ರಾಜ್ಯ ಸುದ್ದಿ

ಗೌರಿ ಲಂಕೇಶ್ ಹತ್ಯೆ-ಸೈದ್ಧಾಂತಿಕವಾಗಿ ಎದುರಿಸಲಾಗದ ಹೇಡಿಗಳ ಕೃತ್ಯ: ವ್ಯಾಪಕ ಖಂಡನೆ

ವರದಿಗಾರ-ಬೆಂಗಳೂರು: ಖ್ಯಾತಿ ಸಾಹಿತಿ, ಪ್ರಗತಿಪರ ಚಿಂತಕಿ ಲಂಕೇಶ್ ಪ್ರತಿಕೆಯ ಪ್ರಧಾನ ಸಂಪಾದಕಿ ಗೌರಿ ಲಂಕೇಶ್ ರನ್ನು ದುಷ್ಕರ್ಮಿಗಳು ಇಂದು ರಾತ್ರಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಅವರ ನಿವಾಸದಲ್ಲಿ ಗುಂಡಿಕ್ಕಿ ಕೊಂದಿರುವ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಲಾಗಿದೆ.

ಗೌರಿ ಲಂಕೇಶ್ ಹತ್ಯೆ-ಪ್ರಜಾಪ್ರಭುತ್ವದ ಕಗ್ಗೊಲೆ: ಅಬ್ದುಲ್ ಮಜೀದ್

ಪತ್ರಕರ್ತೆ, ಸಾಹಿತಿ, ಬುದ್ಧಿಜೀವಿ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ರವರ ಹತ್ಯೆ ನಡೆಸುವುದರ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಅತ್ಯಂತ ಕಠಿಣ ಶಬ್ದಗಳಿಂದ ಗೌರಿ ಲಂಕೇಶ್ ರವರ ಹತ್ಯೆಯನ್ನು ಖಂಡಿಸುತ್ತೇನೆ.

ಪನ್ಸಾರೆ, ಕಲ್ಬುರ್ಗಿ ಮತ್ತು ದಾಬೋಲ್ಕರ್ ರನ್ನು ಕೊಂದ ರೀತಿಯಲ್ಲೇ ಗೌರಿ ಲಂಕೇಶ್ ರವರ ಹತ್ಯೆಯಾಗಿದೆ. ಸೈದ್ಧಾಂತಿಕವಾಗಿ ಎದುರಿಸಲಾಗದ ಹೇಡಿಗಳ ಕೃತ್ಯವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಕೋಮುವಾದಿಗಳ ವಿರುದ್ಧ ಮಾತನಾಡುವ ಹಕ್ಕನ್ನು ಕಸಿದುಕೊಳ್ಳುವ ಷಡ್ಯಂತ್ರದ ಭಾಗವಾಗಿದೆ. ಈ ಹತ್ಯೆಯ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ.

-ಅಬ್ದುಲ್ ಮಜೀದ್
ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ

ಗೌರಿ ಲಂಕೇಶ್ ಹತ್ಯೆ: ಮುಸ್ಲಿಮ್ ಲೇಖಕರ ಸಂಘ ಖಂಡನೆ

ಪತ್ರಕರ್ತೆ, ಸಾಹಿತಿ, ಹೋರಾಟಗಾರ್ತಿ, ಚಿಂತಕಿ ಗೌರಿ ಲಂಕೇಶ್ ಹತ್ಯೆಯನ್ನು ಕರ್ನಾಟಕ ಮುಸ್ಲಿಮ್ ಲೇಖಕರ ಸಂಘ ತೀವ್ರವಾಗಿ ಖಂಡಿಸಿದೆ. ಗೌರಿ ಲಂಕೇಶ್ ಅಗಲುವಿಕೆಯಿಂದ ಪ್ರಜಾಪ್ರಭುತ್ವ, ಜಾತ್ಯತೀತತೆ, ಜನಪರ ಮತ್ತು ಕೋಮು ಸೌಹಾರ್ದದ ಹೋರಾಟಗಳಿಗೆ ತುಂಬಲಾರದ ನಷ್ಟವಾಗಿದೆ.

ಸರಕಾರವು ಕೂಡಲೇ ತುರ್ತು ಕ್ರಮ ಕೈಗೊಂಡು ಕೊಲೆಗಡುಕರಿಗೆ ಮತ್ತು ಹತ್ಯೆಗೆ ಪ್ರೇರೇಪಿಸಿರುವ ಭಯೋತ್ಪಾದಕರಿಗೆ ಗರಿಷ್ಟ ಶಿಕ್ಷೆ ವಿಧಿಸಲು ಮುಂದಾಗಬೇಕು ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಪಾಪ್ಯುಲರ್ ಫ್ರಂಟ್ ಖಂಡನೆ

ಸಮಾಜವಾದಿ ಹೋರಾಟಗಾರ್ತಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ರನ್ನು ಗುಂಡಿಟ್ಟು ಹತ್ಯೆಗೈದಿರುವ ಘಟನೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ.

ವಿಚಾರವಾದಿಗಳನ್ನು ನಿರ್ದಯವಾಗಿ ಹತ್ಯೆಗೈಯ್ಯುವ ಸರಣಿ ಮುಂದುವರಿದಿದ್ದು, ಗೌರಿ ಲಂಕೇಶ್ ರವರ ಹತ್ಯೆಯು ಇದರ ಮುಂದುವರಿದ ಭಾಗವಾಗಿದೆ. ಅಭಿವ್ಯಕ್ತಿ ಸ್ಞಾತಂತ್ರ್ಯವನ್ನು ನಿರ್ಭಯವಾಗಿ ವ್ಯಕ್ತಪಡಿಸುತ್ತಿದ್ದ ಮತ್ತು ಮತಾಂಧ ಶಕ್ತಿಗಳ ವಿರುದ್ಧ ನಿರಂತರ ವೈಚಾರಿಕ ಸಂಘರ್ಷಕ್ಕಿಳಿದಿದ್ದ ವಿಚಾರವಾದಿಗಳಾಗಿದ್ದ ದಾಭೋಲ್ಕರ್, ಪನ್ಸಾರೆ, ಡಾ.ಎಂ.ಎಂ.ಕಲ್ಬುರ್ಗಿಯರನ್ನು ಕೂಡ ಇದೇ ರೀತಿಯಲ್ಲಿ ಹತ್ಯೆ ನಡೆಸಲಾಗಿತ್ತು. ದಾಭೋಲ್ಕರ್ ರವರ ಹತ್ಯೆಯ ಹಿಂದೆ ಸನಾತನ ಸಂಸ್ಥೆಯ ಹೆಸರು ಕೂಡ ಕೇಳಿಬಂದಿದೆ. ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಬಳಿಕ ಸಂಘಪರಿವಾರದ ಜನವಿರೋಧಿ ನೀತಿಗಳು ಮತ್ತು ಮತಾಂಧತೆಯ ವಿರುದ್ಧ ಮಾತನಾಡುವ ವಿಚಾರವಾದಿಗಳ ಮೇಲಿನ ದಾಳಿಗಳು ತೀವ್ರವಾಗಿದೆ. ಇದರ ವಿರುದ್ಧ ಜನಾಕ್ರೋಶವು ಭುಗಿಲೆದ್ದು, ಸಾಹಿತಿಗಳು ಪ್ರಶಸ್ತಿ ವಾಪಸಿಯಂತಹ ದೊಡ್ದ ಅಭಿಯಾನವನ್ನೇ ಹಮ್ಮಿಕೊಂಡಿದ್ದರು. ಆದರೆ ಜವಾಬ್ದಾರಿಯುತ ಸರಕಾರಗಳು ದುಷ್ಕರ್ಮಿಗಳನ್ನು ಬಂಧಿಸದೇ, ಸಾಹಿತಿಗಳ ಹತ್ಯೆಯ ಹಿಂದಿನ ಷಂಡ್ಯತ್ರವನ್ನು ಬಹಿರಂಗಪಡಿಸಲು ವಿಫಲವಾಗಿವೆ.

