ವರದಿಗಾರ (ಡಿ.24) ಇಂದು (ಡಿಸೆಂಬರ್ 24) ರಾತ್ರಿಯಿಂದ ಜಾರಿಯಾಗಬೇಕಿದ್ದ “ನೈಟ್ ಕರ್ಫ್ಯೂ”ನ್ನು ರಾಜ್ಯ ಸರ್ಕಾರ ಜಾರಿಯಾಗುವ ಮುನ್ನವೇ ವಾಪಸ್ ಪಡೆದಿದೆ. “ನೈಟ್ ಕರ್ಫ್ಯೂ”ಯನ್ನು ಘೋಷಿಸುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಟ್ರೋಲ್ ಗೆ ಒಳಗಾಗಿತ್ತಲ್ಲದೆ ಸಾರ್ವಜನಿಕರು ಸರಕಾರವನ್ನು ‘ಕಾಮಿಡಿ ಸರಕಾರ’ ಎಂದು ಪ್ರತಿಪಾದಿಸಲು ಪ್ರಾರಂಭಿಸಿದ್ದರು. ಸಾರ್ವಜನಿಕರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ನಿನ್ನೆ ಮಧ್ಯಾಹ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಡಿ.23 ರ ರಾತ್ರಿ 10ರಿಂದ ಬೆಳಿಗ್ಗೆ 6ರ ವರೆಗೆ “ನೈಟ್ ಕರ್ಫ್ಯೂ” ಘೋಷಿಸಿದ್ದರು. ಆ ಬಳಿಕ ಸಂಜೆಯಾಗುತ್ತಲೇ “ನೈಟ್ ಕರ್ಫ್ಯೂ” ಘೋಷಣೆಯನ್ನು ಡಿಸೆಂಬರ್ 24ರ ರಾತ್ರಿ (ಇಂದಿನಿಂದ) ರಾತ್ರಿ 11ರಿಂದ ಬೆಳಿಗ್ಗೆ 5ರ ವರೆಗೆ ಎಂದು ಆದೇಶದಲ್ಲಿ ಪ್ರಕಟಿಸಿದ್ದರು. ಇದು ಭಾರೀ ಚರ್ಚೆ ಮತ್ತು ಟ್ರೋಲ್ ಗೆ ಒಳಗಾಗಿತ್ತು. ಸಾಕಷ್ಟು ಜನರು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ರು. ಇಂದು “ನೈಟ್ ಕರ್ಫ್ಯೂ” ವಾಪಾಸ್ ಪಡೆದಿದ್ದು, ಮತ್ತಷ್ಟು ಬರಹಗಳು ಜಾಲತಾಣಗಳಲ್ಲಿ ರಾರಾಜಿಸತೊಡಗಿದೆ. ಹಲವರು “ಕಾಮಿಡಿ ನೈಟ್ ಕರ್ಫ್ಯೂ” ಎಂದು ಇದನ್ನು ಉಲ್ಲೇಖಿಸಿದ್ದಾರೆ.
ಬ್ರಿಟನ್ ನಲ್ಲಿ ರೂಪಾಂತರ ಹೊಂದಿದ ನೂತನ ಕೋವಿಡ್ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಡಿಸೆಂಬರ್ 24ರಿಂದ 9 ದಿನಗಳ ಕಾಲ ರಾಜ್ಯಾದ್ಯಂತ ಹೇರಿದ್ದ ರಾತ್ರಿ ಕರ್ಫ್ಯೂ ಆದೇಶವನ್ನು ಜಾರಿಯಾಗುವ ಮೊದಲೇ ದಿಢೀರ್ ಆಗಿ ವಾಪಸ್ ಪಡೆದಿದೆ.
ಈ ಕುರಿತಂತೆ ಸಿಎಂ ಯಡಿಯೂರಪ್ಪ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಕೊರೋನಾ ಭೀತಿಯ ನಿಯಂತ್ರಣಕ್ಕಾಗಿ ನೈಟ್ ಕರ್ಪ್ಯೂ ಜಾರಿಗೊಳಿಸಲಾಗಿತ್ತು. ಆದರೆ ಇಂತಹ ರಾತ್ರಿ ಕರ್ಪ್ಯೂ ಅಗತ್ಯವಿಲ್ಲ ಎನ್ನುವ ಅಭಿಪ್ರಾಯವನ್ನು ಅನೇಕರು ವ್ಯಕ್ತ ಪಡಿಸಿದ್ದಾರೆ. ಇದರಿಂದಾಗಿ ಇಂದು ರಾತ್ರಿಯಿಂದ ಜಾರಿಗೆ ಬರಲಿದ್ದಂತ ನೈಟ್ ಕರ್ಪ್ಯೂ ಆದೇಶವನ್ನು ವಾಪಾಸ್ ಪಡೆಯಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.
