ವರದಿಗಾರ (ಅ.21) ಸರ್ಕಾರವನ್ನು ವಿರೋಧಿಸುತ್ತಿರುವ ರಾಜಕಾರಣಿಗಳ ಮೇಲೆ ಒತ್ತಡ ಹೇರಲು ಬಿಜೆಪಿ ನೇತೃತ್ವದ ಕೇಂದ್ರದ ಎನ್ ಡಿಎ ಸರ್ಕಾರ ರಾಷ್ಟ್ರೀಯ ತನಿಖಾ ಸಂಸ್ಥೆ-ಎನ್ ಐಎಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಶ್ರೀನಗರದಲ್ಲಿರುವ ನಿವಾಸದ ಮೇಲೆ ಎನ್ಐಎ ದಾಳಿ ನಡೆಸಿರುವುದು ರಾಜಕಾರಣಿಗಳ ಮೇಲೆ ಒತ್ತಡ ತರುವ ಭಾಗವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಜನರಿಗೆ ನ್ಯಾಯ ಕಲ್ಪಿಸಬೇಕಾದ ಈ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ರಾಜಕೀಯ ಲಾಭಗಳಿಗಾಗಿ ದುರುಪಯೋಗಪಡಿಸಿಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ಹೇಳಿದರು. ಕೇಂದ್ರ ತಂದಿರುವ ಹೊಸ ಕೃಷಿ ಕಾಯ್ದೆಗಳು ದೇಶದ ರೈತರ ಬೆನ್ನೆಲುಬು ಮುರಿಯುವಂತಿದ್ದು, ರೈತರಿಗೆ ಯಾವುದೇ ರಕ್ಷಣೆ ಇಲ್ಲದಂತಾಗಲಿದೆ ಎಂದು ದೂರಿದರು.
ರೈತರು ದೇಶದ ಆರ್ಥಿಕತೆಯ ಬೆನ್ನೆಲುಬು,ಆದರೆ ಹೊಸ ಕೃಷಿ ಕಾಯ್ದೆಗಳನ್ನು ಕೆಲವೇ ಕೆಲವು ಉದ್ಯಮಿಗಳ ಪ್ರಯೋಜನಕ್ಕಾಗಿ ರೂಪಿಸಲಾಗಿದೆ ಎಂದು ರಾಹುಲ್ ಆರೋಪಿಸಿದರು. ದೇಶದಲ್ಲಿ ರೈತರ ಸ್ಥಿತಿ ಅತ್ಯಂತ ದುರಂತಮಯವಾಗಿದೆ. ಕೊರೊನಾ ಸಂಕಷ್ಟ ಸಮಯದಲ್ಲಿ ಹೊಸ ಕೈಷಿ ಕಾಯ್ದೆಗಳು ರೈತರ ಮೇಲೆ ಇನ್ನಿಲ್ಲ ಪರಿಣಾಮ ಉಂಟುಮಾಡಲಿವೆ ಎಂದು ಹೇಳಿದರು.