ಡಾ.ಎಂ.ಎಂ.ಕಲ್ಬುರ್ಗಿಯವರ ಹತ್ಯೆ ನಡೆದು ಎರಡು ವರುಷಗಳು ಕಳೆದರೂ ಹತ್ಯೆಯ ಹಿಂದಿನ ಸೂತ್ರಧಾರಿಗಳನ್ನು ಬಂಧಿಸುವ ಕಾರ್ಯ ನಡೆದಿಲ್ಲ. ದುಷ್ಕರ್ಮಿಗಳ ಬಂಧನಕ್ಕೆ ಅಗ್ರಹಿಸಿ ವಾರದ ಹಿಂದಷ್ಟೇ ರಾಜ್ಯದ ರಾಜಧಾನಿಯಲ್ಲಿ ಪ್ರತಿಭಟನೆ ನಡೆದಿತ್ತು. ಇದೀಗ ದಿನಗಳ ಅಂತರದಲ್ಲಿ ಮತ್ತೋರ್ವ ವಿಚಾರವಾದಿಯ ಹತ್ಯೆ ನಡೆದಿರುವುದು ನಾಗರಿಕ ಸಮಾಜದಲ್ಲಿ ಆತಂಕವನ್ನು ಸೃಷ್ಟಿಸಿದೆ.
ವಿಚಾರವಾದಿಗಳ ಹತ್ಯೆಯ ಹಿಂದಿರುವ ದುಷ್ಕರ್ಮಿಗಳನ್ನು ಮತ್ತು ಷಡ್ಯಂತ್ರದ ರೂವಾರಿಗಳನ್ನು ಕಾನೂನಿನ ಕುಣಿಕೆಗೆ ತರಲು ಸರಕಾರವು ತುರ್ತು ಕ್ರಮಕೈಕೊಳ್ಳಬೇಕು ಹಾಗು ವಿಚಾರವಾದಿಗಳ ಜೀವಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಮತ್ತು ಈ ಹತ್ಯಾ ಪ್ರಕರಣದ ತನಿಖೆಯನ್ನು ಎನ್.ಐ.ಎ.ಗೆ ವಹಿಸಬೇಕೆಂದು ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷ ಮುಹಮ್ಮದ್ ಸಾಕಿಬ್ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

 

ಗೌರಿ ಲಂಕೇಶ್ ಹತ್ಯೆ: ಐಎಸ್ಎಫ್ ಕುವೈಟ್ ಖಂಡನೆ

ಕರ್ನಾಟಕ ಕಂಡ ದಿಟ್ಟ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ, ಜಾತ್ಯಾತೀತತೆಯ ಪ್ರಬಲ ಪ್ರತಿಪಾದಕಿ, ತನ್ನ ತೀಕ್ಷ್ಣ ಬರಹಗಳಿಂದ ಫ್ಯಾಸಿಸ್ಟ್ ಶಕ್ತಿಗಳಿಗೆ ಸಿಂಹ ಸ್ವಪ್ನವಾಗಿದ್ದ ಗೌರಿ ಲಂಕೇಶ್ ಬರ್ಬರ ಹತ್ಯೆಯನ್ನು ಇಂಡಿಯನ್ ಸೋಶಿಯಲ್ ಫೋರಮ್ ಕುವೈಟ್ ತೀವ್ರವಾಗಿ ಖಂಡಿಸಿದೆ. ಗೌರಿಯವರ ಹತ್ಯೆಯಿಂದ ಕರ್ನಾಟಕದ ಜಾತ್ಯಾತೀತ ಹೋರಾಟದ ಧ್ವನಿಯು ಕ್ಷೀಣಗೊಂಡಂತಾಗಿದ್ದು, ಕನ್ನಡ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದೆ.

ಪನ್ಸಾರೆ, ಕಲ್ಬುರ್ಗಿ ಮತ್ತು ದಾಬೋಲ್ಕರ್’ರನ್ನು ಕೊಂದ ಫ್ಯಾಸಿಸ್ಟ್ ಭಯೋತ್ಪಾದಕರನ್ನು ಸರ್ಕಾರವು ಇನ್ನೂ ಬಂಧಿಸಲು ವಿಫಲವಾಗಿರುವುದು ಕೊಲೆಗಾರರಿಗೆ ಗೌರಿ ಲಂಕೇಶ್’ರಂತಹ ಪ್ರಗತಿಪರರ ಹತ್ಯೆಗೆ ಪ್ರೇರಣೆ ನೀಡಿದೆ ಎಂದು ಅದು ಆಕ್ರೋಶ ವ್ಯಕ್ತಪಡಿಸಿದೆ. ಈ ಕೊಲೆಯು ದೇಶದ ಜಾತ್ಯಾತೀತ ಪ್ರಗತಿಪರ ಚಿಂತಕರಲ್ಲಿ ಭೀತಿಯನ್ನು ಉಂಟುಮಾಡಲು ಫ್ಯಾಸಿಸ್ಟ್ ಶಕ್ತಿಗಳ ವಿಫಲ ಪ್ರಯತ್ನವಾಗಿದ್ದು, ಗೌರಿ ಲಂಕೇಶ್’ರವರ ಬಲಿದಾನವು ಕನ್ನಡ ನಾಡಿನಾದ್ಯಂತ ಫ್ಯಾಸಿಸ್ಟ್ ವಿರುದ್ಧ ತೀಕ್ಷ್ಣ ಹೋರಾಟಕ್ಕೆ ನಾಂದಿಯಾಗಬೇಕಿದೆ ಎಂದು ಇಂಡಿಯನ್ ಸೋಶಿಯಲ್ ಫೋರಮ್ ಕುವೈಟ್ ಪತ್ರಿಕಾ ಪ್ರಕಟನೆಯ ಮೂಲಕ ಕರೆ ನೀಡಿದೆ.

