ರಾಜ್ಯ ಸುದ್ದಿ

ಸಮಾಜದ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಿದ್ದ ಕೆ.ಎಂ. ಷರೀಫ್ ವಿಧಿವಶ; ಗಣ್ಯರಿಂದ ಸಂತಾಪ  

ವರದಿಗಾರ (ಡಿ.22): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ) ಮಾಜಿ ರಾಷ್ಟ್ರೀಯ ಅಧ್ಯಕ್ಷ, ರಾಷ್ಟೀಯ ಸಮಿತಿ ಸದಸ್ಯರ, ಪ್ರಸ್ತುತ ಪತ್ರಿಕೆಯ ಸಂಪಾದಕಾರದ ಕೆ.ಎಂ. ಷರೀಫ್ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಕೆ.ಎಂ.ಷರೀಫ್ ರವರ ಅಗಲಿಕೆ ಈ ಸಮಾಜಕ್ಕೆ ಮತ್ತು ಸಂಘಟನೆಗೆ ತುಂಬಲಾರದ ನಷ್ಟವೆಂದು ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಅನೀಸ್ ಅಹ್ಮದ್ ತಿಳಿಸಿದ್ದಾರೆ.

ಶ್ವಾಸಕೋಶ, ರಕ್ತದೊತ್ತಡ, ಮಧುಮೇಹ ಸಮಸ್ಯೆಯಿಂದ ಕಳೆದ ಕೆಲವು ದಿನಗಳಿಂದ ಬಳಲುತ್ತಿದ್ದ ಅವರು ಇಂದು ವಿಧಿವಶರಾಗಿದ್ದು, ಅಪಾರ ಪ್ರಮಾಣದಲ್ಲಿರುವ ಇವರ ಬಂಧು ಮಿತ್ರರಿಗೆ ಷರೀಫ್ ರವರ ನಿಧನದ ಸುದ್ದಿ ಅಘಾತ ನೀಡಿದೆ.

ಪಾಪ್ಯುಲರ್ ಫ್ರಂಟ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಪ್ರೇರೇಪಿಸಿದ ಅವರು ಅಲ್ಪಸಂಖ್ಯಾತ ಸಮುದಾಯಗಳ ಮತ್ತು ದಲಿತ ಸಮುದಾಯದ ಒಗ್ಗಟ್ಟು, ರಾಜಕೀಯ ಅಸ್ತಿತ್ವದ ಬಗ್ಗೆ ತನ್ನದೇ ಪರಿಕಲ್ಪನೆಯನ್ನು ಹೊಂದಿದ್ದ ಕೆ.ಎಂ. ಷರೀಫ್ ರವರು “ಜನರಿಗೆ ಅಧಿಕಾರ” ಎಂಬ ಷೋಷಣೆಯಡಿ ನಡೆದ ಬದಲಾವಣೆಯ ರಾಜಕೀಯದ ಮುಂಚೂಣಿಯಲ್ಲಿ ನಿಂತು ಜನರ ಧ್ವನಿಯಾಗಿ ಪ್ರತಿಬಿಂಬಿತವಾಗಿದ್ದರು. ಸಾಕಷ್ಟು ಯುವಕರಲ್ಲಿ ಸಮಾಜದ ಬಗೆಗಿನ ಜಾಗೃತಿ ಮೂಡಿಸುವಲ್ಲಿ ಷರೀಫ್ ರವರ ಪಾತ್ರ ಬಹಳಷ್ಟಿದೆ ಎಂಬುವುದು ಸಾರ್ವಜನಿಕರ ಅಭಿಪ್ರಾಯ.

ಕೆ.ಎಂ.ಷರೀಫ್ ಅವರು ಪತ್ನಿ, ಮೂವರು ಪುತ್ರರು ಮತ್ತು ಪುತ್ರಿಯರು ಹಾಗೂ ಅಪಾರ ಪ್ರಮಾಣದ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ಅಗಲಿಕೆಗೆ ಸಾಮಾಜಿಕ, ರಾಜಕೀಯ, ಧಾರ್ಮಿಕ ನಾಯಕರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

ಸಂತಾಪಗಳು: 

ದಾದಾ ಕಲಂದರ್ ಬರೆಯುತ್ತಾರೆ, ಶರೀಫ್ ಭಾಯ್ ಇಷ್ಟು ಬೇಗ ನಮ್ಮನ್ನೆಲ್ಲ ಬಿಟ್ಟು ಅಗಲುವರೆಂದು ಎಣಿಸಿರಲಿಲ್ಲ. ಕೆಲವು ದಿನಗಳ ಹಿಂದೆ ಅಕ್ರಂ ಭಾಯ್, ಶರೀಫರು ಅನಾರೋಗ್ಯ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ತಿಳಿಸಿ ಒಂದು ಎಫ್ಬಿ ಪೋಸ್ಟ್ ಪ್ರಕಟಿಸಿದ್ದರು. ನಾನು ಸಾಧಾರಣ ಅನಾರೋಗ್ಯವಿರಬಹುದು, ಆರೋಗ್ಯವಂತರಾಗಿ ಮನೆಗೆ ಹಿಂದಿರುಗಿ ನಮ್ಮೊಟ್ಟಿಗೆ ಎಂದಿನಂತೆ ಚಟುವಟಿಕೆಯಿಂದ ಇರಲು ಬಂದೇ ಬರುತ್ತಾರೆಂದು ಭಾವಿಸಿದ್ದೆ. ಆದರೆ, ಅಷ್ಟರೊಳಗೆ ಅಲ್ಲಾಹನ ಕರೆಗೆ ಶರೀಫ್ ಭಾಯ್ ಓಗೊಟ್ಟಿದ್ದಾರೆ, ಹೌದು ಒಡೆಯನ ಕರೆಗೆ ಯಾರಿಗೂ ಓಗೊಡದಿರಲೂ ಸಾಧ್ಯವಿಲ್ಲವಲ್ಲ.

