ವರದಿಗಾರ: ಹರಿಯಾಣದ ಪಂಚಕುಲಾದಲ್ಲಿ ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ದೋಷಿಯೆಂದು ಸಿಬಿಐ ನ್ಯಾಯಲಯವು ತೀರ್ಪಿತ್ತ ಬಳಿಕ ನಡೆದ ಹಿಂಸಾಚಾರಕ್ಕೆ ಸುಪಾರಿ ನೀಡಲಾಗಿತ್ತೇ??
ಹೀಗೂ ಒಂದು ಆರೋಪ ಕೇಳಿ ಬರುತ್ತಿದೆ. ಹರಿಯಾಣ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಆಗಸ್ಟ್ 25ರಂದು ಸಿಬಿಐ ವಿಶೇಷ ನ್ಯಾಯಾಲಯವು ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ದೋಷಿಯೆಂದು ತೀರ್ಪು ನೀಡಿತ್ತು. ತೀರ್ಪಿನ ಬಳಿಕ ಭುಗಿಲೆದ್ದ ಹಿಂಸಾಚಾರಕ್ಕೆ 38 ಜನರು ಬಲಿಯಾಗಿದ್ದರು ಹಾಗೂ 264 ಮಂದಿ ಗಾಯಗೊಂಡಿದ್ದರು.
ಪೊಲೀಸ್ ಮೂಲಗಳ ಪ್ರಕಾರ, ಹಿಂಸಾಚಾರಕ್ಕಾಗಿ ಬಂಧಿಸಲ್ಪಟ್ಟ ದೇರಾ ಕಾರ್ಯಕರ್ತರನ್ನು ತನಿಖೆಗೊಳಪಡಿಸಿದಾಗ, ಹಿಂಸಾಚಾರಕ್ಕಾಗಿ ದೇರಾ ಸಚ್ಚಾ ಸೌದಾದಿಂದ 5 ಕೋಟಿ ರೂಪಾಯಿಗಳ ಸುಪಾರಿ ನೀಡಲಾಗಿತ್ತು ಎನ್ನುವ ಅಂಶವು ಬೆಳಕಿಗೆ ಬಂದಿದೆ.
ಹರಿಯಾಣ ಪೊಲೀಸರು ಕಳೆದ ವಾರ 5 ದೇರಾ ಕಾರ್ಯಕರ್ತರನ್ನು ಬಂಧಿಸಿದ್ದರು ಹಾಗೂ ಇವರಿಂದ 38 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ನಿಂದ ಹರಿಯಾಣದ ಸಿರ್ಸಾದಲ್ಲಿರುವ ದೇರಾ ಮುಖ್ಯ ಕಚೇರಿಯ ತಪಾಸಣೆ ನಡೆಸಲು ಪೊಲೀಸರಿಗೆ ಈಗಾಗಲೇ ಅನುಮತಿ ದೊರಕಿದೆ.
ಹರಿಯಾಣದ ಡಿಜಿಪಿ ಬಿ ಎಸ್ ಸಂಧು ರ ಪ್ರಕಾರ ಹಿಂಸಾಚಾರಕ್ಕಾಗಿ ಸುಪಾರಿ ನೀಡಿರುವುದರ ಬಗ್ಗೆ ತನಿಖೆಗಾಗಿ ಪೊಲೀಸರು ದೇರ ಆಡಳಿತ ಮಂಡಳಿಯ ಚಮ್ ಕೌರ್ ಸಿಂಗ್ ಹಾಗೂ ನೈನ್’ರ ಹುಡುಕಾಟದಲ್ಲಿದ್ದಾರೆ.