 

ಗೌರಿ ಲಂಕೇಶ್ ಹತ್ಯೆ: ಕ್ಯಾಂಪಸ್ ಫ್ರಂಟ್ ಖಂಡನೆ

ಹಿರಿಯ ಪತ್ರಕರ್ತೆ, ಸಾಹಿತಿ ಮತ್ತು ಮಾನವ ಹಕ್ಕು ಹೋರಾಟಗಾರ್ತಿಯಾದಂತಹ ಗೌರಿ ಲಂಕೇಶ್ ರವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿರುವುದನ್ನು ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಮಹಮ್ಮದ್ ತಫ್ಸೀರ್ ತೀವ್ರವಾಗಿ ಖಂಡಿಸಿದ್ದಾರೆ.

ಈಗಾಗಲೇ ಹಲವಾರು ಪ್ರಗತಿಪರ ಚಿಂತಕರನ್ನು ಹತ್ಯೆಗೈಯಲಾಗಿದ್ದು, ಗೌರಿ ಲಂಕೇಶ್ ರವರ ಹತ್ಯೆಯು ಅದರ ಮುಂದುವರಿದ ಭಾಗವಾಗಿದೆ. ಕಳೆದ ಎರಡು ವರ್ಷಗಳಲ್ಲಿ ವ್ಯವಸ್ಥೆಯ ವಿರುದ್ಧ ಮತ್ತು ಫ್ಯಾಷಿಸಂ,ಕೋಮುವಾದದ ವಿರುದ್ಧವಾಗಿ ನಿರಂತರ ಧ್ವನಿ ಎತ್ತಿದ್ದ ದಾಬೋಲ್ಕರ್, ಪನ್ಸಾರೆ ಮತ್ತು ಡಾ.ಎಂ.ಎಂ ಕಲ್ಬುರ್ಗಿಯವರನ್ನು ಇದೇ ರೀತಿ ಹತ್ಯೆ ಮಾಡಲಾಗಿತ್ತು, ಅಲ್ಲದೆ ಈ ಹಿಂದೆ ಯು.ಎ. ಅನಂತಮೂರ್ತಿಯವರು ನಿಧನರಾದಾಗ ಕೆಲವೊಂದು ದುಷ್ಕರ್ಮಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿರುವುದೂ ಕೂಡಾ ಪ್ರಗತಿಪರರ ಮೇಲಿನ ದಾಳಿಯ ಇನ್ನೊಂದು ಮುಖವಾಗಿದೆ. ಇದರ ಹಿಂದೆ ಒಂದು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದ್ದು, ಗೌರಿ ಲಂಕೇಶ್ ರವರ ಹತ್ಯೆಯು ಅದರ ಭಾಗವಾಗಿದೆ. ಆದುದರಿಂದ ರಾಜ್ಯ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ , ಕೊಲೆಗಾರರನ್ನು ಕೂಡಲೇ ಬಂಧಿಸಬೇಕೆಂದು ಕ್ಯಾಂಪಸ್ ಫ್ರಂಟ್ ರಾಜ್ಯಧ್ಯಕ್ಷರಾದ ಮಹಮ್ಮದ್ ತಫ್ಸೀರ್ ಸರಕಾರವನ್ನು ಆಗ್ರಹಿಸಿದ್ದಾರೆ.

 

ಗೌರಿ ಲಂಕೇಶ್ ಹತ್ಯೆ: ಜಮಾಅತೆ ಇಸ್ಲಾಮೀ ಹಿಂದ್ ಖಂಡನೆ

ವಿಚಾರವಾದಿ ಕಲ್ಬುರ್ಗಿಯವರ ಹತ್ಯೆ ನಡೆದು ಮೂರು ವರ್ಷಗಳಾದ ಈ ಹೊತ್ತಿನಲ್ಲೇ ಇನ್ನೋರ್ವ ವಿಚಾರವಾದಿ ಮತ್ತು ಸಾಹಿತಿ ಗೌರಿ ಲಂಕೇಶ್ ರ ಹತ್ಯೆಯಾಗಿರುವುದು ಅತ್ಯಂತ ಆಘಾತಕಾರಿ ಮತ್ತು ಖಂಡನಾರ್ಹವಾದುದು ಎಂದು ಜಮಾಅತೆ ಇಸ್ಲಾಮೀ ಹಿಂದ್ ನ ರಾಜ್ಯಾಧ್ಯಕ್ಷ ಮುಹಮ್ಮದ್ ಅತ್ಹರುಲ್ಲಾ ಶರೀಫ್ ಹೇಳಿದ್ದಾರೆ. ಇದು ಓರ್ವ ವ್ಯಕ್ತಿಯ ಹತ್ಯೆಯಲ್ಲ, ಒಂದು ವಿಚಾರ ಮತ್ತು ತರ್ಕದ ಹತ್ಯೆಯೆಂದೇ ನಾನು ಭಾವಿಸುತ್ತೇನೆ. ಕಲ್ಬುರ್ಗಿಯವರನ್ನು ಹತ್ಯೆಗೈದವರನ್ನು ಇನ್ನೂ ಬಂದಿಸಲಾಗಿಲ್ಲ. ಗೌರಿಯವರ ಹತ್ಯೆಯೂ ಕಲ್ಬುರ್ಗಿಯವರ ಹತ್ಯೆಯನ್ನೇ ಹೋಲುವಂತಿದೆ ಎಂಬುದಂತೂ ಇನ್ನಷ್ಟು ಆತಂಕವನ್ನು ಉಂಟುಮಾಡುತ್ತಿದೆ. ಇದು ಗೌರಿ ನಂಬಿದ್ದ ವಿಚಾರಧಾರೆಗೆ ಎದುರಾದ ಸವಾಲು ಅನ್ನುವುದಕ್ಕಿಂತ ವ್ಯವಸ್ಥೆಗೆ ಎದುರಾದ ಸವಾಲು ಎಂದೇ ಹೇಳಬೇಕಾಗುತ್ತದೆ. ಸರಕಾರ ಈ ಬಾರಿಯೂ ವಿಫಲವಾದರೆ ಆ ಬಳಿಕ ಮಾತುಗಳು ಮೌನವಾದಾವು. ಆದ್ದರಿಂದ ಸರಕಾರ ಆರೋಪಿಗಳನ್ನು ಬಂದಿಸದೇ ವಿರಮಿಸದಿರುವ ನಿರ್ಧಾರ ತಾಳಬೇಕು ಎಂದು ಅತ್ಹರುಲ್ಲಾ ಶರೀಫ್ ಆಗ್ರಹಿಸಿರುವರಲ್ಲದೇ ಗೌರಿ ಅವರ ಕುಟುಂಬ ಹಾಗೂ ಜೊತೆಗಾರರಿಗೆ ದೇವನು ದುಃಖ ವನ್ನು ಸಹಿಸುವ ಶಕ್ತಿ ದಯಪಾಲಿಸಲಿ ಎಂದವರು ಪ್ರಾರ್ಥಿಸಿದ್ದಾರೆ.

