‘ರಾಜ್ಯದ ರೈತರ ಪ್ರತಿಭಟನೆಯೂ ರಾಜಕೀಯ ಪ್ರೇರಿತ’
ವರದಿಗಾರ (ಡಿ.22): ದೇಶದ ರಾಜಧಾನಿ ದೆಹಲಿಯಲ್ಲಿ ಕಳೆದ ಒಂದು ತಿಂಗಳಿನಿಂದ ಕೇಂದ್ರ ಸರಕಾರ ಕೃಷಿ ಮಸೂದೆ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಈ ದೇಶದ ಅನ್ನದಾತರನ್ನು ಸಂಸದೆ ಶೋಭಾ ಕರಂದ್ಲಾಜೆ ಅರ್ಬನ್ ನಕ್ಸಲರೆಂದು ಜರಿದಿದ್ದು, ಸಾರ್ವಜನಿಕರ ಮತ್ತು ವಿಶೇಷವಾಗಿ ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.
ಕೇಂದ್ರದ ಪೌರತ್ವ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ ‘ತುಕುಡೇ ಗ್ಯಾಂಗ್’ ಇಂದು ಕೇಂದ್ರದ ಕೃಷಿ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆ ನಿರತರೆಲ್ಲ ರೈತರಲ್ಲ, ಅವರು ಅರ್ಬನ್ ನಕ್ಸಲರು ಎಂದು ಉಡುಪಿ ಮತ್ತು ಚಿಕ್ಕಮಂಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದು, ತನ್ನ ಕೀಳು ಮಟ್ಟದ ನಾಲಗೆಯನ್ನು ಮತ್ತೊಮ್ಮೆ ಹರಿಯಬಿಟ್ಟಿದ್ದಾರೆ.
ಕಾರ್ಕಳದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಕರಂದ್ಲಾಜ, ಹರಿಯಾಣ ಮತ್ತು ಪಂಜಾಬಿನ ರೈತರು ದೆಹಲಿಯಲ್ಲಿ ರೈತ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರೆಲ್ಲ ನಿಜವಾದ ರೈತರಲ್ಲ ಎಂದರು.
ರಾಜ್ಯದಲ್ಲಿ ಕೂಡ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಅಧಿವೇಶನ ಸಂದರ್ಭ ಹೋರಾಟ ನಡೆಸಿದ್ದರು. ಕೋಡಿಹಳ್ಳಿ ನೇತೃತ್ವದ ರೈತ ಹೋರಾಟ ರಾಜಕೀಯ ಪ್ರೇರಿತ. ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್, ಸಿದ್ಧರಾಮಯ್ಯ ಇವರೆಲ್ಲ ಸೇರಿಕೊಂಡು ಸರಕಾರದ ವಿರುದ್ಧ ನಡೆಸಿದ ಪಿತೂರಿ ಎಂದು ಸಂಸದೆ ಹೇಳಿದರು.
ಶಾಸಕ ವಿ.ಸುನೀಲ್ ಕುಮಾರ್, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಪುರಸಭೆ ಅಧ್ಯಕ್ಷೆ ಸುಮಾಕೇಶವ್, ಉಪಾಧ್ಯಕ್ಷೆ ಪಲ್ಲವಿ, ಅನಂತಕೃಷ್ಣ ಶೆಣೈ ಮತ್ತಿತರರು ಉಪಸ್ಥಿತರಿದ್ದರು.