ಗೌರಿ ಲಂಕೇಶ್ ಮೇಡಂ ಲಂಕೇಶ್ ಪತ್ರಿಕೆಯ ಸಂಪಾದಕರ ಜವಾಬ್ದಾರಿ ಹೊತ್ತುಕೊಂಡು ಕಾಲಕ್ಕೆ ಕರ್ನಾಟಕ ಫೋರಂ ಪಾರ್ ಡಿಗ್ನಿಟಿ ಸಂಘಟನೆಯ ಅನೇಕ ಜನಪರ ಕಾರ್ಯಕ್ರಮಗಳ ವರದಿ ‘ಪತ್ರಿಕೆ”ಯಲ್ಲಿ ಇರುತ್ತಿದ್ದವು. ಎಲ್ಲಾ ಜನಪರ ದನಿಗಳಿಗೆ ಅವರು ತಮ್ಮ ಪತ್ರಿಕೆಯಲ್ಲಿ ಜಾಗ ಮೀಸಲಿಟ್ಟಿದ್ದ ಕಾರಣಕ್ಕೆ ಎಲ್ಲಾ ದಮನಿತರ ಪರ ಸಂಘಟನೆಗಳ ವರದಿಗಳೂ ಅಲ್ಲಿರುತ್ತಿದ್ದವು. ಹಾಗೆಯೇ ಅಂದಿನ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕೆಲವಾರು ಜನಾಂದೋಲನಗಳಿಗೆ ಕೆ ಎಫ್.ಡಿ.ಕೂಡ ಕೈ ಜೋಡಿಸಿದ್ದು ನನಗೆ ನೆನಪಿದೆ. ಮುಸ್ಲಿಮರ ಜನಾಂದೋಲನಗಳು ಉರ್ದು ಭಾಷೆಯ ಮಿತಿಯೊಳಗೆ ಸುತ್ತುತ್ತಿದ್ದ ಕಾಲಕ್ಕೆ ಸಾಂಪ್ರದಾಯಿಕ ಗಡಿಯನ್ನು ದಾಟಿ ಕಾನೂನು ಹೋರಾಟ, ಜನ ಜಾಗೃತಿ, ಸಂಘಟನೆ, ನೆಲದ ಭಾಷೆ ಕನ್ನಡದ ಮೂಲಕ ಮುಸ್ಲಿಮರು ಹೋರಾಟ ಕಟ್ಟುವ ಹೊಸ ಮಾದರಿಯೊಂದು ಹುಟ್ಟಿದ್ದು ಶರೀಫ್ ರವರ ಮುಂದಾಳತ್ವದಲ್ಲಿ ಎಂದರೆ ಅತಿಶಯೋಕ್ತಿಯಲ್ಲ. ಯಾವ ರೋಷ-ಆವೇಶವಿಲ್ಲದೆ, ತಣ್ಣಗಿನ ಅತ್ಯಂತ ಸಭ್ಯ ದನಿಯಲ್ಲಿ ಮಾತನಾಡುತ್ತಾ ಸಮುದಾಯದ ಸಮಸ್ಯೆಗಳು, ತಲ್ಲಣಗಳನ್ನು ವಿವಿಧ ಸ್ತರದ ಜನಗಳಿಗೆ ಅತ್ಯಂತ ಪರಿಣಾಮಕಾರಿಯಾಗಿ ದಾಟಿಸಿ ಜನ ಜಾಗೃತಿ ಹಾಗೂ ಪ್ರಜ್ಞಾವಂತಿಕೆಯನ್ನು ಮೂಡಿಸಿದ ದಮನಿತರ ಬಂಧು ಶರೀಫ್ ಭಾಯ್. ರಾಜಕೀಯವಾಗಿ, ಸಾಮಾಜಿಕವಾಗಿ ಧ್ವನಿ ಸತ್ತಂತಿದ್ದ ಮುಸ್ಲಿಮರ ಹೋರಾಟ ಇಂದು PFI & SDPI ಯ ರೂಪದಲ್ಲಿ ಮೈವೆತ್ತು ನಿಂತಿದೆಯೆಂದರೆ ಅದಕ್ಕೆ ಶರೀಫ್ ಭಾಯ್ ರಂಥವರ ಮುಂದಾಳತ್ವ ನೀಡಿದ ಕೊಡುಗೆ ಸಾಮಾನ್ಯವಾದದ್ದಲ್ಲ. ನಮ್ಮೆಲ್ಲರ ನೆನಪಲ್ಲಿ, ನಮ್ಮೊಡನೆ ಎಂದೆಂದಿಗೂ ನೀವಿರುತ್ತೀರಿ. ಅಲ್ಲಾಹನ ಆಜ್ಞೆಯಿದ್ದರೆ, ಸಮಾನತೆಯ ಆ ಬಯಲಿನಲ್ಲಿ ಮತ್ತೆ ಸಿಗೋಣ.

ಎಸ್ ಬಿ ಮುಹಮ್ಮದ್ ದಾರಿಮಿ (ಖತೀಬರು, ಕೇಂದ್ರ ಜುಮಾ ಮಸೀದಿ, ಪುತ್ತೂರು)

“ಪ್ರತಿಷ್ಟಿತ ಅಡ್ಯಾರ್ ಕಣ್ಣೂರು ಮುಹಮ್ಮದ್ ಹಾಜಿ ಮನೆತನದ ಕುಡಿ, ಮಿತ್ತಬೈಲಿನ ದೀರ್ಘ ಕಾಲದ ಖತೀಬ್ ಮರ್ಹೂಂ ಅಬ್ದುಲ್ಲ ಹಾಜಿಯವರ ಮಗ, ಪೂರ್ವ ಕಾಲದಲ್ಲಿ ಸಮಸ್ತದ ಕಾರ್ಯಕರ್ತರಾಗಿ ನಮ್ಮೊಂದಿಗೆ ಕೈ ಜೋಡಿಸಿದ್ದ , ಹೋರಾಟಗಾರ ಕೆ ಎಂ ಶರೀಪ್ ರವರ ನಿಧನಕ್ಕೆ ಸಂತಾಪ ಸೂಚಿಸುತ್ತೇನೆ.
ಅವರ ಬರ್ಝಖೀ ಜೀವನ ಸ್ವರ್ಗೀಯ ತಾಣವಾಗಿಸಿ ಆತ್ಮಕ್ಕೆ ಶಾಂತಿ ಲಭಿಸಲಿ. ಕುಟುಂಬ ವರ್ಗದವರಿಗೂ ಅವರ ಅಭಿಮಾನಿಗಳಿಗೂ ಇವರ ಅಗಲಿಕೆಯಿಂದ ಉಂಟಾದ ದುಖಃವನ್ನು ಸಹಿಸಲು ಸಹನೆಯನ್ನು ಅಲ್ಲಾಹು ದಯಪಾಲಿಸಲಿ. ಆಮೀ‌ನ್”

——————————————–

PFI ರಾಷ್ಟ್ರೀಯ ಸಮಿತಿ ನಾಯಕ ಕೆ. ಎಂ. ಶರೀಫ್ ರವರಿಗೆ ಶ್ರದ್ಧಾಂಜಲಿ

ಪಿ ಎಫ್ ಐ ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ಕೆ. ಎಂ. ಶರೀಫ್ ರವರು ಇನ್ನಿಲ್ಲವೆಂದು ತಿಳಿದು ಬೇಸರವಾಯಿತು. ಅವರ ಆತ್ಮಕ್ಕೆ ಪರಮಾತ್ಮನು ಸದ್ಗತಿಯನ್ನು ಕರುಣಿಸಲೆಂದು ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇನೆ.

