ರಾಜ್ಯ ಸುದ್ದಿ

ಬಿಜೆಪಿಯ ಬೈಕ್ ರ‍್ಯಾಲಿ ಸಮಾಜದ ಸಾಮರಸ್ಯ ಹಾಳು ಮಾಡುವುದರ ಪರ: ಮುಖ್ಯಮಂತ್ರಿ ಸಿದ್ದರಾಮಯ್ಯ

ವರದಿಗಾರ-ಬೆಂಗಳೂರು: ಸಮಾಜದ ಸ್ವಾಸ್ಥ್ಯ ಕೆಡಿಸುವುದಕ್ಕಾಗಿ ಮತ್ತು ರಾಜಕೀಯ ಲಾಭಕ್ಕೋಸ್ಕರ ಹಮ್ಮಿಕೊಳ್ಳಲಾಗಿದೆ ಎಂದು ಆರೋಪವಿರುವ ಮಂಗಳೂರು ಚಲೋ ಕಾರ್ಯಕ್ರಮದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸುತ್ತಾ,
ಬಿಜೆಪಿಯವರ ರ‍್ಯಾಲಿ ಹಿಂದೂ ಪರ ಅಲ್ಲ, ಅದು ಸಮಾಜದ ಸಾಮರಸ್ಯವನ್ನು ಹಾಳು ಮಾಡುವುದರ ಪರವಾಗಿದೆ ಎಂದು ಹೇಳಿದ್ದಾರೆ.

ಅವರು ಇಂದು ಅಂಬೇಡ್ಕರ್ ಭವನದಲ್ಲಿ ಮಾಧ್ಯಮ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಮಂಗಳೂರು ಚಲೋ ಬದಲಿಗೆ ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸುವುದಕ್ಕೊಸ್ಕರ ದೆಹಲಿ ಚಲೋ ಮಾಡಲಿ. ನಾವೂ ಬರುತ್ತೇವೆ ಎಂದು ಹೇಳಿದ್ದಾರೆ.

ಸಹಕಾರಿ ಬ್ಯಾಂಕ್‍ಗಳ ಮೂಲಕ ರೈತರು ಪಡೆದಿರುವ ಸಾಲವನ್ನು ಸುಮಾರು 50 ಸಾವಿರದವರೆಗೆ ನಾವು ಮನ್ನಾ ಮಾಡಿದ್ದೇವೆ. ರಾಷ್ಟ್ರೀಕೃತ ಮತ್ತು ಗ್ಯಾಮೀಣ ಬ್ಯಾಂಕ್‍ಗಳಲ್ಲಿ ರೈತರು ಮಾಡಿರುವ ಸಾಲ ಸುಮಾರು 42 ಸಾವಿರ ಕೋಟಿಗಳಿಷ್ಟಿದೆ. ಅದನ್ನು ಮನ್ನಾ ಮಾಡುವಂತೆ ಪ್ರಧಾನಿಯವರ ಮೇಲೆ ಒತ್ತಡ ಹೇರಲು ಬಿಜೆಪಿಯವರು ದೆಹಲಿ ಚಲೋ ಮಾಡಲಿ. ನಾವೂ ಕೈ ಜೋಡಿಸುತ್ತೇವೆ. ಅದು ಬಿಟ್ಟು ಸಮಾಜದ ಶಾಂತಿ ಮತ್ತು ಸಾಮರಸ್ಯ ಹಾಳು ಮಾಡುವ, ಸಾರ್ವಜನಿಕರಿಗೆ ತೊಂದರೆ ನೀಡುವ ರ‍್ಯಾಲಿಗಳೇಕೆ ಬೇಕು ಎಂದು ಅವರು ಮಾಧ್ಯಮಗಳೊಂದಿಗೆ ಪ್ರಶ್ನಿಸಿದ್ದಾರೆ.

