ವರದಿಗಾರ (ಅ.21) ಕೊರೊನಾ ಲಾಕ್ ಡೌನ್ ವೇಳೆ ನಿಷೇಧಾಜ್ಞೆ ಉಲ್ಲಂಘಿಸಿದ್ದಾರೆ ಎಂಬ ಆರೋಪದಲ್ಲಿ ಬಂಧಿತರಾಗಿದ್ದ ಮತ್ತು ನವದೆಹಲಿಯ ಮರ್ಕಜ್ ನಲ್ಲಿ ತಬ್ಲೀಗ್ ಜಮಾಅತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ 20 ವಿದೇಶಿಯರನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯವೊಂದು ಖುಲಾಸೆಗೊಳಿಸಿದೆ. ಅವರನ್ನು ಜೈಲಿನಿಂದ ಸೋಮವಾರ ಬಿಡುಗಡೆ ಮಾಡಲಾಗಿದೆ.
ನಿನ್ನೆ ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್ ಆರ್ ಖಾನ್ ಅವರು ಹೊರಡಿಸಿದ ಆದೇಶದಲ್ಲಿ, ತಬ್ಲೀಗಿಗಳ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಮತ್ತು ಆರೋಪಿತ ವ್ಯಕ್ತಿಗಳು ಯಾವುದೇ ಅನುಮಾನಾಸ್ಪದವಾಗಿ ನಡೆದುಕೊಂಡಿಲ್ಲ. ನಿಯಮ ಉಲ್ಲಂಘಿಸಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಬಳಿ ಯಾವುದೇ ಪುರಾವೆಗಳಿಲ್ಲ ಎಂದು ತಿಳಿಸಿದ್ದಾರೆ.
ಲಾಕ್ ಡೌನ್ ಮಾನದಂಡ ಮತ್ತು ಆದೇಶವನ್ನು ಆರೋಪಿಗಳು ಉಲ್ಲಂಘಿಸಿಲ್ಲ ಮತ್ತು ಪೊಲೀಸ್ ಆಯುಕ್ತರ ಆದೇಶವನ್ನು ಉಲ್ಲಂಘಿಸಿಲ್ಲ ಎಂದು ಪ್ರಾಸಿಕ್ಯೂಷನ್ ಸಾಕ್ಷಿಗಳು ಸ್ಪಷ್ಟಪಡಿಸಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದರೊಂದಿಗೆ, ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ವಿದೇಶಿ ತಬ್ಲೀಗ್ ಜಮಾಅತ್ ಸದಸ್ಯರ ವಿರುದ್ಧದ ಎಲ್ಲಾ ಪ್ರಕರಣಗಳು ಖುಲಾಸೆ ಅಥವಾ ವಜಾಗೊಳಿಸಲ್ಪಟ್ಟಿದ್ದರಿಂದ, ಎಲ್ಲಾ ತಬ್ಲೀಗಿಗಳು ಆರೋಪಗಳಿಂದ ಮುಕ್ತರಾಗಿದ್ದಾರೆ.