ಕೆ. ಎಂ. ಶರೀಫ್ ರವರ ಜೊತೆ ಹಲವು ಬಾರಿ ಮಾತಾಡಿದ್ದೇನೆ, ಇವರ ಜೊತೆಗೆ ಅನೇಕ ಸಭೆ ಸಮಾರಂಭಗಳಲ್ಲಿ ವೇದಿಕೆಗಳನ್ನೂ ಹಂಚಿಕೊಂಡಿದ್ದೇನೆ.

ಶ್ರೇಷ್ಟ ಚಿಂತಕ, ಅಪ್ಪಟ ದೇಶಪ್ರೇಮಿ, ಪ್ರಾಮಾಣಿಕ ಜನಪರ ಹೋರಾಟಗಾರರಾದ ಕೆ. ಎಂ. ಶರೀಫ್ ರವರು ಆತ್ಮೀಯ ವ್ಯಕ್ತಿತ್ವದ ಸಹೃದಯರಾಗಿದ್ದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರು ಕೆ. ಎಂ. ಶರೀಫ್ ರವರ ಸ್ಪೂರ್ತಿ ಮತ್ತು ಮಾದರಿಯೊಂದಿಗೆ ಅದೇ ಹಿಂದಿನ ಉತ್ಸಾಹದೊಂದಿಗೆ ಮುಂದುವರಿದು ಅವರ ಆಶಯಗಳನ್ನು ಈಡೇರಿಸುತ್ತಾರೆಂಬ ಅಚಲ ವಿಶ್ವಾಸ ಎಲ್ಲರದು.

– ಶ್ರೀರಾಮ ದಿವಾಣ, ಶಿವನಹಳ್ಳಿ (ಉಡುಪಿ)


#ಇಸ್ಮತ್_ಪಜೀರ್

ಕಳಚಿ ಬಿದ್ದ ಹೋರಾಟದ ನಕ್ಷತ್ರ ಕೆ.ಎಂ.ಶರೀಫ್‌: ಒಂದು ನೆನಪು

ಶರೀಫ್ ಸಾಬ್‌ರ ಪರಿಚಯ ನನಗಾಗುವ ಹೊತ್ತಿಗೆ ನಾನು ಆಗಿನ್ನೂ ಕಾಲೇಜು ವಿದ್ಯಾರ್ಥಿ. ಆಗಲೇ ಅವರ ವಿದ್ವತ್ಪೂರ್ಣ ಭಾಷಣ ಮತ್ತು ಬರಹಗಳಿಂದ ನಾನು ಪ್ರಭಾವಿತಗೊಂಡಿದ್ದೆ. ಅಬ್ದುನ್ನಾಸರ್ ಮ‌ಅ‌ದನಿಯವರ ಭಾಷಣಗಳಿಂದ ಪ್ರಭಾವಿತಗೊಂಡಿದ್ದ ನಾನು ಮತ್ತು ನನ್ನಂತಹ ಹದಿ ಹರೆಯದ ವಿದ್ಯಾರ್ಥಿ ಯುವಜನತೆ ಮ‌‌ಅದನಿಯವರು ಕಂಬಿಯ ಹಿಂದೆ ತಳ್ಳಲ್ಪಟ್ಟ ಬಳಿಕ ಸೃಷ್ಟಿಯಾದ ನಿರ್ವಾತವನ್ನು ಹೋಗಲಾಡಿಸಲು ಹೊಸ ನಾಯಕನ ತಹ ತಹಿಕೆಯಲ್ಲಿದ್ದೆವು.‌ಅಂತಹ ಸಂದರ್ಭದಲ್ಲಿ ನಮ್ಮದೇ ನಾಡಿನಿಂದ ಹುಟ್ಟಿ ಬಂದ ಓರ್ವ ಅತ್ಯಂತ ಕಮಿಟೆಡ್ ಮುಸ್ಲಿಂ ಲೀಡರ್ ಕೆ.ಎಂ.ಶರೀಫ್ ಸಾಬ್.
ಅವರು ಚಳವಳಿಗಿಳಿದ ಆರಂಭ ಕಾಲದಿಂದಲೇ ಅವರ ವಿದ್ವತ್ಪೂರ್ಣ ಮಾತುಗಳು ಯುವಜನತೆಯಲ್ಲಿ ಸಂಚಲನ ಹುಟ್ಟಿಸಿದ್ದವು.
ಸುಮಾರು ಹದಿನೆಂಟು ವರ್ಷಗಳ ಹಿಂದೆ ಅವರು ವರದಕ್ಷಿಣೆ ವಿರುದ್ಧ ಒಂದು ಪ್ರಚಾರಾಂದೋಲನವನ್ನೇ ಕೈ‌ ಗೊಂಡಿದ್ದರು. ಅದರಲ್ಲಿ ಅವರು ಮಾಡುತ್ತಿದ್ದ ಭಾಷಣ ಮತ್ತು ಆಂದೋಲನದ ಭಾಗವಾಗಿ ಬರೆಯುತ್ತಿದ್ದ ಬರಹಗಳಿಂದ ಪ್ರಭಾವಿತರಾಗಿ ಸಹಸ್ರಾರು ಯುವಕರು ವರದಕ್ಷಿಣೆ ರಹಿತ ವಿವಾಹಕ್ಕೆ ಮುಂದೆ ಬಂದಿದ್ದು ಇತಿಹಾಸ.

