ವರದಿಗಾರ-ಬೆಂಗಳೂರು: ದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಎಲ್ಲಾ ಕೋಮಗಲಭೆಗಳ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ್ (ಆರ್.ಎಸ್.ಎಸ್) ಕೈವಾಡವಿದೆ ಎಂದು ಸಿಪಿಎಂ ರಾಷ್ಟ್ರೀಯ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಸಿಪಿಐ ಮತ್ತು ಸಿಪಿಎಂ ಪಕ್ಷ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಮಾನವ ಬಂಧುತ್ವ ವೇದಿಕೆ ಜಂಟಿಯಾಗಿ ನಗರದಲ್ಲಿ ಆಯೋಜಿಸಿದ್ದ ‘ಸೌಹಾರ್ದತೆಗಾಗಿ ಕರ್ನಾಟಕ’ ರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೇರಳ, ಮಂಗಳೂರಿನಲ್ಲಿ ನೈತಿಕ ಪೊಲೀಸ್ಗಿರಿ, ಗೋರಕ್ಷಣೆ ಎಂಬ ನಾನಾ ಹೆಸರಿನಲ್ಲಿ ಈಗಾಗಲೇ ಆರೆಸ್ಸೆಸ್ ಕಾರ್ಯಕರ್ತರು ಸಾಕಷ್ಟು ಜನರನ್ನು ಕೊಂದಿದ್ದಾರೆ. ಸದ್ಯ ತಮ್ಮ ಕಾರ್ಯಕರ್ತರಿಗೆ ರಕ್ಷಣೆ ನೀಡಬೇಕು ಎಂದು ಬೈಕ್ ರ್ಯಾಲಿ ಹಮ್ಮಿಕೊಂಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಯೆಚೂರಿ ಹೇಳಿದ್ದಾರೆ.
ಸಿಪಿಎಂ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಮಾತನಾಡಿ, ಗೋರಖ್ಪುರದಲ್ಲಿ 10 ಲಕ್ಷ ವಿದ್ಯಾರ್ಥಿಗಳನ್ನು ಆರಿಸಿ ಆರೆಸ್ಸೆಸ್ ತರಬೇತಿ ನೀಡುತ್ತಿದೆಯಲ್ಲದೆ, ಚುನಾವಣೆಗಾಗಿ ಹೊರ ರಾಜ್ಯಗಳಿಂದ 3,000 ಆರೆಸ್ಸೆಸ್ಸ್ ಕಾರ್ಯಕರ್ತರನ್ನು ಕರ್ನಾಟಕಕ್ಕೆ ಕಳುಹಿಸಲಾಗಿದೆ. ಹೀಗೆ ಕೋಮುವಾದಿ ಶಕ್ತಿಗಳು ರಾಜ್ಯದಲ್ಲಿ ಆತಂಕದ ವಾತಾವರಣ ಸೃಷ್ಟಿಸುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮಾತನಾಡಿ, ಕೋಮುವಾದಿ ಶಕ್ತಿಗಳು ಅಧಿಕಾರಕ್ಕೆ ಬರಲು ನಮ್ಮ ಪ್ರಜಾಸತ್ತಾತ್ಮಕ ಪಕ್ಷಗಳ ವೈಫಲ್ಯವೇ ಪ್ರಮುಖ ಕಾರಣ. ಈ ಎಲ್ಲಾ ಪಕ್ಷಗಳು ತಮ್ಮನ್ನು ತಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
‘ಕಾಂಗ್ರೆಸ್ ಮುಕ್ತ ಭಾರತ ನಿರ್ಮಿಸುತ್ತೇವೆ ಎಂದು ಹೇಳುತ್ತಿರುವ ಬಿಜೆಪಿ ಮುಂದಿನ ದಿನಗಳಲ್ಲಿ ದಲಿತ, ಕ್ರಿಶ್ಚಿಯನ್, ಮುಸ್ಲಿಂ ಮುಕ್ತ ಭಾರತ ನಿರ್ಮಿಸಿದರೂ ಆಶ್ಚರ್ಯವಿಲ್ಲ. ಅಲ್ಲದೆ, ಕೇಂದ್ರ ಸರ್ಕಾರಕ್ಕೆ ಸಂವಿಧಾನದ ಆಶಯಗಳ ಮೇಲೆ ನಂಬಿಕೆಯೇ ಇಲ್ಲ. ಅದಕ್ಕಾಗಿ ಹೊಸ ಸಂವಿಧಾನ ಕರಡು ಸಮಿತಿ ರಚಿಸಿ, ಈಗಿರುವ ಸಂವಿಧಾನವನ್ನು ಪರಾಮರ್ಶೆಗೆ ಒಳಪಡಿಸುವ ದಿನಗಳು ಹತ್ತಿರದಲ್ಲಿವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದುತ್ವ ಮತ್ತು ಭಾರತೀಯತೆ ನಡುವೆ ಸಂಘರ್ಷ ನಡೆಯುತ್ತಿದೆ. ಹಿಂದುತ್ವ ಎನ್ನುವುದು ಧರ್ಮಾಧಾರಿತ ರಾಜಕೀಯ ಸಿದ್ಧಾಂತ. ಭಾರತೀಯತೆ ಎನ್ನುವುದು ದೇಶಾಧಾರಿತ ಸಾಮಾಜಿಕ ಸಿದ್ಧಾಂತ. ಹಿಂದೆ ಧರ್ಮಗಳು ದಯಾಮಯವಾಗಿದ್ದವು. ಕೋಮುವಾದಿಗಳಿಂದಾಗಿ ಈಗ ಅವು ಭಯ ಮುಖಯಾಗಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಶಾಸಕ ಪುಟ್ಟಣಯ್ಯ ಮಾತನಾಡುತ್ತಾ, ಎಲ್ಲಾ ಕೆಟ್ಟ ಶಕ್ತಿಗಳು ಬೇಗ ಒಗ್ಗಟ್ಟಾಗುತ್ತವೆ. ಆದರೆ, ಒಳ್ಳೆಯವರು ಒಂದಾಗುವುದು ಬಹಳ ಕಷ್ಟ. ಕೋಮುವಾದಿಗಳಿಗೆ ಜಾಗ ಬಿಟ್ಟುಕೊಟ್ಟು ಈಗ ಅಳುತ್ತಾ ಕೂತಿದ್ದೇವೆ. ಈಗಲಾದರು ನಾವು ಬುದ್ಧಿ ಕಲಿಯಬೇಕು’ ಎಂದು ವ್ಯಂಗ್ಯವಾಡಿದ್ದಾರೆ.
