ವರದಿಗಾರ-ಬೆಂಗಳೂರು: ಪ್ರಗತಿಪರ ಚಿಂತಕಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ವಹಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಗೃಹ ಸಚಿವರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ, ಪೊಲೀಸ್ ಮಹಾನಿರ್ದೇಶಕರ ನೇತೃತ್ವದಲ್ಲಿ ಎಸ್ಐಟಿ ತನಿಖೆ ನಡೆಸಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಗೌರಿ ಲಂಕೇಶ್ ರವರ ಹತ್ಯೆಯಿಂದ ತುಂಬಾ ನೊಂದಿದ್ದೇನೆ ಮತ್ತು ಘಟನೆಯು ಆಘಾತ ತಂದಿದೆ ಹಾಗೂ ಅವರು ಉತ್ತಮ ಬಾಂಧವ್ಯವನ್ನಿಟ್ಟು ಹಲವು ಬಾರಿ ನನ್ನನ್ನು ಭೇಟಿಯಾಗಿದ್ದಾರೆ.
ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಬಗ್ಗೆಯೂ ಮುಕ್ತ ಮನಸ್ಸು ಹೊಂದಿದ್ದೇವೆ ಎಂದೂ ಈ ಸಂದರ್ಭ ಅವರು ಹೇಳಿದ್ದು, ಮೊದಲು ಎಸ್ಐಟಿ ತನಿಖೆ ಆಗಲಿ ಎಂದು ಹೇಳಿದ್ದಾರೆ.
ಪ್ರಗತಿಪರ ಚಿಂತಕರಿಗೆ ಭದ್ರತೆ: ಗೌರಿ ಲಂಕೇಶ್ ಹತ್ಯೆಯು ಕಲ್ಬುರ್ಗಿ ಹತ್ಯೆಗಿಂತ ಭಿನ್ನವಾಗಿದೆ. ಹಂತಕ ಹೆಲ್ಮೆಟ್ ಧರಿಸಿದ್ದ. ಇದೊಂದು ಸಂಘಟಿತ ಅಪರಾಧ ಕೃತ್ಯವಾಗಿದೆ. ಪ್ರಗತಿಪರ ಚಿಂತಕರಿಗೆ ಪೋಲಿಸ್ ರಕ್ಷಣೆಯನ್ನು ನೀಡುವಂತೆ ಸೂಚಿಸಿದ್ದೇನೆ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.