 

ಗೌರಿ ಲಂಕೇಶ್ ಹತ್ಯೆ ; ವಿಚಾರಧಾರೆಯನ್ನು ಎದುರಿಸಲಾಗದ ಹೇಡಿಗಳ ಕೃತ್ಯ : ನ್ಯಾಶನಲ್ ವಿಮೆನ್ಸ್ ಫ್ರಂಟ್

ರಾಜ್ಯದ ಖ್ಯಾತ ಪತ್ರಕರ್ತೆ ಮತ್ತು ಹೆಮ್ಮೆಯ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್’ರವರ ಹತ್ಯೆ, ಅವರ ವಿಚಾರಧಾರೆಗಳನ್ನು ನೇರವಾಗಿ ಎದುರಿಸಲಾಗದ ಹೇಡಿಗಳ ಕೃತ್ಯವಾಗಿದ್ದು, ನ್ಯಾಶನಲ್ ವಿಮೆನ್ಸ್ ಫ್ರಂಟ್ ಘಟನೆಯನ್ನು ಕಟು ಶಬ್ದಗಳಲ್ಲಿ ಖಂಡಿಸುತ್ತದೆ. ಸರದಿ ಕ್ರಮಗಳಲ್ಲಿ ವಿಚಾರವಾದಿಗಳನ್ನು ಈ ರೀತಿ ಕೊಲ್ಲುತ್ತಿರುವ ಘಟನೆಗಳು ನಿಜಕ್ಕೂ ಆಘಾತಕಾರಿಯಾಗಿದೆ. ಹಂತಕರು ಓರ್ವ ಮಹಿಳಾ ವಿಚಾರವಾದಿಯನ್ನು ಹತ್ಯೆಗೈಯ್ಯುವಷ್ಟರ ನೀಚ ಮಟ್ಟಿಗೆ ಇಳಿಯುತ್ತಾರೆಂದಾದರೆ ಅವರ ಬೌದ್ಧಿಕ ದಿವಾಳಿತನ ಯಾವ ಮಟ್ಟದಲ್ಲಿದೆಯೆಂದು ಯೋಚಿಸಬೇಕಾಗಿದೆ. ಗೌರಿಯವರು ಪತ್ರಕರ್ತೆ ಮಾತ್ರವಲ್ಲ ರಾಜ್ಯದ ಮುಂಚೂಣಿಯಲ್ಲಿದ್ದ ಓರ್ವ ಮಹಿಳಾ ಹೋರಾಟಗಾರ್ತಿ ಕೂಡಾ ಆಗಿದ್ದರು. ವಿಕೃತ ಮನಸ್ಸಿನ ಹಂತಕರು ಗೌರಿಯವರ ಹತ್ಯೆಯ ಮೂಲಕ ಇತರೆ ಹೋರಾಟಗಾರರನ್ನು ಬೆದರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಅವರಿಗೆ ಗೌರಿಯವರನ್ನು ಕೊಲ್ಲಬಹುದೇ ವಿನಹ ಅವರ ವಿಚಾರಧಾರೆಗಳನ್ನಲ್ಲವೆನ್ನುವ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು.

ಆರೋಪಿಗಳು ಎಷ್ಟೇ ಪ್ರಬಲರಾಗಿದ್ದರೂ ಕೂಡಾ ಅವರನ್ನು ಆದಷ್ಟು ಶೀಘ್ರವಾಗಿ ಬಂಧಿಸಬೇಕಾಗಿದೆ ಮತ್ತು ಹತ್ಯೆಯ ಹಿನ್ನೆಲೆಯಲ್ಲಿರುವ ಎಲ್ಲಾ ಸಂಚುಕೋರರನ್ನೂ ಬಂಧಿಸಬೇಕೆಂದು ನ್ಯಾಶನಲ್ ವಿಮೆನ್ಸ್ ಫ್ರಂಟ್ ಆಗ್ರಹಿಸುತ್ತದೆ

ಫಾತಿಮಾ ನಸೀಮಾ
ರಾಜ್ಯಾಧ್ಯಕ್ಷರು, ನ್ಯಾಶನಲ್ ವಿಮೆನ್ಸ್ ಫ್ರಂಟ್ (NWF)

 

