ವರದಿಗಾರ ಮಂಗಳೂರು :ಬಿಜೆಪಿ ಯುವ ಮೋರ್ಚಾ ಜಿಲ್ಲಾಡಳಿತದ ಅನುಮತಿ ಇಲ್ಲದೆಯೇ ಕಾನೂನು ಉಲ್ಲಂಘಿಸಿ ಮಂಗಳೂರು ಚಲೋ ಕಾರ್ಯಕ್ರಮವನ್ನು ಅಂಬೇಡ್ಕರ್ ವೃತ್ತದ ಬಳಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ನಡೆಸುತ್ತಿದ್ದುದನ್ನು ತಮ್ಮ ವಿ4 ಚಾನೆಲಿಗೆ ವರದಿ ಮಾಡುತ್ತಿದ್ದ ಪತ್ರಕರ್ತ ಕಲೀಂ ಸೆರಾಜೆಯ ಕ್ಯಾಮರಾ ಕಿತ್ತೆಸೆದು, ಮೆಮೊರಿ ಕಾರ್ಡ್ ಬಿಸಾಕಿ ಅವರ ಮೇಲೆ ದೈಹಿಕ ಹಲ್ಲೆ ಯತ್ನಿಸಿ, ಬಿಜೆಪಿ ಕಾರ್ಯಕರ್ತರು ಅಮಾನವೀಯವಾಗಿ ವರ್ತಿಸಿದ್ದಾರೆ. ಇದನ್ನು ಎಸ್ ಡಿ ಪಿ ಐ ಕಟು ಶಬ್ದಗಳಲ್ಲಿ ಖಂಡಿಸುತ್ತದೆ.
ಅದೇ ರೀತಿ ಶರತ್ ಹತ್ಯೆಯ ಆರೋಪಿ ಎನ್ನಲಾದ ಖಲಂದರ್ ಮನೆಗೆ ಪೊಲೀಸರು ತನಿಖೆಯ ನೆಪದಲ್ಲಿ ನುಗ್ಗಿ, ಮನೆಯೊಳಗೆ ಪವಿತ್ರ ಕುರ್ ಆನ್ ನನ್ನು ಅಪವಿತ್ರ ಗೊಳಿಸಿ ಧಾಂದಲೆ ನಡೆಸಿದ ವರದಿಯನ್ನು ಪ್ರಕಟಿಸಿದ್ದ ಎನ್ನುವ ಕಾರಣಕ್ಕೆ ಬಂಟ್ವಾಳ ಪೊಲೀಸರು ವಾರ್ತಾ ಭಾರತಿ ಪತ್ರಿಕೆಯ ವರದಿಗಾರನ್ನು ಬಂಧಿಸಿರುವ ಘಟನೆ ನಡೆದಿದೆ. ಈಗಾಗಲೇ ಮಾನವ ಹಕ್ಕು ಸಂಘಟನೆ ನಡೆಸಿದ ಸತ್ಯಶೋಧನಾ ವರದಿಯಲ್ಲಿ ಪೊಲೀಸರು ನಡೆಸಿದ ಕ್ರೌರ್ಯಗಳು ಬಹಿರಂಗಗೊಂಡಿದೆ ಮಾತ್ರವಲ್ಲದೆ ಖಲಂದರ್ ಕುಟುಂಬದವರು ಪೊಲೀಸರು ನಡೆಸಿದ ದಾಂಧಲೆಯ ಬಗ್ಗೆ ಸ್ಪಷ್ಟವಾಗಿ ಈಗಲೂ ಹೇಳುತ್ತಿರುವಾಗ, ಅದನ್ನು ವರದಿ ಮಾಡಿದ ಕಾರಣಕ್ಕೆ ಬಂಧಿಸಿರುವುದು ಪತ್ರಿಕಾ ಸ್ವಾತಂತ್ರ್ಯವನ್ನು ಕಸಿಯುವ ಬೆದರಿಕೆಯಾಗಿದೆ. ಈ ಎರಡು ಘಟನೆಯನ್ನು ಎಸ್ಡಿಪಿಐ ದ.ಕ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಮಾಧ್ಯಮ ವರದಿಗಾರನಿಗೆ ಹಲ್ಲೆ ನಡೆಸಲು ಯತ್ನಿಸಿ ಕ್ರೌರ್ಯ ಮೆರೆದ ಬಿಜೆಪಿ ಕಾರ್ಯಕರ್ತರ ಮೇಲೆ ಕಾನೂನು ಕ್ರಮ ಜರಗಿಸಬೇಕೆಂದು ಎಸ್ ಡಿ ಪಿ ಐ ಆಗ್ರಹಿಸುತ್ತದೆ. ಅದೇ ರೀತಿ ಘಟನೆಯ ನೈಜ ವರದಿಯನ್ನು ಮಾಡಿದ್ದಕ್ಕಾಗಿ ಓರ್ವ ಪತ್ರಕರ್ತನನ್ನು ಪೊಲೀಸರು ಬಂಧಿಸುವುದಾದರೆ, ವಸ್ತುನಿಷ್ಟ ವರದಿಗಳನ್ನು ಜನರೆದುರು ತೆರೆದಿಡುವುದು ಅಪರಾಧವೆನ್ನುವ ತುರ್ತು ಪರಿಸ್ಥಿತಿಯಲ್ಲಿ ನಾವಿದ್ದೇವೆಯೇ ಎನ್ನುವುದನ್ನು ಬಂಟ್ವಾಳ ಪೊಲೀಸರು ಸ್ಪಷ್ಟಪಡಿಸಬೇಕಾಗಿದೆ ಎಂದು ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಆಗ್ರಹಿಸಿದ್ದಾರೆ
