ಖ್ಯಾತ ಪತ್ರಕರ್ತೆ ಮತ್ತು ವಿಚಾರವಾದಿಯಾಗಿದ್ದಂತಹ ಗೌರಿ ಲಂಕೇಶರ ಹತ್ಯೆಯ ಕುರಿತಂತೆ ಸುಳ್ಳು ಸುದ್ದಿಗಳಿಗಾಗಿಯೇ ಪ್ರಚಾರದಲ್ಲಿರುವ ಅರ್ನಾಬ್ ಗೋ ಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿಯ ವರದಿಗಾರನನ್ನು ಹೋರಾಟಗಾರ್ತಿ ಶೆಹ್ಲಾ ರಶೀದ್, ತಾವು ನಡೆಸುತ್ತಿದ್ದ ಪ್ರತಿಭಟನಾ ಸಭೆಯಿಂದ ಹೊರದಬ್ಬಿದ ನಂತರ, ಇದೀಗ ಸ್ವತಃ ರಿಪಬ್ಲಿಕ್ ಟಿವಿಯ ಪತ್ರಕರ್ತೆಯಾಗಿದ್ದ ಸುಮನಾ ನಂದಿಯವರು, ರಿಪಬ್ಲಿಕ್ ಟಿವಿಯಲ್ಲಿ ಗೌರಿ ಲಂಕೇಶ್ ಹತ್ಯೆಯ ಕುರಿತಂತೆ ಟಿವಿಯು ಅನಗತ್ಯವಾದಂತಹಾ ಸುಳ್ಳು ಸುದ್ದಿಗಳನ್ನು ಪ್ರಸಾರಿಸುತ್ತಾ ತನಿಖೆಯ ದಿಕ್ಕು ತಪ್ಪಿಸುತ್ತಿದೆ. ಮಾತ್ರವಲ್ಲ ಕೊಲೆಗಡುಕರಿಗೆ ಮತ್ತು ಅದರ ಸಂಚುಕೋರರಿಗೆ ನೆರವಾಗುತ್ತಿದೆ ಎಂದು ಆರೋಪಿಸಿ ತನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದಾರೆ. ತನ್ನ ರಾಜೀನಾಮೆ ಪತ್ರದಲ್ಲಿ ಸುಮನಾ ಅವರು, ಅರ್ನಾಬ್ ಗೋಸ್ವಾಮಿಯ ಪತ್ರಿಕೋಧ್ಯಮದಲ್ಲಿ ಪತ್ರಿಕಾ ಧರ್ಮವೆಂಬುವುದೇ ಇಲ್ಲ, ಅದೇನಿದ್ದರೂ ಜನ ವಿರೋಧಿ ಸರ್ಕಾರವೊಂದರ ಪರ ತನ್ನ ನಿಲುವುಗಳನ್ನು ಪ್ರಕಟಿಸುತ್ತಿದೆ ಮತ್ತು ಆ ಸರ್ಕಾರದ ವಕ್ತಾರನಂತೆ ಕಾರ್ಯಾಚರಿಸುತ್ತಿದೆ ಎಂದು ಕಟುವಾಗಿ ಟೀಕಿಸಿದ್ದಾರೆ. ಈ ಕುರಿತು ತನ್ನ ಫೇಸ್’ಬುಕ್ಕಿನಲ್ಲಿ ವಿವರವಾಗಿ ಬರೆದಿರುವ ಸುಮನಾ ನಂದಿ, ಅದರ ಅನುವಾದ ಈ ಕೆಳಗಿನಂತಿದೆ.