ಪ್ರಜಾಪ್ರಭುತ್ವದ ಕಗ್ಗೊಲೆ: ವೆಲ್ಫೇರ್ ಪಾರ್ಟಿ 

ವರ್ಷಗಳ ಹಿಂದೆ ಸಾಹಿತಿ ಎಂಎಂ ಕಲಬುರ್ಗಿಯ ಮನೆಗೆ ನುಗ್ಗಿ ಕೊಲೆ ಮಾಡಿದ್ದ ದುಷ್ಕರ್ಮಿಗಳು ಇನ್ನೂ ಪತ್ತೆಯಾಗಿಲ್ಲ! ಕಲಬುರ್ಗಿಯವರ ಸಾವು ಹಸುರಾಗಿರುವಾಗಲೇ ಮತ್ತೋರ್ವ ಸಾಹಿತಿಯ ಬರ್ಬರ ಹತ್ಯೆ!ನಾಡು ಅಧಪತನದ ಇನ್ನೊಂದು ಹೆಜ್ಜೆ ಇಟ್ಟಿದೆ……
ಲಂಕೇಶ್ ಮೇಷ್ಟ್ರವರ ತಂದೆಗೆ ತಕ್ಕ ಪುತ್ರಿಯಾಗಿ , ಬುದ್ಧ ಬಸವ ಅಂಬೇಡ್ಕರ್ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನದುದ್ದಕ್ಕೂ ಪ್ರತಿಪಾದಿಸುತ್ತಾ .. ಅಸಮಾನತೆ , ಅಸತ್ಯ ,ಅನ್ಯಾಯ ಗಳನ್ನು ಗಟ್ಟಿಯಾಗಿ ಪ್ರತಿಭಟಿಸುತ್ತಾ …ಲಂಕೇಶ್ ಪತ್ರಿಕಯನ್ನು ನಿರಂತರವಾಗಿ ಮುಂದುವರೆಸುತ್ತಾ ….ಶರಣರ …ಸೂಫಿಗಳ… ಸಂತರ ಸಮಾನತೆಯ ನಾಡನ್ನು ಕಟ್ಟಲು ಶ್ರಮಿಸುತ್ತಿದ್ದ ಗೌರಿ ಲಂಕೇಶ್ ಹತ್ಯೆಯಾಗಿರುವುದು ಸೌಹಾರ್ದಯುತ ಭಾರತಿಯರೆಲ್ಲರಿಗೂ ಅತ್ಯಂತ ನೋವುಂಟು ಆಗಿದೆ..ಸಂಘ ಪರಿವಾರದ ಪ್ರಬಲ ವಿರೋಧಿಯಾಗಿದ್ದ ಗೌರಿ ಲಂಕೇಶ್ ಅವರು 2008ರಲ್ಲಿ ಸಂಘ ಪರಿವಾರದ ವಿರುದ್ಧ ಬರೆದ ಒಂದು ಲೇಖನದ ವಿರುದ್ಧ ಇತ್ತೀಚೆಗೆ ಶಿಕ್ಷೆಯೂ ಅನುಭವಿಸಿದ್ದರು
ಈ ದುರ್ಘಟನೆಯನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಬಲವಾಗಿ ಖಂಡಿಸುತ್ತದೆ.

 

ಕೊಲೆ ಕೃತ್ಯ ಸರ್ವತ್ರ ಖಂಡನೀಯ-ಮಾನವರು ಸಹೋದರರು ಸೌಹಾರ್ದ ವೇದಿಕೆ

ಮನದಲ್ಲಿ ದ್ವೇಷವನ್ನಿಟ್ಟುಕೊಂಡು ನಿರ್ದಯವಾಗಿ ಮುಗಿಸಿಬಿಡುವ ಸಾಲಿಗೆ ಮತ್ತೊಂದು ಸೇರ್ಪಡೆ ಯಾಗಿದ್ದು, ಅಶ್ರಫ್, ಶರತ್ ಬಳಿಕ ದಿಟ್ಟ ಪತ್ರಕರ್ತೆ ಗೌರಿ‌ ಲಂಕೇಶ್ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಪ್ರಾಣ ಕಳೆದು ಕೊಂಡಿದ್ದಾರೆ.

ಕರುಣೆ,ಮಾನವೀಯತೆ, ವಿಶ್ವಾಸಗಳನ್ನು ಚಿಂದಿ ಉಡಾಯಿಸಿ ದ್ವೇಷ,ಹಗೆ,ರಾಕ್ಷಸ ಪ್ರವೃತ್ತಿಯನ್ನು ಜೀವನವೆಂದು ಬಗೆದವರಿಂದ ಇಂಥಾ ಹೇಯ ಕೃತ್ಯಗಳು ನಡೆಯುತ್ತಿವೆ.

ಫಕ್ಷ,ಸಂಘಟನೆ, ಜಾತಿಗಳಿಗಿಂತ ಮಿಗಿಲಾಗಿ ಮಾನವ ಪ್ರೇಮ ಎಂಬ ಉದಾತ್ತ ಮನೋಭಾವವೊಂದಿಗೆ ಎಂಬ ಬಗ್ಗೆ ಅರಿವಿಲ್ಲದ ಸಮಾಜದ್ರೋಹಿಗಳು ಅಪಾಯಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದರೂ ಆಡಳಿತ ವರ್ಗ ಅದನ್ನು ಅಷ್ಟಾಗಿ ಗಣನೆಗೆ ತೆಗೆದು ಕೊಳ್ಳದೆ ಕೊಲೆಗಡುಕರನ್ನು ನೆಪ ಮಾತ್ರಕ್ಕೆ ಬಂಧಿಸಿ ಕೆಲವೇ ದಿನಗಳಲ್ಲಿ ಬಿಟ್ಟು ಇಡುವ ಪ್ರವೃತ್ತಿಯನ್ನು ಮುಂದುವರಿಸಿರುವುದರಿಂದ ಅನ್ಯಾಯವೆಸಗುವವರಿಗೆ ಕಾನೂನಿನ ಭಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ನಡೆದ ಎಲ್ಲಾ ಕೊಲೆಗಳ ಸಹಿತ ಪತ್ರಕರ್ತೆ ಗೌರಿ ಲಂಕೇಶ್ ಕೊಲೆಯ ರಹಸ್ಯವನ್ನು ಬೇಧಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಕರ್ನಾಟಕ ಸರಕಾರ ಕೂಡಲೇ ಮುಂದಾಗಬೇಕು.

” ಒಬ್ಬ ಮನುಷ್ಯನನ್ನು ಕೊಂದರೆ ಇಡೀ ಮನು ಕುಲವನ್ನು ಕೊಂದಂತೆ “ಎಂಬ ಮಾನವ ಜೀವನದ ಸಂವಿಧಾನ ಗ್ರಂಥವಾಗಿರುವ ಪವಿತ್ರ ಖುರ್ ಆನ್ ವಾಕ್ಯದಂತೆ ,ಒಬ್ಬ ಮನುಷ್ಯ ನ ಕೊಲೆಯನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸುವ ಮಾನವೀಯ ಪ್ರವೃತ್ತಿ ಬೆಳೆದು ಬರಬೇಕಿದೆ.

