ವರದಿಗಾರ-ಮಂಗಳೂರು: ಕೋಮುವಾದಿ ದುಷ್ಟ ಶಕ್ತಿಗಳಿಂದ ಹತ್ಯೆಗೀಡಾದ ಜನಪರ ಹೋರಾಟಗಾರ್ತಿ,ಪತ್ರಕರ್ತೆ ಗೌರಿ ಲಂಕೇಶ್ ಅವರ ವಿಯೋಗ ಕನ್ನಡ ಸಾಹಿತ್ಯ ಲೋಕ ಸಹಿತ ಕನ್ನಡ ಅಸ್ಮಿತೆಗೆ ಭಾರೀ ಹೊಡೆತವಾಗಿದೆ ಎಂದು ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾರಿಸ್ ಹನೀಫಿ ಹೇಳಿಕೆ ನೀಡಿದ್ದಾರೆ.
ತಾನು ಮನದಟ್ಟು ಮಾಡಿಕೊಂಡ ಸತ್ಯವನ್ನು ಯಾವುದೇ ಮುಚ್ಚುಮರೆಯಿಲ್ಲದೆ ಧೈರ್ಯದಿಂದ ಅಕ್ಷರ ರೂಪಕ್ಕಿಳಿಸಿ ಅಕ್ಷರ ಕ್ರಾಂತಿ ನಡೆಸಿದ ದಿಟ್ಟ ಬರಹಗಾರ್ತಿಯಾಗಿದ್ದ ಗೌರಿ ಲಂಕೇಶ್, ಸ್ನೇಹಮಯ ವ್ಯಕ್ತಿತ್ವದ ಪ್ರತಿರೂಪವಾಗಿದ್ದರು.
ಸಮಾಜದ ಓರೆಕೋರೆಗಳನ್ನು ತನ್ನ ಹರಿತ ಲೇಖನಿ ಮೂಲಕ ತಿದ್ದಿ ಕರ್ನಾಟಕದಾದ್ಯಂತ ಪರಿವರ್ತನೆ ಸೃಷ್ಟಿಸಿದ್ದ ಧೀಮಂತ ನಾಯಕಿಯೊಬ್ಬರ ಪರಿಸ್ಥಿತಿ ಹೀಗಾಗುವುದಾದರೆ ನ್ಯಾಯ, ಸತ್ಯ ನಿಷ್ಠೆಗೆ ಭಾರತದಲ್ಲಿ ಬಾಳಿಕೆಯಿಲ್ಲವೆಂಬ ಅಪಾಯಕಾರಿ ಸಂದೇಶವೊಂದು ಇಡೀ ದೇಶಕ್ಕೆ ರವಾನೆಯಾಗಿದೆ ಎಂದು ಹಾರಿಸ್ ಹನೀಫಿ ಹೇಳಿದ್ದಾರೆ.
ಜಾತ್ಯಾತೀತ ತತ್ವಗಳ ಆಧಾರದಿಂದ ಸಮಾಜದ ಎಲ್ಲಾ ವರ್ಗದ ಜನರನ್ನು ಒಂದು ಗೂಡಿಸುವ ಗೌರಿ ಲಂಕೇಶ್ ಅವರ ಪ್ರಯತ್ನಕ್ಕೆ ತಾತ್ಕಾಲಿಕ ತಡೆ ಬಿದ್ದಿರುವುದಾದರೂ ಅವರ ನಿರ್ಭೀತಿಯ ಪರಂಪರೆಯನ್ನು ಮುಂದುವರಿಸಲು ಇಲ್ಲಿ ಸಾವಿರಾರು ಗೌರಿ ಲಂಕೇಶ್ ಗಳು ಹುಟ್ಟಿ ಬರಲಿದ್ದಾರೆ.
ಇಂತಹ ಧೀರೋದಾತ್ತ ಹೋರಾಟಗಾರ್ತಿಯನ್ನು ಹತ್ಯೆ ಮಾಡಿದವರನ್ನು ಸರಕಾರ ಶೀಘ್ರ ಪತ್ತೆ ಹಚ್ಚಿ ಸಮಾಜದ್ರೋಹಿಗಳು ತಲೆ ಎತ್ತದಂತೆ ಮಾಡಲು ಸರಕಾರ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