ಬಿಜೆಪಿಯವರು ಪಾದಯಾತ್ರೆ ಅಥವಾ ಬಹಿರಂಗ ಸಭೆ ಮಾಡಿದರೆ ಅದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಬೈಕ್ ರ‍್ಯಾಲಿ ಒಪ್ಪುವುದಿಲ್ಲ. ಸಾವಿರಾರು ಬೈಕ್‍ಗಳು 4-5 ಕಡೆಗಳಿಂದ ರಸ್ತೆಗೆ ಇಳಿದರೆ ಸಾರ್ವಜನಿಕರಿಗೆ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ. ಅದು ಬೇಡ ಎಂಬುದಷ್ಟೇ ನಮ್ಮ ನಿಲುವು ಎಂದು ಹೇಳಿದರು.

ಇಷ್ಟಕ್ಕೂ ಸಾಮರಸ್ಯ ಹಾಳು ಮಾಡುವ ಇಂಥ ಕಾರ್ಯಕ್ರಮಗಳು ಏಕೆ ಬೇಕು ? ಮಂಗಳೂರು ಚಲೋ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಿಜೆಪಿಯವರು ಮುದ್ರಿಸಿರುವ ಪುಸ್ತಕ ನೋಡಿದ್ದೇನೆ. ಅದರಲ್ಲಿ ಪ್ರಚೋದನಕಾರಿ ಬರಹಗಳೇ ಇವೆ. ಸಮಾಜದ ಶಾಂತಿ ಮತ್ತು ಸಾಮರಸ್ಯ ಹಾಳು ಮಾಡುವ ಭಾಷಣಗಳಿವೆ. ನಾವು ಸಮಾಜದಲ್ಲಿ ಸಾಮರಸ್ಯ ನೆಲೆಸಲು ಪ್ರಯತ್ನಿಸಬೇಕೇ ಹೊರತು ಅದನ್ನು ಹಾಳು ಮಾಡುವ ಕೆಲಸ ಮಾಡಬಾರದು ಎಂದರು.

ಸಾವಿರಾರು ಬೈಕ್‍ಗಳಿಗೆ ಬಾವುಟ ಕಟ್ಟಿಕೊಂಡು, ಘೋಷಣೆಗಳನ್ನು ಕೂಗಿಕೊಂಡು ಹೊರಟರೆ ಶಾಂತಿಗೆ ಭಂಗವಾಗುವುದಿಲ್ಲವೇ? ಸಾರ್ವಜನಿಕರಿಗೆ ತೊಂದರೆ ಆಗುವುದಿಲ್ಲವೇ? ಬೇಕಾದರೆ ಬಿಜೆಪಿಯವರು ಪಾದಯಾತ್ರೆ ಮಾಡಲಿ. ಅದನ್ನು ನಾವೂ ಮಾಡಿದ್ದೇವೆ. ಅದು ಬಿಟ್ಟು ರಸ್ತೆಗಳನ್ನು ಬಂದ್ ಮಾಡುವುದು ಸರಿಯೇ? ಎಂದು ಪ್ರಶ್ನಿಸಿದ್ದಾರೆ.

ಬೈಕ್ ರ‍್ಯಾಲಿ ಮಾಡಲು ‘ಯಾರಪ್ಪನ ಅಪ್ಪಣೆಯೂ ಬೇಕಿಲ್ಲ’ ಎಂದು ಯಡಿಯೂರಪ್ಪ ಅವರು ಹೇಳಿಕೆ ನೀಡಿದ್ದಾರೆ. ನಾನು ಅವರಂತೆ ಏಕವಚನ ಬಳಸುವುದಿಲ್ಲ. ಅವರ ಭಾಷೆಯನ್ನು ಅನುಸರಿಸುವುದೂ ಇಲ್ಲ. ಕೆಟ್ಟ ಪದಗಳಿಂದಲೂ ಟೀಕೆ ಮಾಡುವುದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ವೀರಾವೇಷದಿಂದ ಮಾತನಾಡಿದರೆ ಅದಕ್ಕೆ ಕಾನೂನು ರೀತಿಯಲ್ಲಿಯೇ ಉತ್ತರ ನೀಡಬೇಕಾಗುತ್ತದೆ ಎಂದು ಯಡಿಯೂರಪ್ಪರಿಗೆ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group