ಆಗಷ್ಟೇ ಸಾರ್ವಜನಿಕ ಬದುಕಿಗೆ ಕಾಲಿಟ್ಟ ನಾನು ನಮ್ಮ ಸುತ್ತಮುತ್ತಲಲ್ಲಿ ಹರೆಯ ಮೀರಿದ ಹೆಣ್ಣು ಹೆತ್ತವರ ಸಂಕಟವನ್ನು ನೋಡುತ್ತಿದ್ದೆ. ಸಮುದಾಯವನ್ನು ಇಂಚಿಂಚಾಗಿ ತರಿದು ಕೊಲ್ಲುತ್ತಿರುವ ವರದಕ್ಷಿಣೆ ಎಂಬ ಮಹಾ ಮಾರಿಯ ವಿರುದ್ಧ ಕೆಲಸ ಮಾಡಬೇಕೆಂಬ ಹುಮ್ಮಸ್ಸು ನನ್ನಲ್ಲೂ ಹುಟ್ಟಿತ್ತು.
ಅದೇ ಸಮಯಕ್ಕೆ ನಮ್ಮ ಪಜೀರು ರಹ್ಮಾನಿಯಾ ಜುಮಾ ಮಸೀದಿಯಲ್ಲಿ ಐದು ದಿನಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಾಮಾನ್ಯವಾಗಿ ನಮ್ಮ ಜಮಾಅತ್‌ನಲ್ಲಿ ಧಾರ್ಮಿಕ ಪ್ರವಚನದ ಜವಾಬ್ದಾರಿಯನ್ನು ಯೂತ್ ಕಮಿಟಿಯೇ ವಹಿಸಿಕೊಳ್ಳುತ್ತಿತ್ತು. ನಮ್ಮೂರಿನ ಜಮೀಯತುತ್ತುಲಬಾ ಫ್ರೆಂಡ್ಸ್ ಅಸೋಸಿಯೇಶನ್‌ನ ಸಭೆಯಲ್ಲಿ ನಾನು “ವರದಕ್ಷಿಣೆ : ಇಸ್ಲಾಮಿನ ದೃಷ್ಟಿಕೋನದಲ್ಲಿ” ಎಂಬ ಸಬ್ಜೆಕ್ಟ್ ಮೇಲೆ ಒಂದು ದಿನದ ಪ್ರವಚನ ಇಟ್ಟುಕೊಳ್ಳಬೇಕೆಂಬ ಬೇಡಿಕೆಯಿಟ್ಟೆ. ಸಭೆ ನನ್ನ ಅಭಿಪ್ರಾಯವನ್ನು ಅಂಗೀಕರಿಸಿತು. ಪ್ರವಚನಕ್ಕೆ ಯಾರನ್ನು ಆಹ್ವಾನಿಸುವುದು ಎಂಬ ಚರ್ಚೆ ಬಂದಾಗ ನಾನು ಕೆ.ಎಂ.ಶರೀಫ್ ಸಾಬ್‌ರ ಹೆಸರನ್ನು ಸೂಚಿಸಿದೆ. ಹಿರಿಯರು ಅವರು ಧಾರ್ಮಿಕ ವಿದ್ವಾಂಸರಲ್ಲವಲ್ಲಾ ಎಂದು ತುಸು ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಶರೀಫ್ ಸಾಬ್ ಬೇಡ ಎಂದು ಯಾರೂ ಹೇಳಲಿಲ್ಲ. ಅವರ ಜೊತೆಗೆ ಇನ್ನೊಬ್ಬರು ಧಾರ್ಮಿಕ ವಿದ್ವಾಂಸರೂ ಬೇಕು ಎಂದರು. ನಾನು ಸರಿಯೆಂದೆ. ಆಗ ಕೆಲವರ್ಷಗಳ ಹಿಂದೆ ನಮ್ಮ ಮಸೀದಿಯಲ್ಲಿ ಖತೀಬರಾಗಿ ಕೆಲಸ ಮಾಡಿದ್ದ ಯುವಕರ ಅಚ್ಚು ಮೆಚ್ಚಿನ ಉಸ್ತಾದ್ ಒಬ್ಬರ ಹೆಸರನ್ನು ಯಾರೋ ಸೂಚಿಸಿದರು. ಆ ಉಸ್ತಾದ್ ನನಗೂ ಆತ್ಮೀಯರಾಗಿದ್ದುದರಿಂದ ನಾನೂ ಸಂತಸಪಟ್ಟೆ..
ಹಾಗೆ ಕಾರ್ಯಕ್ರಮದ ದಿನ ನಿಗದಿಯಾಯಿತು.‌ಅಂದು ಸಾಯಂಕಾಲದ ನಮಾಝಿನ ಬಳಿಕ ಉಸ್ತಾದರಿಗೆ ನೆನಪಿಸಲೆಂದು ಕರೆ ಮಾಡಿದರೆ ಉಸ್ತಾದ್ ಫೋನ್ ಎತ್ತಲೇ ಇಲ್ಲ. ಬೇರೆ ಬೇರೆ ನಂಬರ್‌ಗಳಿಂದ ಪ್ರಯತ್ನಿಸಿದರೂ ಉಸ್ತಾದ್ ಫೋನ್ ಎತ್ತಲೇ ಇಲ್ಲ.ಅಂದಿನ ವರದಕ್ಷಿಣೆ ಎಂಬ ಸಬ್ಜೆಕ್ಟ್ ನನ್ನ ಒತ್ತಾಸೆಯ ಮೇರೆಗೆ ಆಯ್ಕೆಯಾದುದರಿಂದ ನಾನಂತೂ ಅತೀವ ಟೆಂಷನ್‌ಗೊಳಗಾದೆ. ಆದದ್ದಾಗಲಿ, ಶರೀಫ್ ಸಾಬ್ ಹೇಗಿದ್ರೂ ಬರುತ್ತಾರಲ್ವಾ, ಅವರು ಖಂಡಿತಾ ಉಸ್ತಾದರ ಗೈರು ಹಾಜರಿಯನ್ನು ಸರಿದೂಗಿಸುತ್ತಾರೆಂದು ನನಗೆ ನಾನೇ ದೈರ್ಯ ಹೇಳಿದೆ. ( ಆ ಬಳಿಕ ಗೊತ್ತಾಗಿದ್ದೇನೆಂದರೆ ಆ ಉಸ್ತಾದ್ ವರದಕ್ಷಿಣೆ ಪಡೆದೇ ಮದುವೆಯಾದವರು)
ಶರೀಫ್ ಸಾಬ್‌ರಿಗೆ ಕರೆ ಮಾಡಿ ಎಷ್ಟು ಹೊತ್ತಿಗೆ ಕಾರು ಕಳುಹಿಸಬೇಕೆಂದು ಕೇಳಿದೆ.. ಏಯ್..‌ಅದೆಲ್ಲಾ ಬೇಡ.. ನಾನೇ ಬರುತ್ತೇನೆಂದರು. ರಾತ್ರಿ ಒಂಬತ್ತು ಗಂಟೆಗೆ ಶರೀಫ್ ಸಾಬ್ ಬರುವುದಕ್ಕೂ ಇದ್ದಕ್ಕಿದ್ದಂತೆ ಜಡಿಮಳೆ ಸುರಿಯುವುದಕ್ಕೂ ಸರಿ ಹೋಯಿತು. ಭಾಷಣ ಆಲಿಸಲು ಮಸೀದಿಯ ಕಂಪೌಂಡಿನಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ರಾತ್ರಿ ಸುಮಾರು ಹನ್ನೊಂದು ಗಂಟೆಯವರೆಗೆ ಮಳೆ ನಿಲ್ಲಬಹುದೆಂದು ಶರೀಫ್ ಸಾಬ್ ಕಾದರು. ಮಳೆ ಬಿಲ್ಕುಲ್ ನಿಲ್ಲಲೇ ಇಲ್ಲ. ಕಾರ್ಯಕ್ರಮವನ್ನು ಮರುದಿನಕ್ಕೆ ಮುಂದೂಡಲಾಯಿತು. ಶರೀಫ್ ಸಾಬ್ ಆಟೋ‌ರಿಕ್ಷಾದಲ್ಲಿ ಬಂದಿದ್ದರು. ಅವರು‌ ಮಸೀದಿಯೊಳಗಿದ್ದಾಗ ನಾನು ಆಟೋ ಡ್ರೈವರ್‌ಗೆ ಬಾಡಿಗೆ ಕೊಟ್ಟೆ.
ಮರುದಿನ ಕ್ಲಪ್ತ ಸಮಯಕ್ಕೆ ಕಾರ್ಯಕ್ರಮಕ್ಕೆ ಹಾಜರಾದ ಶರೀಫ್ ಸಾಬ್ ಮಸೀದಿಯ ಕಂಪೌಂಡಿಗೆ ಕಾಲಿಟ್ಟವರೇ ಮೊದಲು‌ ವಿಚಾರಿಸಿದ್ದು ” ಇಸ್ಮತ್ ಎಲ್ಲಿ…?” ಗೆಳೆಯರು ನನ್ನನ್ನು ಹುಡುಕಿಕೊಂಡು ಬಂದು ಶರೀಫ್ ಸಾಬ್ ನಿನ್ನನ್ನು ಕೇಳುತ್ತಿದ್ದಾರೆಂದರು. ನಾನು ಓಡೋಡಿ ಬಂದು ಸಲಾಂ ಹೇಳಿದೆ. ಸಲಾಂಗೆ ಜವಾಬು ಕೊಟ್ಟು ಅವರು ನನ್ನಲ್ಲಿ ಕೇಳಿದ ಮೊದಲ ಪ್ರಶ್ನೆ ” ನಿನ್ನಲ್ಲಿ ಆಟೋ ಬಾಡಿಗೆ ಕೊಡಲು ಹೇಳಿದವರ್ಯಾರು..?
ನಾನೇ ಕೊಟ್ಟೆ..
ನೋಡಪ್ಪಾ… ಪ್ರವಚನ ನನಗೆ ವೃತ್ತಿಯಲ್ಲ.. ಇದು ಈ ಸಮುದಾಯದ ಜೊತೆಗಿನ ನನ್ನ ಬದ್ಧತೆ… ಎಂದು ಗದರಿದರು.. ಸಾರಿ.. ಕ್ಷಮಿಸಿ ಎಂದೆ.
ಅಂದು ಶರೀಫ್ ಸಾಬ್ ಮಾಡಿದ ಭಾಷಣ ಬಹಳ ಪರಿಣಾಮಕಾರಿಯಾಗಿತ್ತು. ಕಾರ್ಯಕ್ರಮ ಮುಗಿಸಿ ಹೊರಡುವಾಗ ಅವರೇ ಬರೆದ ” ಶಾಂತಿಗಾಗಿ ಮದುವೆ” ಎಂಬ ಪುಟ್ಟ ಪುಸ್ತಕವೊಂದನ್ನು ನನಗೆ ಕೊಟ್ಟರು. ಮುಂದೆ ನಾನು “ಶಾಪದ ಕಣ್ಣೀರು” ಎಂಬ ನನ್ನ ಮೊದಲ ಕೃತಿ ಬರೆಯಲು ಅದೇ ಪ್ರೇರಣೆಯಾಯಿತು.

