ರಾಜ್ಯ ಸುದ್ದಿ

ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದವರೇ ನೀವೇ ಸಿಎಂ ಆಗಿ ಎಂದು ಮನೆಗೆ ಬಂದಿದ್ದರು: ಎಚ್‌.ಡಿ.ಕುಮಾರಸ್ವಾಮಿ

ವರದಿಗಾರ (ಅ.31) ಈಗ ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಹೇಳುವ ನಾಯಕರೇ ಈ ಹಿಂದೆ ಅವರಪ್ಪನಾಣೆ ನಾನು ಸಿಎಂ ಆಗಲ್ಲ ಎಂದು ಹೇಳಿದ್ದರು. ಆದರೆ, ಅವರೇ 2018ರಲ್ಲಿ ನಮ್ಮ ಮನೆ ಬಾಗಿಲಿಗೆ ಬಂದು ನೀವೇ ಮುಖ್ಯಮಂತ್ರಿಯಾಗಿ ಎಂದು ದುಂಬಾಲು ಬಿದ್ದಿದ್ದನ್ನು ಇಡೀ ರಾಜ್ಯ ನೋಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಜೆಡಿಎಸ್ ಪಕ್ಷದಿಂದ ಬೆಳೆದು ಬೆನ್ನಿಗೆ ಚೂರಿ ಹಾಕಿದ ಸಿದ್ದರಾಮಯ್ಯ ಜೆಡಿಎಸ್ ಪಕ್ಷಕ್ಕೆ ಹೀರೋ ಆಗಲು ಸಾಧ್ಯವೇ ಇಲ್ಲ. ಅವರು ಎಂದಿಗೂ ವಿಲನ್. ಕಾಂಗ್ರೆಸ್ ಪಕ್ಷದ ಒಂದು ವರ್ಗಕ್ಕೂ ಸಿದ್ದರಾಮಯ್ಯ ವಿಲನ್ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಮುಂದೆ ಕೂಡ ಸಿದ್ದರಾಮಯ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತ ಸ್ಥಿತಿಗೆ ಬರುವ ಕಾಲ ಬಹಳ ದೂರವಿಲ್ಲ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದರು.

ರಾಜರಾಜೇಶ್ವರಿ ನಗರ ಕ್ಷೇತ್ರದ ವ್ಯಾಪ್ತಿಯ ಬಂಗಾರಪ್ಪ ನಗರದಲ್ಲಿ ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಜೆಡಿಎಸ್‌ ಬಡವರು, ಶ್ರಮಿಕರು, ರೈತರು ಬೆಳೆಸಿದ ಪಕ್ಷ. ನಮ್ಮ ಹೊಣೆಗಾರಿಕೆ ಏನಿದ್ದರೂ ಜನರದ್ದು, ನಾವು ಅಂಬಾನಿ, ಆದಾನಿಗೆ ನಮ್ಮ ಪಕ್ಷದ ಜವಾಬ್ದಾರಿ ನೀಡಿಲ್ಲ. ಸಾಮಾನ್ಯ ಕಾರ್ಯಕರ್ತನಿಗೆ ನಾವು ಟಿಕೆಟ್‌ ನೀಡಿದ್ದೇವೆ. ಜೆಡಿಎಸ್‌ನ್ನು ಯಾರು ಕೊಂಡುಕೊಳ್ಳುವುದಕ್ಕೆ ಆಗಲ್ಲ ಎಂದು ಹೇಳಿದರು.

ಕೊರೊನಾ ಬಂದಾಗ ಪ್ರಧಾನಿ ಮೋದಿ ಚಪ್ಪಾಳೆ ತಟ್ಟಿ ಎಂದು ಹೇಳಿದರು. ಆಮೇಲೆ ದೀಪ ಬೆಳಗಿಸಿ ಎಂದರು, ಆ ದೀಪ ಹಚ್ಚಿ ಬಿಜೆಪಿಯವರು ತಮ್ಮ ಜೀವನ ಬೆಳಗಿಸಿಕೊಂಡರು. ಜನರ ಕಷ್ಟಗಳಿಗೆ ದೀಪ ಹಚ್ಚಿ ಬೆಳಕು ನೀಡಲಿಲ್ಲ ಎಂದ ಅವರು, ಹತ್ತು ವರ್ಷದಿಂದ ಬಿಜೆಪಿ, ಕಾಂಗ್ರೆಸ್‌ನವರು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾರೆ. ಪ್ರತಿವರ್ಷ ಕಾಲುವೆ ದುರಸ್ತಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾರೆ. ಆದರೂ, ಮಳೆ ಬಂದಾಗ ಬೆಂಗಳೂರಿನ ಅನೇಕ ಪ್ರದೇಶಗಳಿಗೆ ನೀರು ನುಗ್ಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group