– ಕೆ.ಎ.ಅಬ್ದುಲ್ ಅಝೀಝ್ ಪುಣಚ
ಅಧ್ಯಕ್ಷ ,ಮಾನವರು ಸಹೋದರರು ಸೌಹಾರ್ದ ವೇದಿಕೆ ದ.ಕ.ಜಿಲ್ಲೆ

 

ಕರ್ನಾಟಕ ರಕ್ಷಣಾ ವೇದಿಕೆ- ಸಮಾಜದ ಜನತೆಗೆ ಹಾಕಿದ ಗು೦ಡೆಟು

ಪತ್ರಕರ್ತೆ, ಸಾಹಿತಿ, ಹೋರಾಟಗಾರ್ತಿ, ಚಿಂತಕಿ ಜ್ಯಾತ್ಯಾತೀತೆ ನಿಲುವು ಹೊ೦ದಿದ ಗೌರಿ ಲಂಕೇಶ್ ಹತ್ಯೆಯನ್ನು ಕರ್ನಾಟಕ ರಕ್ಷಣಾ ವೇದಿಕೆ(ಟಿ. ಎ ನಾರಾಯಣಗೌಡರ) ಮಂಗಳೂರು ತಾಲೂಕು ಅಧ್ಯಕ್ಷ ಮಧುಸೂದನ ಗೌಡ ಅವರು ತೀವ್ರವಾಗಿ ಕ೦ಡಿಸಿದ್ದಾರೆ ಗೌರಿ ಲಂಕೇಶ್ ಅಗಲುವಿಕೆ ಗೌರಿ ಲ೦ಕೇಶ್ ಅವರ ಕುಟು೦ಬಕ್ಕೆಮಾತ್ರವಲ್ಲ ಬದಲಾಗಿ ಇಡಿ ಪ್ರಪ೦ಚಕ್ಕೆ ಮತ್ತು ಪ್ರಜಾಪ್ರಭುತ್ವ, ಜಾತ್ಯತೀತತೆ, ಜನಪರ ಮತ್ತು ಕೋಮು ಸೌಹಾರ್ದದ ಹೋರಾಟಗಳಿಗೆ ತುಂಬಲಾರದ ನಷ್ಟವಾಗಿದೆ.
ಯಾವುದೆ ವಾದ ವಿವಾದಗಳನ್ನ ಆಚಾರ ವಿಚಾರಗಳನ್ನ ಮೌಕಿಕವಾಗಿ ಮುಗಿಸಲು ಸಾದ್ಯವಾಗದ ಬಯೊದ್ಪಾದಕರ ನಾಲಯಕ್ ಕ್ರತ್ಯ ಇದಾಗಿರುತ್ತದೆ….

ಸರಕಾರವು ಕೂಡಲೇ ತುರ್ತು ಕ್ರಮ ಕೈಗೊಂಡು ಕೊಲೆಗಡುಕರಿಗೆ ಮತ್ತು ಹತ್ಯೆಗೆ ಪ್ರೇರೇಪಿಸಿರುವ ಯಾವುದೆ ರಾಜಕೀಯ ಪಕ್ಷದವರಾಗಿರಲಿ ಸ೦ಘಟಕರಾಗಲಿ ಅ೦ತಹ ಭಯೋತ್ಪಾದಕರನ್ನ ತಕ್ಷಣವೇ ಬ೦ದಿಸಿ ಗರಿಷ್ಟ ಶಿಕ್ಷೆಗೆ ಮುಂದಾಗಬೇಕು ಎ೦ದು
ಕರ್ನಾಟಕ ರಕ್ಷಣಾ ವೇದಿಕೆ(ಟಿ ಎ ನಾರಾಯಣ ಗೌಡರ) ಮಂಗಳೂರು ತಾಲೂಕು ಅಧ್ಯಕ್ಷ ಮಧುಸೂದನ ಗೌಡ ಅವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

 

ಪ್ರಗತಿಪರ ಚಿಂತಕಿ, ಮಾನವ ಹಕ್ಕು ಹೋರಾಟಗಾರ್ತಿ ಗೌರಿಲಂಕೇಶ್ ಹತ್ಯೆಗೆ ಇಂಡಿಯನ್ ಸೋಶಿಯಲ್ ಫೋರಮ್ ಖಂಡನೆ

ದಮಾಮ್: ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಹೋರಾಟವನ್ನೇ ಜೀವನವನ್ನಾಗಿಸಿದ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿಲಂಕೇಶ್ ರವರ ಹತ್ಯೆಯನ್ನು ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ರಾಜ್ಯ ಸಮಿತಿ- ದಮಾಮ್, ರಿಯಾದ್ ಹಾಗೂ ಜಿದ್ದಾ ಘಟಕ ತೀವ್ರವಾಗಿ ಖಂಡಿಸುತ್ತದೆ.
ಗೌರಿಲಂಕೇಶ್, ತಮ್ಮ ಜೀವನದ್ದುದ್ದಕ್ಕೂ ಲೇಖನ ಮತ್ತು ವಿಚಾರಧಾರೆಯ ಮೂಲಕ ಜಾತ್ಯತೀತ ಮತ್ತು ಪ್ರಜಾತಂತ್ರ ವ್ಯವಸ್ಥೆಯ ಉಳಿವಿಗಾಗಿ ಶ್ರಮಿಸಿದ್ದರು. ಯಾವುದೇ ಸಂದರ್ಭದಲ್ಲಿಯೂ ಫ್ಯಾಶಿಸ್ಟ್ ಶಕ್ತಿಗಳೊಂದಿಗೆ ರಾಜಿಯಿಲ್ಲದೆ ವೈಚಾರಿಕವಾಗಿ ಸಂಘರ್ಷ ನಡೆಸುತ್ತಲೇ ಬಂದಿರುವ ಗೌರಿಲಂಕೇಶ್ ರವರು ಓರ್ವ ಮಾನವತಾವಾದಿ ದಿಟ್ಟ ಮಹಿಳೆ ಯಾಗಿದ್ದರು.
ಗಾಂಧೀಜಿಯನ್ನು ಕೊಲ್ಲುವ ಮೂಲಕ ನಾಥೂರಾಮ್ ಗೋಡ್ಸೆಯಿಂದ ಪ್ರಾರಂಭವಾದ ಫ್ಯಾಸಿಸ್ಟ್ ಶಕ್ತಿಗಳ ಭಯೋತ್ಪಾದಕ ಆಕ್ರಮಣವು ಮುಂದುವರೆದು ದಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿ, ಗೌರಿ ಲಂಕೇಶ್ ಮುಂತಾದ ಗಾಂಧಿವಾದಿಗಳ ಹತ್ಯೆಯವರೆಗೆ ಮುಂದುವರೆದಿದೆ. ನಾಡು ಕಂಡ ಧಿಮಂತ ಪತ್ರಕರ್ತೆ ,ಚಿಂತಕಿ, ವಿಚಾರವಂತೆ, ಹೋರಟಗಾರ್ತಿ,ಪ್ರಗತಿಪರ ಬರಹಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆ ಖಂಡನಿಯವಾಗಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಈ ಪೈಶಾಚಿಕ ಕೃತ್ಯ ನಡೆಸಿದ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಇಂಡಿಯನ್ ಸೋಶಿಯಲ್ ಫೋರಂ ದಮ್ಮಾಮ್, ರಿಯಾದ್ ಹಾಗೂ ಜಿದ್ದಾ ಘಟಕದ ಪಧಾದಿಕಾರಿಗಳು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ. ನಾಡಿನ ಮಾನವಹಕ್ಕು ಹೋರಾಟಗಾರರಿಗೆ ಸರಕಾರವು ಸೂಕ್ತಭದ್ರತೆ ಒದಗಿಸುವ ಮೂಲಕ ಹೋರಾಟಗಾರರಿಗೆ ಮತ್ತು ಜನತೆಯಲ್ಲಿ ಆತ್ಮವಿಶ್ವಾಸ ಮೂಡಿಸಬೇಕಾಗಿದೆ ಎಂದು ಇಂಡಿಯನ್ ಸೋಶಿಯಲ್ ಫೋರಮ್ ಆಗ್ರಹಿಸುತ್ತದೆ.

