ರಾಷ್ಟ್ರೀಯ ಸುದ್ದಿ

ಹತ್ರಾಸ್ ಘಟನೆಗೆ ಆಕ್ರೋಶ ವ್ಯಕ್ತಪಡಿಸಿ ವಾಲ್ಮೀಕಿ ಸಮುದಾಯದ 230 ಮಂದಿ ಬೌದ್ಧ ಧರ್ಮಕ್ಕೆ ಮತಾಂತರ: ಉತ್ತರ ಪ್ರದೇಶ ಪೊಲೀಸರಿಂದ ಎಫ್ ಐಆರ್

ವರದಿಗಾರ (ಅ.23) ಗಾಝಿಯಾಬಾದ್ ಗ್ರಾಮದ ವಾಲ್ಮೀಕಿ ಸಮುದಾಯದಕ್ಕೆ ಸೇರಿದ ಸುಮಾರು 230 ಮಂದಿ ತಾವು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ್ದೇವೆ ಎಂದು ಹೇಳಿಕೆ ನೀಡಿದ ಒಂದು ದಿನದ ಬಳಿಕ ಗುರುವಾರ ಉತ್ತರ ಪ್ರದೇಶ ಪೊಲೀಸರು, ಮತಾಂತರದ ಬಗ್ಗೆ ವದಂತಿ ಹಬ್ಬಿಸಲಾಗುತ್ತಿದೆ ಎಂಬ ಆರೋಪದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ರಾಜರತನ್ ಅಂಬೇಡ್ಕರ್ ಅವರ ಸಮ್ಮುಖದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ್ದೇವೆ ಎಂದು ಅಕ್ಟೋಬರ್ 14ರಂದು ಕೆರೆರಾ ಗ್ರಾಮದ ವಾಲ್ಮೀಕಿ ಸಮುದಾಯದ ಸದಸ್ಯರು ಘೋಷಿಸಿದ್ದಾರೆ.

22 ವರ್ಷದ “ಸಮಾಜ ಸೇವಕ” ಮಾಂಟು ಚಾಂಡೆಲ್ ಎಂಬವರು ನೀಡಿದ ದೂರಿನ ಆಧಾರದಲ್ಲಿ ಗುರುವಾರ ಸಾಹಿಬಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.  ಐಪಿಸಿ ಸೆಕ್ಷನ್ಸ್ 153-ಎ (ಧರ್ಮ, ಜನಾಂಗ, ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಸೃಷ್ಟಿಸುವುದು) ಮತ್ತು 505 (ವದಂತಿ ಹರಡುವುದು) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

“ಕೆಲವು ಅಪರಿಚಿತ ವ್ಯಕ್ತಿಗಳು ಮತ್ತು ಸಂಸ್ಥೆಗಳು 230 ಜನರ ಧಾರ್ಮಿಕ ಮತಾಂತರದ ಬಗ್ಗೆ ಸುಳ್ಳು ವದಂತಿಗಳನ್ನು ಹರಡುತ್ತಿವೆ. ಮತಾಂತರದ ಬಗ್ಗೆ ನೀಡಲಾದ ಪ್ರಮಾಣಪತ್ರಗಳಲ್ಲಿ ಯಾವುದೇ ಹೆಸರು ಮತ್ತು ವಿಳಾಸ ಇಲ್ಲ. ಅದನ್ನು ನೀಡಿದ ದಿನಾಂಕವೂ ಇಲ್ಲ, ನೋಂದಣಿ ಸಂಖ್ಯೆಯೂ ಇಲ್ಲ. ಅದರ ಮೇಲೆ ಯಾರ ಹೆಸರನ್ನು ಬೇಕಾದರೂ ಬರೆಯಬಹುದು. ಜಾತಿ ಉದ್ವಿಗ್ನತೆಯನ್ನು ಸೃಷ್ಟಿಸಲು ಕ್ರಿಮಿನಲ್ ಪಿತೂರಿ ನಡೆದಿದೆ ಎಂದು ಎಫ್ ಐಆರ್ ನಲ್ಲಿ ತಿಳಿಸಲಾಗಿದೆ.

1955 ರಲ್ಲಿ ಡಾ.ಅಂಬೇಡ್ಕರ್ ಅವರು ಸ್ಥಾಪಿಸಿದ ದಿ ಬೌದ್ಧ ಸೊಸೈಟಿ ಆಫ್ ಇಂಡಿಯಾದಿಂದ 236 ಜನರಿಗೆ ಪ್ರಮಾಣಪತ್ರಗಳನ್ನು ನೀಡಲಾಗಿದೆ ಎಂದು ರಾಜರತನ್ ಅಂಬೇಡ್ಕರ್ ಹೇಳಿದ್ದಾರೆ.

ಸಂಸ್ಥೆಯ ಟ್ರಸ್ಟಿ-ಮ್ಯಾನೇಜರ್ ಆಗಿರುವ ರಾಜರತನ್ ಮತ್ತು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸ್ಮಾರಕ ಸಮಿತಿಯ ಅಧ್ಯಕ್ಷ ಭದಂತ್ ಆರ್ಯ ನಾಗಾರ್ಜುನ ಸುರೈ ಸಸೈ ಅವರ ಸಹಿ ಈ ಪ್ರಮಾಣಪತ್ರಗಳಲ್ಲಿ ಇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಅಕ್ಟೋಬರ್ 14 ರಂದು ಕೆರೆರಾದಲ್ಲಿ ನಡೆದ ಧಾರ್ಮಿಕ ಮತಾಂತರವು ವದಂತಿ ಎಂದು ಅವರು ಹೇಗೆ ಹೇಳುತ್ತಾರೆ? ನಾನು ಅಲ್ಲಿ ಹಾಜರಿದ್ದೆ. ಕಾರ್ಯಕ್ರಮದ ಫೇಸ್ ಬುಕ್ ಲೈವ್ ವಿಡಿಯೋ ಇದೆ, ಕಾರ್ಯಕ್ರಮದ ಫೋಟೋಗಳು ಕೂಡ ಇವೆ. ಈ ಎಫ್‌ಐಆರ್‌ ದಾಖಲಿಸಲು ಆಧಾರವೇನು? ಎಂದು ರಾಜರತನ್ ಖಾರವಾಗಿ ಪ್ರಶ್ನಿಸಿದ್ದಾರೆ.

ನಾವು ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಪ್ರಮಾಣಪತ್ರಗಳು ಮತಾಂತರದ ದಿನಾಂಕವನ್ನು ಮಾತ್ರ ಹೊಂದಿವೆ. ದಾಖಲೆಗಳು ಅಧಿಕೃತವಲ್ಲ ಎಂಬ ಆರೋಪದ ಬಗ್ಗೆ ತನಿಖೆ ಮಾಡಲಾಗುತ್ತದೆ. ಈ ವಿಷಯದಲ್ಲಿ ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಸಾಹಿಬಾಬಾದ್ ವೃತ್ತ ಅಧಿಕಾರಿ ಕೇಶವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಮತಾಂತರಗೊಂಡ ಹಲವರು ಕೂಡ ಇದು ವದಂತಿಯಲ್ಲ, ನಾವು ಉದ್ದೇಶಪೂರ್ವಕವಾಗಿ , ಸ್ವ ಇಚ್ಛೆಯಿಂದ ಮತಾಂತರಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group