ಆ ಬಳಿಕ ನ್ಯಾಯಪರ ಚಳವಳಿಯಲ್ಲಿ ಅವರು ರಾಷ್ಟ್ರಮಟ್ಟದ ಫಿಗರ್ ಆದರು. ಪಾಪ್ಯುಲರ್ ಫ್ರಂಟ್‌ನ ರಾಷ್ಟ್ರೀಯ ಅಧ್ಯಕ್ಷರಾದರೂ ಕೂಡಾ
ಎಷ್ಟೇ ಜನರ ಮಧ್ಯೆ ಇದ್ದರೂ ” ಇಸ್ಮತ್ ” ಎಂದು ಹತ್ತಿರ ಕರೆದು ಮಾತನಾಡಿಸುತ್ತಿದ್ದರು. ಹಿಂದಿನ ಅದೇ ಪ್ರೀತಿ ತೋರುತ್ತಿದ್ದರು.. ಹೋರಾಟದ ರಂಗದಲ್ಲಿ ನಾನು ಬೇರೆಯೇ ದಾರಿ ಹಿಡಿದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಗೆ ಸೇರಿಕೊಂಡೆ..
ಇಂದು ಶರೀಫ್ ಸಾಬ್ ನಮ್ಮನ್ನಗಲಿದ್ದಾರೆ.. ಇದು ಕೇವಲ ಮುಸ್ಲಿಂ ಸಮುದಾಯಕ್ಕಾದ ನಷ್ಟವಲ್ಲ. ಫ್ಯಾಸಿಸ್ಟ್ ವಿರೋಧೀ ಚಳವಳಿಗೆ ಅವರ ಅಗಲಿಕೆ ತುಂಬಲಾರದ ನಷ್ಟ.. ಅವರು ತೋರಿಸಿಕೊಟ್ಟ ದಾರಿಯಲ್ಲಿ ಬದ್ಧತೆಯಿಂದ ಮುನ್ನಡೆಯುವುದು ನಾವು ಅವರಿಗೆ ಸಲ್ಲಿಸಬಹುದಾದ ಅತ್ಯಂತ ಶ್ರೇಷ್ಠ ಶೃದ್ದಾಂಜಲಿ.. ಅವರು ಅರಿತೋ ಅರಿಯದೆಯೋ ಮಾಡಿರಬಹುದಾದ ಪಾಪಗಳನ್ನು ಅಲ್ಲಾಹು ಕ್ಷಮಿಸಲಿ.. ಕಬರನ್ನು ಅಲ್ಲಾಹನು ಸ್ವರ್ಗೋಧ್ಯಾನ ಮಾಡಲಿ..
******************************

ಕೆ ಎಂ ಶರೀಫ್ ಸಾಬ್, ನಿಮಗಿದೋ ವಿದಾಯದ ಸಲಾಂ

✒️ ರಫೀಕ್ ಮಾಸ್ಟರ್

ಸಮುದಾಯಕ್ಕಾಗಿ ಚಲಿಸಿದ ದೇಹ ನಿಶ್ಚಲವಾಗಿದೆ.