 

ಅನಾಥವಾದ ಸಾಹಿತ್ಯ ಲೋಕ-ಎನ್.ಎಸ್.ಬಿ ಹಳೇ ವಿದ್ಯಾಥಿ೯ ಸಂಘ ದೇರಳಕಟ್ಟೆ

ಪತ್ರಕರ್ತೆ, ಸಾಹಿತಿ, ಹೋರಾಟಗಾರ್ತಿ, ಚಿಂತಕಿ ಜ್ಯಾತ್ಯಾತೀತೆ ನಿಲುವು ಹೊ೦ದಿದ ಗೌರಿ ಲಂಕೇಶ್ ಹತ್ಯೆಯನ್ನು ಎನ್.ಎಸ್.ಬಿ ಹಳೇ ವಿದ್ಯಾಥಿ೯ ಸಂಘ ದೇರಳಕಟ್ಟೆ ತೀವ್ರವಾಗಿ ಖಂಡಿಸುತ್ತೆ ಗೌರಿ ಲಂಕೇಶ್ ಅಗಲುವಿಕೆ ಗೌರಿ ಲ೦ಕೇಶ್ ಅವರ ಕುಟು೦ಬಕ್ಕೆ ಮಾತ್ರವಲ್ಲ ಬದಲಾಗಿ ಇಡಿ ವಿಶ್ವಕ್ಕೆ ಮತ್ತು ಪ್ರಜಾಪ್ರಭುತ್ವ, ಜಾತ್ಯತೀತತೆ, ಜನಪರ ಮತ್ತು ಕೋಮು ಸೌಹಾರ್ದದ ಹೋರಾಟಗಳಿಗೆ ತುಂಬಲಾರದ ನಷ್ಟವಾಗಿದೆ.
ಯಾವುದೆ ವಾದ ವಿವಾದಗಳನ್ನ ಆಚಾರ ವಿಚಾರಗಳನ್ನ ಮೌಕಿಕವಾಗಿ ಮುಗಿಸಲು ಸಾದ್ಯವಾಗದ ಭಯೋತ್ಪಾದಕರು ಇಂತಹ ಹೀನ ಕ್ರತ್ಯ ಎಸಗಿದ್ದಾರೆ.

ರಾಜ್ಯ ಸರಕಾರವು ಕೂಡಲೇ ತುರ್ತು ಕ್ರಮ ಕೈಗೊಂಡು ಕೊಲೆ ಗಡುಕರಿಗೆ ಮತ್ತು ಹತ್ಯೆಗೆ ಪ್ರೇರೇಪಿಸಿರುವ ಯಾವುದೆ ರಾಜಕೀಯ ಪಕ್ಷದವರಾಗಿರಲಿ ದುಷ್ಠ ಸ೦ಘಟಕರಾಗಲಿ ಅ೦ತಹ ಭಯೋತ್ಪಾದಕರನ್ನ ತಕ್ಷಣವೇ ಜೈಲಿಗೆ ಅಟ್ಟಿ ಗರಿಷ್ಟ ಶಿಕ್ಷೆ ಪ್ರಕಟಸಬೇಕು ಎ೦ದು ಎನ್.ಎಸ್.ಬಿ ಹಳೇ ವಿದ್ಯಾಥಿ೯ ಸಂಘ ದೇರಳಕಟ್ಟೆ ಅಧ್ಯಕ್ಷ ಹನೀಫ್ ಮದನಿ ನಗರ ಹಾಗೂ ಪ್ರಧಾನ ಕಾಯ೯ದಶಿ೯ ಕಲಂದರ್ ಶಾಫೀ ಅಸೈಗೋಳಿ ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

ಧಾರವಾಡದ ಪ್ರಗತಿಪರ ಸಂಘಟನೆಗಳು-ಪ್ರತಿಭಟನೆಗೆ ಕರೆ

ಸಂಗಾತಿಗಳೆ ,
ಕರ್ನಾಟಕದ ಹೋರಾಟದ ದಿಟ್ಟ ದನಿ Gouri lankesh ಅವರನ್ನು ಹೇಡಿಗಳು ಹತ್ಯೆ ಮಾಡಿದ್ದಾರೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹತ್ಯೆಯಾಗಿದೆ.
ನಾಳೆ ಬೆಳಿಗ್ಗೆ 10:00 ಗಂಟೆಗೆ ಡಾ. ಎಮ್.ಎಮ್. ಕಲ್ಬುರ್ಗಿಯವರ ಮನೆಯಿಂದ ಮೆರವಣಿಗೆಯನ್ನು ನಡೆಸಲಾಗುವುದು… ಕಾಲೇಜ್ ಗಳಿಗೆ ಬಂದ್ ಕರೆ ನೀಡಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿರುವ ಎಲ್ಲ ಸಂಗಾತಿಗಳು ಈ ಮೆರವಣಿಗೆಯಲ್ಲಿ ಭಾಗವಸಿ ಎಂದು ವಿನಂತಿಸಲಾಗಿದೆ.