“ಮಾಧ್ಯಮವೃತ್ತಿಯ ನನ್ನ ಸಣ್ಣ ಅವಧಿಯ ಪಯಣದಲ್ಲಿ ನಾನು ಕೆಲಸ ಮಾಡಿದ ಸಂಸ್ಥೆಗಳ ಕುರಿತು ಯಾವತ್ತೂ ಹೆಮ್ಮೆ ಇಟ್ಟುಕೊಂಡವಳು. ಆದರೆ ಇವತ್ತು ನನಗೆ ನಾಚಿಕೆಯೆನಿಸುತ್ತಿದೆ. ಒಂದು ‘ ಸ್ವತಂತ್ರ‘ ಮಾಧ್ಯಮ ಸಂಸ್ಥೆ ದರಿದ್ರ ಸರ್ಕಾರದ ಪರವಾಗಿ ಬ್ಯಾಟಿಂಗ್ ಮಾಡುತ್ತಿದೆ. ಮತ್ತು ಅದನ್ನು ಲಜ್ಜೆಯಿಲ್ಲದೆ ಬಹಿರಂಗವಾಗೇ ಮಾಡುತ್ತಿದೆ. ಪದೇ ಪದೇ ಬಿಜೆಪಿ-ಆರ್ ಎಸ್ ಎಸ್ ಕೇಡರುಗಳ ಕೊಲೆ ಬೆದರಿಕೆಯ ನಂತರ ಒಬ್ಬ ಪತ್ರಕರ್ತೆಯ ಕೊಲೆಯಾಗಿದೆ, ನೀವು ಕೊಲೆಗಡುಕರನ್ನು ಪ್ರಶ್ನಿಸುವ ಬದಲು ವಿರೋಧ ಪಕ್ಷದವರನ್ನು ಪ್ರಶ್ನಿಸುತ್ತಿದ್ದೀರಿ. ಪತ್ರಿಕಾ ಮೌಲ್ಯವೆಲ್ಲಿ ಹೋಯಿತು? ನಾವು ಎತ್ತ ಸಾಗುತ್ತಿದ್ದೇವೆ? ಕೆಲವು ಪತ್ರಕರ್ತರಂತೂ ಈ ಭೀಕರ ಕೊಲೆಯನ್ನು ಸಂಭ್ರಮಿಸುತ್ತಿದ್ದಾರೆ; ಆಕೆ ಇದನ್ನು ತನ್ನ ಕೈಯಾರೆ ಮಾಡಿಕೊಂಡಳೆಂದು. ನಿಜ, ಇಂಥದ್ದು ಸೌದಿ ಅರೇಬಿಯಾ, ಉತ್ತರ ಕೊರಿಯಾಗಳಲ್ಲಿ ನಡೆಯುತ್ತವೆ. ನಾವಾದರೂ ಏನು ಕಡಿಮೆ? ಇನ್ನೇನು ಕೆಲವೇ ಸಾವುಗಳಿಗೆ ಅವರನ್ನು ಸರಿಗಟ್ಟಲಿದ್ದೇವೆ. ನಾಲ್ಕನೇ ಸ್ಥಂಭ ತನ್ನನ್ನು ತಾನು ಮಾರಿಕೊಂಡಿರುವಾಗ ನಮ್ಮ ಸಮಾಜ ಎಲ್ಲಿಗೆ ಹೋಗುತ್ತದೆ?
ಮೇಡಂ, ನಾವು ನಿಮ್ಮನ್ನು ಸೋಲಿಸಿದ್ದೇವೆ. ಒಂದು ವಿಷಯವಂತೂ ನನಗೆ ಖಚಿತವಾಗಿ ಗೊತ್ತು, ನೀವು ನಮಗಿಂತ ಉನ್ನತ ಸ್ಥಾನದಲ್ಲಿದ್ದೀರಿ.
ಮರೆತ ಮಾತು: ಇದು ಎಷ್ಟು ಔಚಿತ್ಯದ್ದೋ ಅಲ್ಲವೋ, ಇದರ ಮಹತ್ವ ಎಷ್ಟು ಮುಖ್ಯವಾದದ್ದೋ ಅಲ್ಲವೋ ನನಗೆ ಗೊತ್ತಿಲ್ಲ, ನಾನು ನನ್ನ ಬಯೋಡೇಟಾ, ಸಾಮಾಜಿಕ ಜಾಲತಾಣಗಳಲ್ಲಿ ರಿಪಬ್ಲಿಕ್ ಟಿವಿಯ ಉದ್ಯೋಗಿ ಎಂದು ಹಾಕಿಕೊಳ್ಳದೇ ಇರಲು ನಿರ್ಧರಿಸಿದ್ದೇನೆ. ನಾನು ಈ ದರಿದ್ರ ಸಂಸ್ಥೆಯೊಂದಿಗಿನ ಈವರೆಗಿನ ಸಂಬಂಧಕ್ಕಾಗಿ ಪಶ್ಚಾತ್ತಾಪ ಪಡುತ್ತೇನೆ.
ಇದು ಈ ದೇಶದ ಸೌಂದರ್ಯವನ್ನು ಉಳಿಸುವ ಪರಿ. ಇನ್ನೂ ಅತ್ಮಸಾಕ್ಷಿ ಉಳಿಸಿಕೊಂಡವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ“
