹಿಂದಕ್ಕೆ ಕಳುಹಿಸುವುದಿಲ್ಲ ಹಾಗೂ ಅವರಿಗೆ ತಾತ್ಕಾಲಿಕ ವಸತಿ ಸೌಲಭ್ಯವನ್ನು ಒದಗಿಸಲು ಸನ್ನದ್ಧವಾಗಿದೆ ಎಂದು ಮಲೇಷಿಯಾದ ಮಾರಿಟೈಮ್ ಏಜೆನ್ಸಿಯ ಮುಖ್ಯಸ್ಥರು ಶುಕ್ರವಾರ ತಿಳಿಸಿದ್ದಾರೆ.
ಮಯನ್ಮಾರಿನಲ್ಲಿ ರೋಹಿಂಗ್ಯಾ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯವು ಹೆಚ್ಚಾಗಿರುವ ಪ್ರಸಕ್ತ ಸಂದರ್ಭದಲ್ಲಿ ರೋಹಿಂಗ್ಯಾ ಮುಸ್ಲಿಮರು ಮುಂದಿನ ವಾರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಲೇಷಿಯಾದತ್ತ ಧಾವಿಸುವ ಸಾಧ್ಯತೆಯಿದೆ.
ಮಲೇಷಿಯಾದತ್ತ ಧಾವಿಸುವ ರೋಹಿಂಗ್ಯಾ ಮುಸ್ಲಿಮರಿಗೆ ಇದುವರೆಗೆ ಅಗತ್ಯ ವಸ್ತುಗಳನ್ನು ನೀಡಿ ಕಳುಹಿಸಲಾಗುತ್ತಿತ್ತು, ಆದರೆ ಮಾನವೀಯತೆಯ ದೃಷ್ಟಿಯಿಂದ ಇನ್ನು ಮುಂದೆ ಆ ರೀತಿ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಮಾರಿಟೈಂ ಏಜೆನ್ಸಿ ಮುಖ್ಯಸ್ಥ ಝುಲ್ಕಿಫ್ಲಿ ಅಬೂಬಕ್ಕರ್ ತಿಳಿಸಿದ್ದಾರೆ.
ಮಾನ್ಸೂನಿನ ಕಾರಣ ಇನ್ನು ಕೆಲವು ತಿಂಗಳುಗಳಿಗೆ ಕಡಲ ದಾರಿ ತೀರಾ ಅಪಾಯಕಾರಿಯಾಗಿದೆ.
ಮುಸ್ಲಿಂ ಬಾಹುಳ್ಯ ರಾಷ್ಟ್ರವಾದ ಮಲೇಷಿಯಾ ಈಗಾಗಲೇ ಒಂದು ಲಕ್ಷ ರೋಹಿಂಗ್ಯಾ ನಿರಾಶ್ರಿತರನ್ನು ಸ್ವಾಗತಿಸಿದೆ ಹಾಗೂ ಹೊಸದಾಗಿ ಬರುವ ನಿರಾಶ್ರಿತರಿಗೆ ತಾತ್ಕಾಲಿಕ ವಸತಿ ಸೌಲಭ್ಯ ಒದಗಿಸುವ ಭರವಸೆ ನೀಡುವ ಮೂಲಕ ಹೃದಯ ವೈಶಾಲ್ಯತೆ ತೋರ್ಪಡಿಸಿದೆ.
ಭಾರತದಂತೆಯೇ ಮಲೇಷಿಯಾ ಕೂಡ ವಿಶ್ವ ಸಂಸ್ಥೆಯ ನಿರಾಶ್ರಿತರ ಸಮಾವೇಶದಲ್ಲಿ ಸಹಿ ಮಾಡಿಲ್ಲದ ಕಾರಣ ನಿರಾಶ್ರಿತರನ್ನು ಅಕ್ರಮ ವಲಸಿಗರೆಂದೇ ಪರಿಗಣಿಸುತ್ತಿದೆ.
ಇದೇ ವೇಳೆ ಥೈಲ್ಯಾಂಡ್, ಮಯನ್ಮಾರಿನಿಂದ ಪಲಾಯನಗೈಯ್ಯುತ್ತಿರುವ ರೋಹಿಂಗ್ಯಾ ಮುಸ್ಲಿಮರನ್ನು ಸ್ವೀಕರಿಸಲು ಸಿದ್ಧತೆ ನಡೆಸುತ್ತಿರುವುದಾಗಿ ತಿಳಿಸಿದೆ.