 

ಪ್ರತಿಭಟನೆಗೆ ಕರೆ-ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ

ಹಿರಿಯ ಪತ್ರಕರ್ತೆ, ಸಾಹಿತಿ ಮತ್ತು ಮಾನವ ಹಕ್ಕು ಹೋರಾಟಗಾರ್ತಿಯಾದಂತಹ ಗೌರಿ ಲಂಕೇಶ್ ರವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿರುವುದನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪ್ರತಿಭಟನೆಗೆ ಕರೆ ನೀಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಪ್ರಕಟಣೆಯಲ್ಲಿ ತಿಳಿಸಿದೆ.

  • ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಬೆಳಿಗ್ಗೆ 9ಗಂಟೆಗೆ ಮಂಗಳೂರು ಜ್ಯೋತಿ ಸರ್ಕಲ್ ಬಳಿ
  • ಬೆಂಗಳೂರು ಜಿಲ್ಲಾ ಸಮಿತಿ ವತಿಯಿಂದ ಬೆಳಿಗ್ಗೆ  10:30ಕ್ಕೆ ಬೆಂಗಳೂರು ಟೌನ್ ಹಾಲ್ ಮುಂಭಾಗ
  • ಮಡಿಕೇರಿ ಜಿಲ್ಲಾ ಸಮಿತಿ ವತಿಯಿಂದ 2:00ಕ್ಕೆ ಮಡಿಕೇರಿ
  • 10:30ಗೆ ಕೊಪ್ಪಳದಲ್ಲಿ

 

ಫ್ಯಾಶಿಸ್ಟ್ ಶಕ್ತಿಗಳನ್ನು ಮಟ್ಟಹಾಕಲು ಜನಾಂದೋಲನ ನಡೆಯಬೇಕಿದೆ: ಎಸ್ ಐ ಓ ರಾಷ್ಟ್ರೀಯ ಕಾರ್ಯದರ್ಶಿ ಲಬೀದ್ ಶಾಫಿ

ಗೌರಿ ಲಂಕೇಶ್ ಹತ್ಯೆ ಖಂಡಿಸಿ ಎಸ್ ಐ ಓ ದಿಂದ ಕ್ಯಾಂಡಲ್ ಬತ್ತಿ ಹಿಡಿದು ಪ್ರತಿಭಟನೆ

ಮಂಗಳೂರು: ಬಡವರ ಪರ, ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಮಾತನಾಡುವವರನ್ನು ಕೊಲ್ಲುವ ಸಂಸ್ಕೃತಿ ಹೆಚ್ಚುತ್ತಿರುವುದು ಸಂವಿಧಾನ ನೀಡಿದ ವಾಕ್ ಸ್ವಾತಂತ್ರ್ಯಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ದೇಶದಲ್ಲಿಂದು ಫ್ಯಾಶಿಸ್ಟ್ ಶಕ್ತಿಗಳ ಅಟ್ಟಹಾಸ ಮಿತಿಮೀರುತ್ತಿದ್ದು, ಇದನ್ನು ಮಟ್ಟ ಹಾಕಲು ಜನಾಂದೋಲನ ನಡೆಯಬೇಕಾದ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ ಫ್ಯಾಶಿಸ್ಟ್ ಶಕ್ತಿಗಳನ್ನು ವಿರೋಧಿಸುವವರು ಕೇವಲ ಖಂಡನೆಗೆ ಮಾತ್ರ ಸೀಮಿತಗೊಳ್ಳದೆ, ಒಗ್ಗಟ್ಟಾಗಿ ಹೋರಾಡಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಆಪ್ ಇಂಡಿಯಾ(ಎಸ್ ಐ ಓ) ರಾಷ್ಟ್ರೀಯ ಕಾರ್ಯದರ್ಶಿ ಬ್ರ. ಲಬೀದ್ ಶಾಫಿ ಆಗ್ರಹಿಸಿದ್ದಾರೆ.

ಖ್ಯಾತ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ರವರ ಹತ್ಯೆಯನ್ನು ಖಂಡಿಸಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗಲ್ಲಿರುವ ಹ್ಯಾಮಿಲ್ಟನ್ ಸರ್ಕಲಿನಲ್ಲಿ ಇಂದು ರಾತ್ರಿ ಎಸ್ ಐ ಓ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ನಡೆದ ಕ್ಯಾಂಡಲ್ ಬತ್ತಿ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ಮಾತನಾಡುವವರ ಸದ್ದನ್ನು ಅಡಗಿಸಲು ವ್ಯವಸ್ಥಿತವಾಗಿ ಇಂತಹ ಹತ್ಯೆಗಳನ್ನು ಮಾಡಲಾಗುತ್ತಿದೆ. ವಿಚಾರವಾದಿ ಕಲಬುರ್ಗಿ ಯವರ ಹತ್ಯೆಗೈದವರನ್ನು ಬಂಧಿಸಲು ರಾಜ್ಯ ಸರಕಾರವು ವಿಫಲವಾದ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ರವರ ಹತ್ಯೆಯನ್ನು ದುಷ್ಕರ್ಮಿಗಳು ಮಾಡಿದ್ದು, ಇದು ಸರಕಾರದ ವಿಫಲತೆಗ ಹಿಡಿದ ಕೈಗನ್ನಡಿಯಾಗಿದೆ. ಸರಕಾರ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಗೌರಿ ಲಂಕೇಶ್ ರವರಿಗೆ ಗುಂಡು ಹಾರಿಸಿ ಹತ್ಯೆಗೈದ ದುಷ್ಕರ್ಮಿಗಳನ್ನು ಶೀಘ್ರವೇ ಪತ್ತೆ ಹಚ್ಚಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಇದನ್ನು ಗಂಭೀರವಾಗಿ ಪರಿಗಣಿಸಿಕೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯದೆಲ್ಲೆಡೆ ಉಗ್ರ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಲಬೀದ್ ಶಾಫಿ ತಿಳಿಸಿದರು.

ಈ ಸಂದರ್ಭದಲ್ಲಿ ಎಸ್ ಐ ಓ ಜಿಲ್ಲಾಧ್ಯಕ್ಷ ತಲ್ಹಾ ಇಸ್ಮಾಯೀಲ್ ಕೆ.ಪಿ, ಜಿಲ್ಲಾ ಕಾರ್ಯದರ್ಶಿ ಆಶಿಕ್ ಹಶಾಶ್, ಮಂಗಳೂರು ನಗರ ಕಾರ್ಯದರ್ಶಿ ಮುಂಝಿರ್ ಅಹ್ಸನ್ ಮತ್ತಿತರರು ಉಪಸ್ಥಿತರಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group