ಮುಂಬೈ – ವರದಿಗಾರ: ಮುಂಬೈ ನಗರವನ್ನು ನಡುಗಿಸಿದ್ದ 1993 ರ ಸರಣಿ ಸ್ಪೋಟದ ಆರೋಪಿಗಳಾದ ಅಬು ಸಲೇಮ್ ಹಾಗೂ ಇತರ ನಾಲ್ವರ ಶಿಕ್ಷೆಯ ಪ್ರಮಾಣವನ್ನು ಇಂದು ಟಾಡಾ ಕೋರ್ಟ್ ತೀರ್ಮಾನಿಸಲಿದೆ. ಜೂನ್ 16ರಂದು ಟಾಡಾ ಕೋರ್ಟ್ ಆರು ಜನರನ್ನು ದೋಷಿಗಳೆಂದು ತೀರ್ಪು ನೀಡಿ ಓರ್ವನನ್ನು ದೋಷಮುಕ್ತಗೊಳಿಸಿತ್ತು. ಅಬು ಸಲೇಮ್, ಮುಸ್ತಫಾ ದೊಸ್ಸಾ, ಫಿರೋಝ್ ಖಾನ್, ಮಹಮ್ಮದ್ ತಾಹಿರ್, ಕರೀಮುಲ್ಲಾ ಖಾನ್ ಹಾಗೂ ರಿಯಾಝ್ ಅಹ್ಮದ್ ಸಿದ್ದೀಕ್’ನನ್ನು ದೋಷಿಗಳೆಂದು ತೀರ್ಪು ನೀಡಿದ ಕೋರ್ಟ್ ಅಬ್ದುಲ್ ಖಯ್ಯೂಮ್ ನನ್ನು ದೋಷಮುಕ್ತಗೊಳಿಸಿತು. ಜೂನ್ 28ರಂದು ಮುಸ್ತಫಾ ದೊಸ್ಸಾ ಹೃದಯಾಘಾತದಿಂದ ಮೃತಪಟ್ಟನು. ಇದು ವಿಚಾರಣೆಯ ಎರಡನೆಯ ಭಾಗವಾಗಿದೆ. ಮೊದಲ ವಿಚಾರಣೆಯ ಅಂತಿಮ ಘಟ್ಟದಲ್ಲಿ ಬಂಧಿಸಲಾದ ಕಾರಣ, ಕೇವಲ ಈ 7 ಆರೋಪಿಗಳ ವಿಚಾರಣೆಯು ತಡವಾಯಿತು. 2007ರಲ್ಲಿ ಮುಕ್ತಾಯಗೊಂಡ ಮೊದಲನೇ ಹಂತದ ವಿಚಾರಣೆಯ ಬಳಿಕ 100 ಆರೋಪಿಗಳನ್ನು ದೋಷಿಗಳೆಂದು ಕೋರ್ಟ್ ತೀರ್ಪು ನೀಡಿತ್ತು. ನಂತರ ಇದರಲ್ಲಿ 23 ಮಂದಿಯನ್ನು ದೋಷಮುಕ್ತಗೊಳಿಸಲಾಗಿದೆ. ಇದೇ ಪ್ರಕರಣದಲ್ಲಿ 2015ರಲ್ಲಿ ಯಾಕೂಬ್ ಮೆಮನ್ ಗೆ ಗಲ್ಲು ಶಿಕ್ಷೆ ನೀಡಲಾಗಿತ್ತು. 24 ವರ್ಷಗಳ ಹಿಂದೆ ಮುಂಬೈ ನಗರವನ್ನು 12 ಬಾಂಬ್’ಗಳ ಮೂಲಕ ನಡುಗಿಸಿದ ಈ ಸರಣಿ ಸ್ಪೋಟವು 257 ಜೀವಗಳನ್ನು ಬಲಿ ತೆಗೆದಿತ್ತು ಹಾಗೂ 713 ಜನರು ಗಾಯಗೊಂಡಿದ್ದರು. ಸುಮಾರು 27 ಕೋಟಿ ರೂಪಾಯಿಗಳ ಆಸ್ತಿ ಹಾನಿಯೂ ಸಂಭವಿಸಿತ್ತು.
