ವರದಿಗಾರ ದೆಹಲಿ : ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಮೃತ ಗಣಪತಿ ಅವರ ತಂದೆ ಕುಶಾಲಪ್ಪ ಮತ್ತು ಸಹೋದರ ಈ ಕುರಿತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಉದಯ್ ಲಲಿತ್ ಮತ್ತು ಆದರ್ಶ ಕುಮಾರ್ ಅವರಿದ್ದ ದ್ವಿಸದಸ್ಯ ಪೀಠ ಸಿಬಿಐಗೆ ತನಿಖೆ ನಡೆಸುವಂತೆ ಆದೇಶ ನೀಡಿತಲ್ಲದೆ, ಮೂರು ತಿಂಗಳೊಳಗೆ ತನಿಖೆ ನಡೆಸಿ ವರದಿ ನೀಡುವಂತೆ ತಾಕೀತು ಮಾಡಿದೆ.
ಗಣಪತಿಯವರ ಆತ್ಮಹತ್ಯೆಯನ್ನು ಸಿಐಡಿ ತನಿಖೆಗೆ ಆದೇಶಿಸಿದ್ದ ರಾಜ್ಯ ಸರಕಾರ, ಸಿಐಡಿ ತನಿಖೆಯಲ್ಲಿ ಅದೊಂದು ಸಾಮಾನ್ಯ ಆತ್ಮಹತ್ಯೆ ಎಂಬ ವರದಿ ನೀಡಿತ್ತು ಮಾತ್ರವಲ್ಲ ಗಣಪತಿಯವರ ಕೆಲವೊಂದು ಕೌಟುಂಬಿಕ ಸಮಸ್ಯೆಗಳ ಕುರಿತೂ ಬೆಳಕು ಚೆಲ್ಲಿತ್ತು. ಆದರೆ ಆಗಸ್ಟ್ ತಿಂಗಳಲ್ಲಿ ವಿಧಿ ವಿಜ್ಞಾನ ತಂಡ ವ್ಯತಿರಿಕ್ತವಾದ ವರದಿಯೊಂದನ್ನು ಬಿಡುಗಡೆಗೊಳಿಸಿದ್ದು, ಅದರಲ್ಲಿ ಸಿಐಡಿ ತನಿಖೆಯಲ್ಲಿ ಅಳಿಸಿ ಹಾಕಲಾದ ಮೊಬೈಲ್ ಕರೆಗಳ ಮತ್ತು ಸಂದೇಶಗಳನ್ನು ತನಿಖಾ ವ್ಯಾಪ್ತಿಯೊಳಗೆ ಒಳಪಡಿಸಿಲ್ಲವೆಂದು ಹೇಳಿತ್ತು. ಈ ಘಟನೆಯನ್ನು ಮುಂದಿಟ್ಟುಕೊಂಡು ಬಿಜೆಪಿ, ಮುಖ್ಯಮಂತ್ರಿ ಸಿದ್ಧರಾಮಯ್ಯರ ರಾಜೀನಾಮೆಗೂ ಆಗ್ರಹಿಸಿತ್ತು.
ರಾಜ್ಯ ಸರಕಾರ ಸಿಐಡಿ ತನಿಖೆಗೆ ಆದೇಶ ನೀಡುವುದಕ್ಕಿಂತಲೂ ಮೊದಲು ರಾಜ್ಯ ಬಿಜೆಪಿ, ಆಗಿನ ಗೃಹ ಸಚಿವರಾಗಿದ್ದಂತಹ ಕೆ ಜೆ ಜಾರ್ಜ್’ರವರ ರಾಜೀನಾಮೆಗೆ ಆಗ್ರಹಿಸಿತ್ತು. ಸಿಐಡಿ ತನಿಖೆಯಲ್ಲಿ ತನ್ನ ಹಸ್ತಕ್ಷೇಪ ಇರಬಾರದೆಂಬ ನೆಲೆಯಲ್ಲಿ ಜಾರ್ಜ್ ತನ್ನ ರಾಜೀನಾಮೆಯನ್ನೂ ನೀಡಿದ್ದರು. ಸಿಐಡಿ ಕ್ಲೀನ್ ಚಿಟ್ ನೀಡಿದ ನಂತರ ಸಂಪುಟಕ್ಕೆ ಮರು ಸೇರ್ಪಡೆಗೊಂಡಿದ್ದರು.
