ವರದಿಗಾರ (ಅ.21) ಯೋಗಿ ಸರ್ಕಾರ ದಲಿತ ಮತ್ತು ಹಿಂದುಳಿದ ವರ್ಗಗಳ ವಿರೋಧಿಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ಸಿನ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಅಲೋಕ್ ಪ್ರಸಾದ್ ಅವರ ಬಂಧನವನ್ನು ಪ್ರಜಾಪ್ರಭುತ್ವ ವಿರೋಧಿ ಎಂದು ಆರೋಪಿಸಿರುವ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು, ಕಾಂಗ್ರೆಸ್ ಧ್ವನಿಯನ್ನು ಎಲ್ಲ ರೀತಿಯಲ್ಲೂ ನಿಗ್ರಹಿಸಲು ಯೋಗಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಆರೋಪಿಸಿದ್ದಾರೆ.
ಯೋಗಿ ಸರ್ಕಾರ ದಲಿತ ಮತ್ತು ಹಿಂದುಳಿದ ವರ್ಗಗಳ ವಿರೋಧಿಯಾಗಿದೆ. ಯೋಗಿ ಸರ್ಕಾರದ ವೈಫಲ್ಯಗಳು ಮತ್ತು ದಬ್ಬಾಳಿಕೆಯ ಬಗ್ಗೆ ಕಾಂಗ್ರೆಸ್ ಧ್ವನಿ ಎತ್ತುತ್ತಿದೆ, ಈ ಕಾರಣದಿಂದಾಗಿ ಯೋಗಿ ಸರ್ಕಾರವು ರಾಜಕೀಯ ದುರುದ್ದೇಶದಿಂದ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿದೆ. ಸುಳ್ಳು ಪ್ರಕರಣದಡಿ ಅಲೋಕ್ ಪ್ರಸಾದ್ ಅವರನ್ನು ಜೈಲಿಗೆ ಹಾಕಲಾಗಿದೆ ಎಂದು ದೂರಿದರು.
ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡಲು ಯೋಗಿ ಸರ್ಕಾರವು ಸಂಪೂರ್ಣವಾಗಿ ವಿಫಲವಾಗುತ್ತಿರುವುದರಿಂದ ಜನರು ಪ್ರತಿದಿನ ಲೋಕ ಭವನದ ಹೊರಗೆ ಆತ್ಮಹತ್ಯೆಯಂತಹ ಕ್ರಮಕ್ಕೆ ಅನಿವಾರ್ಯವಾಗಿ ಮುಂದಾಗುತ್ತಿದ್ದಾರೆ ಎಂದು ಲಲ್ಲು ಹೇಳಿದರು.
ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದಲಿತ-ಹಿಂದುಳಿದ ದಬ್ಬಾಳಿಕೆಗೆ ಯೋಗಿ ಸರ್ಕಾರದ ನೇರ ಪ್ರೋತ್ಸಾಹವಿದೆ. ಅಲೋಕ್ ಪ್ರಸಾದ್ ಅವರ ಬಂಧನವು ಪ್ರಜಾಪ್ರಭುತ್ವ ವಿರೋಧಿ ಮಾತ್ರವಲ್ಲದೆ ದಲಿತ-ಹಿಂದುಳಿದ ಸಮುದಾಯಗಳ ಮೇಲಿನ ದಬ್ಬಾಳಿಕೆಯ ವ್ಯವಸ್ಥಿತ ಕಾರ್ಯತಂತ್ರದ ಭಾಗವಾಗಿದೆ ಎಂದು ದೂರಿದರು.