ಸಮುದಾಯಕ್ಕಾಗಿ ಮೊಳಗಿದ ಧ್ವನಿ ಮೌನವಾಗಿದೆ.

ಸಮುದಾಯಕ್ಕಾಗಿ ಮಿಡಿದ ಹೃದಯದ ಬಡಿತ ನಿಂತಿದೆ.

ಸಮುದಾಯಕ್ಕಾಗಿ ಚಿಂತಿಸಿದ ಮೆದುಳು ನಿಷ್ಕ್ರಿಯವಾಗಿದೆ.

ಸಮುದಾಯಕ್ಕಾಗಿ ಬರೆದ ಕೈಗಳು ನಿರ್ಬಲವಾಗಿದೆ.

ಆದರೆ ಸಮುದಾಯಕ್ಕಾಗಿ ಹೊತ್ತಿಸಿದ ಕಿಚ್ಚು ಇನ್ನೂ ಬೆಳಗುತ್ತಿದೆ.

ಕೆ ಎಂ ಶರೀಫ್ ಸಾಬ್
ನಿಮಗಿದೋ ವಿದಾಯದ ಸಲಾಮ್.

ಸ್ವರ್ಗದ ಬಾಗಿಲು ನಿಮಗೆ ತೆರೆಯಲಿ.
ನಿಮ್ಮ ಸವಿ ನೆನಪು ಸದಾ ಉಳಿಯಲಿ. ಆಮೀನ್


ಕೆ. ಎಂ. ಷರೀಫ್ ಸಾಬ್‌ರವರ ಅನಿರೀಕ್ಷಿತ ಮರಣ ವಾರ್ತೆ ತಿಳಿದು ಅಘಾತವಾಯ್ತು. ಸಮಾಜ ಮತ್ತು ಸಮುದಾಯದ ಸಬಲೀಕರಣಕ್ಕೆ ಪಣ ತೊಟ್ಟಿದ್ದ, ಅಪೂರ್ವ ಚಿಂತಕ, ನಿರಂತರ ಹೋರಾಟಗಾರ, ಯುವ ಸಮುದಾಯದ ಮಾರ್ಗದರ್ಶಕನನ್ನು ನಾವು ಕಳೆದುಕೊಂಡೆವು. ಅಲ್ಲಾಹು ಅವರಿಗೆ ಮಗ್ಫಿರತ್ ಮತ್ತು ಮರ್ಹಮತ್ ನೀಡಿ ಅನುಗ್ರಹಿಸಲಿ. ಅವರ ಖಬ್ರ್‌ನ್ನು ಸ್ವರ್ಗದ ಉದ್ಯಾನವನ್ನಾಗಿ ಮಾರ್ಪಡಿಸಲಿ, ಮೃತರ ಕುಟುಂಬ, ಬಂದು-ಬಳಗದವರಿಗೆ ದುಖ:ವನ್ನು ಸಹಿಸುವ  ತಾಳ್ಮೆ-ಸಹನೆ ಶಕ್ತಿಯನ್ನು ಅಲ್ಲಾಹು ಕರುಣಿಸಲಿ ಆಮೀನ್.

ಮಹಮ್ಮದ್ ಅಲಿ ಕಮ್ಮರಡಿ
ಸದಸ್ಯ, ಕರ್ನಾಟಕ ರಾಜ್ಯ ಆಹಾರ ಆಯೋಗ


ಪಿಎಫ್ಐ ನಾಯಕ ಕೆ‌.ಎಂ.ಶರೀಫ್ ಅವರ ನಿಧನಕ್ಕೆ ಜಮಾಅತೇ ಇಸ್ಲಾಂ ಹಿಂದ್ ನಗರಾಧ್ಯಕ್ಷ ಕೆ.ಎಂ.ಅಶ್ರಫ್ ಸಂತಾಪ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿ.ಎಫ್.ಐ) ಸಂಘಟನೆಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಮಾಜಿ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದ ಕೆ.ಎಂ. ಶರೀಫ್ ಇಂದು ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಜಮಾಅತೇ ಇಸ್ಲಾಮಿ ಹಿಂದ್ ಮಂಗಳೂರು ನಗರಾಧ್ಯಕ್ಷರಾದ ಕೆ.ಎಂ. ಅಶ್ರಫ್ ರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಯುವಕರಲ್ಲಿ ಸಾಮಾಜಿಕ ಸಾಮುದಾಯಿಕ ಕಳಕಳಿಯನ್ನು ಮೂಡಿಸುವಲ್ಲಿ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗಮನ ಹರಿಸಿದ್ದರು. ಅಲ್ಪಸಂಖ್ಯಾತ ಸಮುದಾಯಗಳ ಮತ್ತು ದಲಿತ ಸಮುದಾಯದ ಒಗ್ಗಟ್ಟು, ರಾಜಕೀಯ ಅಸ್ತಿತ್ವದ ಬಗ್ಗೆ ತನ್ನದೇ ಪರಿಕಲ್ಪನೆಯನ್ನು ಹೊಂದಿದ್ದರು. ಉತ್ತಮ ವಾಗ್ಮಿಯೂ ಆಗಿದ್ದ ಅವರು ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಯ ಮೂಲಕ ಹಲವಾರು ಚಳುವಳಿಯಲ್ಲಿ ಮುಂಚೂಣಿಯಲ್ಲಿ ನಿಂತು ಕೊಂಡಿದ್ದರು. ಉತ್ಸಾಹ, ಗಾಂಭೀರ್ಯ ವ್ಯಕ್ತಿತ್ವ, ಮೃದು ಮನಸ್ಸಿನವಾರದ ಅವರಿಗೆ ಸರ್ವಶಕ್ತನಾದ ಅಲ್ಲಾಹನು ಅವರಿಗೆ ಮಗ್ಫಿರತ್ ಮತ್ತು ಮರ್ಹಮತ್ ನೀಡಿ ಅನುಗ್ರಹಿಸಲಿ ಮತ್ತು ಅವರ ಕುಟುಂಬಕ್ಕೆ ಮತ್ತು ಅವರ ಕಾರ್ಯಕರ್ತರಿಗೆ ಮತ್ತು ಸಮುದಾಯ ಬಂಧುಗಳಿಗೆ ಅವರ ಅಗಲಿಕೆಯನ್ನು ಸಹಿಸಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಪಿಎಫ್ಐ ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ಕೆ.ಎಂ. ಶರೀಫ್ ರವರ ನಿಧನಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ಮುಹಮ್ಮದ್ ಸಾದ್ , ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯಾಧ್ಯಕ್ಷ ಅಬ್ದುಸ್ಸಲಾಮ್ ಉಪ್ಪಿನಂಗಡಿ, ದ.ಕ. ಜಿಲ್ಲಾಧ್ಯಕ್ಷ ಸಯೀದ್ ಇಸ್ಮಾಯೀಲ್ , ಹಾಗೂ ಮುಖಂಡರಾದ ಕೆ.ಎಂ. ಷರೀಫ್ ಸಂತಾಪ ಸೂಚಿಸಿದ್ದಾರೆ‌.


