ವರದಿಗಾರ (ಅ.27) ನವೆಂಬರ್ 3ರಂದು ನಡೆಯುವ ದುಬ್ಬಾಕ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ. ರಘುನಂದನ್ ರಾವ್ ನಿವಾಸದಲ್ಲಿ ವಶಪಡಿಸಿಕೊಂಡ ಹಣವನ್ನು ಬಿಜೆಪಿ ನಾಯಕನೊಬ್ಬ ದೋಚಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಆದರೆ ರಘುನಂದನ್ ಅವರ ಮಾವ ಗೋಪಾಲ್ ರಾವ್ ಅವರ ಮನೆಯಲ್ಲಿ ಪೊಲೀಸರೇ ಸ್ವತಃ ಹಣ ಇಟ್ಟು ನಾಟಕವಾಡುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಇದರಿಂದ ಸೋಮವಾರ ಸಿದ್ದಿಪೇಟೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಸಿದ್ದಿಪೇಟೆ ಪೊಲೀಸ್ ಆಯುಕ್ತ ಜೋಯಲ್ ಡೇವಿಸ್ ಈ ಬಗ್ಗೆ ನಿನ್ನೆ ಸಂಜೆ ಹೇಳಿಕೆ ನೀಡಿದ್ದು, ವಶಪಡಿಸಿಕೊಂಡ 18.67 ಲಕ್ಷ ರೂ.ಗಳಲ್ಲಿ, ಬಿಜೆಪಿ ಕಾರ್ಯಕರ್ತರು 12.80 ಲಕ್ಷ ರೂ.ಹಣವನ್ನು ಕದ್ದಿದ್ದಾರೆ. ಈ ಬಗ್ಗೆ ನಮ್ಮಲ್ಲಿ ವೀಡಿಯೊಗಳಿವೆ ಮತ್ತು ಹಣವನ್ನು ಕದ್ದವರನ್ನು ಬಂಧಿಸಲಾಗುವುದು. ಮಾತ್ರವಲ್ಲ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುತ್ತೇವೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ಪ್ರಕರಣಗಳನ್ನು ಸಹ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