*ಕೆ ಎಂ ಶರೀಪ್ ನಿಧನಕ್ಕೆ ಮುಸ್ಲಿಂ ಲೀಗ್ ಸಂತಾಪ*

*ಪ್ರತಿಷ್ಟಿತ ಅಡ್ಯಾರ್ ಕಣ್ಣೂರು ಮುಹಮ್ಮದ್ ಹಾಜಿ ಮನೆತನದ* *ಕುಡಿ,ಮಿತ್ತಬೈಲಿನ ದೀರ್ಘ ಕಾಲದ ಖತೀಬ್ ಆಗಿ ಸೇವೆಗೈದ* *ಮರ್ಹೂಂ* *ಅಬ್ದುಲ್ಲ* *ಹಾಜಿಯವರ ಮಗ ,ಪೂರ್ವ ಕಾಲದಲ್ಲಿ ಸಮಸ್ತದ* *ಕಾರ್ಯಕರ್ತರಾಗಿ ಮುಸ್ಲಿಂ ಲೀಗ್ ಇದರ ವಿದ್ಯಾರ್ಥಿ ಸಂಘಟನೆಯಾದ* *ಎಮ್. ಎಸ್. ಎಫ್. ನಿಂದ ರಾಜಕೀಯ ಪ್ರವೇಶಿಸಿದ ,ಶರೀಫ್* *ರವರು ಉತ್ತಮ ವಾಗ್ಮಿ* *ಹಾಗೂ* *ಬರಹಗಾರರಾಗಿದ್ದರು* *ಉತ್ತಮ* *ಹೋರಾಟಗಾರರಾಗಿದ್ದ ಕೆ. ಎಮ್. ಶರೀಫ್ ರವರ ನಿಧನವು ಸಮಾಜಕ್ಕೆ* *ತುಂಬಲಾರದ ನಷ್ಟ ಎಂದು ಮುಸ್ಲಿಂ ಲೀಗ್ ಜಿಲ್ಲಾ ಸಮಿತಿಯು ತೀವ್ರ *ಸಂತಾಪ* *ಸೂಚಿಸುದರೊಂದಿಗೆ*
*ಅವರ ಬರ್ಝಖೀ ಜೀವನವು ಅಲ್ಲಾಹನು* *ಸ್ವರ್ಗೀಯ* *ತಾಣವಾಗಿಸಿ* *ಆತ್ಮಕ್ಕೆ ಶಾಂತಿ* *ನೀಡಲಿ.ಕುಟುಂಬ* *ವರ್ಗದವರಿಗೂ ಅವರ* *ಅಭಿಮಾನಿಗಳಿಗೂ ಇವರ ಅಗಲಿಕೆಯಿಂದ ಉಂಟಾದ ದುಖಃವನ್ನು* *ಸಹಿಸಲು* *ಸಹನೆಯನ್ನು ಅಲ್ಲಾಹು* *ದಯಪಾಲಿಸಲಿ* .
*ಆಮೀ‌ನ್*

*ತಬೂಕ್ ಅಬ್ದುಲ್* *ರಹ್ಮಾನ್* *ದಾರಿಮಿ ಅಧ್ಯಕ್ಷರು* *ಮುಸ್ಲಿಂ ಲೀಗ್ ಜಿಲ್ಲಾ* *ಸಮಿತಿ*

 


ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಯ 2006 ರ ಸಮಯ ಅಂದು ಬಾಬಾ ಬುಡನ್ ಗಿರಿ ಹೋರಾಟದಲ್ಲಿ ಸೌಹಾರ್ದ ನಡೆ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದಕ್ಕೆ ಗೌರಿ ಲಂಕೇಶ್ ಕೆ. ಎಂ ಶರೀಫ್ ಸೇರಿದಂತೆ ಸುಮಾರು 180 ಜನರಿಗೆ ಅಂದು ಚಿಕ್ಕಮಗಳೂರು ಜಿಲ್ಲಾಡಳಿತ ನಮಗೆ ಬಂಧಿಸಿ ಹೊಸ ಜೈಲಿಗೆ ಹಾಕಿದರು ಅಂದು ನನಗೆ ಜೈಲಿನಲ್ಲಿ ಪರಿಚಯ ಶರೀಫ್ ರವರು ಆಗಿದ್ದರು ಅವರ ಮೃದು ಸ್ವಭಾವದ ವ್ಯಕ್ತಿತ್ವ ಹೋರಾಟ ಮಾತುಗಳು ಹಾಗೂ ಆನೇಕ ವಿಷಯ ಗಳಲ್ಲಿ ಅವರಿಗೆ ಜ್ಞಾನ ಇತ್ತು ಇಂಥಹ ವ್ಯಕ್ತಿ ಯ ಸ್ನೇಹ ದಿಂದ ಹೋರಾಟದ ಶಕ್ತಿ ಹೆಚ್ಚುತ್ತು ಇಂದು ಕೆ. ಎಂ ಶರೀಫ್ ನಿಧಾನವಾಗಿ ದರೆ ಎಂದು ಕೇಳಿದೆ ಅಲಾ ಅವರಿಗೆ ಜನತ್ ನೀಡಲಿ ಎಂಬ ದುವ ಮಾಡುವೆ

ಟಿ.ಅಸ್ಗರ್ ದಾವಣಗೆರೆ

 


ನಾನು ಭೇಟಿಯಾದ ತಮ್ಮ ಸಂಘಟನೆಯ ಮೊದಲ ವ್ಯಕ್ತಿ ಶರೀಫ್ ಭಾಯ್. ನಮ್ಮ ಭೇಟಿ ಬಹಳ ಅರ್ಥಪೂರ್ಣವಾಗಿತ್ತು ಮತ್ತು ಆತ್ಮೀಯವಾಗಿತ್ತು. ನಂತರದ ದಿನಗಳಲ್ಲಿ ಭೇಟಿಯಾಗದೇ ಇದ್ದಾಗ ಅವರನ್ನು ಬಹಳ ಮಿಸ್ ಮಾಡಿಕೊಂಡಿದ್ದೇನೆ. ಸುದ್ದಿ ಕೇಳಿ ಬಹಳ ದುಃಖವಾಗಿದೆ. ಸಂಘಟನೆಗೆ ಮತ್ತು ಸಮಾಜಕ್ಕೆ ಬಹಳ ಮಹತ್ವದ ಕೊಡುಗೆಯನ್ನು ಅವರು ಕೊಟ್ಟುಹೋಗಿದ್ದಾರೆ. ಅವರ ಕನಸಿನಂತೇ ಕೆಲಸ ಸಾಗಲಿ.

-ನೂರ್ ಶ್ರೀಧರ್


😌😌😌😌😌😌😌😌😌😌😌

*ಜನನಾಯಕ ಕೆ.ಎಂ. ಶರೀಫ್ ನಿಧನಕ್ಕೆ “ಯುನಿವೆಫ್ ಕರ್ನಾಟಕ” ತೀವ್ರ ಸಂತಾಪ*
〰️〰️〰️〰️〰️〰️〰️〰️〰️〰️〰️

*ಸಾಮಾಜಿಕ ರಂಗದಲ್ಲಿ ಕಳೆದ ಅನೇಕ ದಶಕಗಳಿಂದ ಸಕ್ರಿಯರಾಗಿದ್ದ, ಶೋಷಿತರ ಪರ ಮತ್ತು ಶೋಷಕರ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದ, ಸಾಮಾಜಿಕ ಬದಲಾವಣಿಗೆ ಸರ್ವ ರೀತಿಯಿಂದಲೂ ತಮ್ಮನ್ನು ತೊಡಗಿಸಿಕೊಂಡಿದ್ದ, ವಾಗ್ಮಿಯೂ, ಲೇಖಕರೂ ಮತ್ತು ಸಂಘಟಕರೂ ಆಗಿದ್ದ ಪಿಎಫ್ಐ ಇದರ ಮಾಜಿ ರಾಷ್ಟ್ರಾ ಧ್ಯಕ್ಷ ಕೆ. ಎಂ. ಶರೀಫ್ ರವರ ನಿಧನಕ್ಕೆ ಯುನಿವೆಫ್ ಕರ್ನಾಟಕ ತೀವ್ರ ಸಂತಾಪವನ್ನು ಸೂಚಿಸುತ್ತದೆ.*

*ಕೆ.ಎಫ್,ಡಿ. ಎಂಬ ಸಾಮಾಜಿಕ ಸಮಾನತೆಗಾಗಿ ಹೋರಾಡುವ ಸಂಘಟನೆಯಲ್ಲಿ ಗುರುತಿಸಿಕೊಳ್ಳುವ ಮೊದಲೇ ಅವರು ಸಮಾಜದ ಬಗ್ಗೆ ಕಾಳಜಿಯುಳ್ಳವರಾಗಿದ್ದರು. ಸಾಮಾಜಿಕ ಅನಿಷ್ಟಗಳ ವಿರುದ್ಧ ತನ್ನದೇ ಶೈಲಿಯಲ್ಲಿ ನಿರ್ದಿಷ್ಟ ಯೋಜನೆಗಳೊಂದಿಗೆ ಕಾರ್ಯಪ್ರವೃತ್ತರಾಗಿದ್ದರು*

*ಅನೇಕರಿಗೆ ಮಾರ್ಗದರ್ಶಕರೂ ಆಗಿದ್ದ ಅವರು ಓರ್ವ ಸಮರ್ಥ ಸಂಘಟಕರೂ ಆಗಿದ್ದರು. ತಮ್ಮ ಭಾಷಣ ಮತ್ತು ಲೇಖನಗಳಿಂದ ಯುವ ಸಮೂಹವನ್ನು ಆಕರ್ಷಿಸಿದ್ದ ಅವರು ಅನೇಕ ಯುವಕರ ಭವಿಷ್ಯ ರೂಪೀಕರಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಅವರ ಅಧ್ಯಯನಾತ್ಮಕ ತರಗತಿಗಳು ಮತ್ತು ವಿಮರ್ಶಾತ್ಮಕ ಭಾಷಣಗಳು ಜನರನ್ನು ಚಿಂತಿಸುವಂತೆ ಮಾಡುತ್ತಿತ್ತು. ಭಾಷಣ ಮತ್ತು ಲೇಖನಗಳಲ್ಲಿ ತೀಕ್ಷ್ಣತೆ ಇದ್ದರೂ ವೈಯಕ್ತಿಕವಾಗಿ ಮೃದು ಸ್ವಭಾವದವರಾಗಿದ್ದರು. ಇದು ಹೆಚ್ಚಿನವರನ್ನು ಆಕರ್ಷಿಸುತ್ತಿತ್ತು.*
*ಮಿತಭಾಷಿ ಮತ್ತು ಸರಳ ಜೀವಿಯಾಗಿದ್ದ ಕೆ. ಎಂ. ಶರೀಫ್ ಯುವಕರಿಗೆ ಸ್ಪೂರ್ತಿ ಮತ್ತು ಮಾದರಿ ಆಗಿದ್ದಾರೆ. ಅವರ ನಿಧನವು ಸಮುದಾಯಕ್ಕೆ ದೊಡ್ಡ ನಷ್ಟವಾಗಿದೆ.*
*ಯುನಿವೆಫ್ ಕರ್ನಾಟಕ ಅವರ ಅಗಲುವಿಕೆಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ*
*ಅಲ್ಲಾಹನು ಅವರಿಗೆ ಮರ್ಹಮತ್ ಮತ್ತು ಮಗ್ಫಿರತ್ ದಯಪಾಲಿಸಲಿ. ಅವರ ಎಲ್ಲಾ ಪಾಪಗಳನ್ನು ಮನ್ನಿಸಲಿ. ಮತ್ತು ಜನ್ನಾತುಲ್ ಫಿರ್ದೌಸ್ ನಲ್ಲಿ ಪ್ರವೇಶಿಸಲಿ.*

ರಫೀಉದ್ದೀನ್ ಕುದ್ರೋಳಿ
ಅಧ್ಯಕ್ಷರು,ಯುನಿವೆಫ್ ಕರ್ನಾಟಕ.

 

 

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group