ರಾಜ್ಯ ಸುದ್ದಿ

ಮೋದಿ ಜನತೆಗೆ ಕರ್ತವ್ಯ ಪಾಲನೆಯ ಪಾಠ ಮಾಡುವ ಮೊದಲು ತನ್ನ ಕರ್ತವ್ಯ ಪಾಲನೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿತ್ತು; ಸಿದ್ದರಾಮಯ್ಯ

ವರದಿಗಾರ (ಅ.21) ಜನತೆಗೆ ಕರ್ತವ್ಯಪಾಲನೆಯ ಪಾಠ ಮಾಡುವ ಮೊದಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತನ್ನ ಕರ್ತವ್ಯಪಾಲನೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿತ್ತು. ಕೊರೊನಾ ಸೋಂಕಿನ ನಿಯಂತ್ರಣ ಮತ್ತು ಅದರಿಂದಾಗಿ ಕಷ್ಟ-ನಷ್ಟಕ್ಕೀಡಾಗಿರುವ ಜನತೆಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಏನು ಮಾಡಿದೆ ಮತ್ತು ಮುಂದಿನ ದಿನಗಳಲ್ಲಿ ಏನು ಮಾಡಲಿದೆ ಎನ್ನುವುದನ್ನು ದೇಶದ ಜನತೆಗೆ ತಿಳಿಸಬೇಕಾಗಿತ್ತು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.

ದೇಶವನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ಮಾಡಿರುವ ಭಾಷಣಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ದೇಶದ ಜನತೆಗೆ ಬುದ್ದಿವಾದ ಹೇಳುವ ಮೂಲಕ ಪ್ರಧಾನಿಯವರು ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವ ಹತಾಶ ಪ್ರಯತ್ನವನ್ನಷ್ಟೇ ಮಾಡಿದ್ದಾರೆ. ಕೊರೊನಾ ಸೋಂಕು ಉಲ್ಬಣಕ್ಕೆ ಜನರ ನಿರ್ಲಕ್ಷಕ್ಕಿಂತಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಣೆಗೇಡಿತನವೂ ಕಾರಣ ಎನ್ನುವುದನ್ನು ಪ್ರಧಾನಿಯವರು ಒಪ್ಪಿಕೊಂಡು ದೇಶದ ಜನತೆಯಲ್ಲಿ ಕ್ಷಮೆಯಾಚಿಸಬೇಕಾಗಿತ್ತು ಎಂದು ಹೇಳಿದ್ದಾರೆ.

ಜಾಗಟೆ ಬಾರಿಸಿ, ದೀಪ ಹಚ್ಚಿ ಕೊರೊನಾ ಎದುರಿಸಲು ಕರೆನೀಡಿದ ಪ್ರಧಾನ ಮಂತ್ರಿಯವರ ಮೂಢತನದ ಭಾಷಣಗಳೇ ಕೊರೊನಾ ಸೋಂಕಿನ ಬಗ್ಗೆ ಜನರ ನಿರ್ಲಕ್ಷಕ್ಕೆ ಮುಖ್ಯ ಕಾರಣ. ರೋಗವನ್ನು ವೈಜ್ಞಾನಿಕವಾಗಿ ಎದುರಿಸಲು ಕರೆನೀಡಬೇಕಾದ ಪ್ರಧಾನಿ, ಟಿವಿ ಜ್ಯೋತಿಷಿಗಳ ರೀತಿಯಲ್ಲಿ ಪ್ರವಚನ ನೀಡಿದರೆ ಜನ ಮೂಢಮತಿಗಳಾಗದೆ ಇನ್ನೇನು ಆಗಲು ಸಾಧ್ಯ? ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ದೇಶದ ಜನತೆಗೆ ಕರ್ತವ್ಯಪಾಲನೆಯ ಪ್ರವಚನ ನೀಡಿದ ಪ್ರಧಾನಿಗಳು ಅದರ ಜೊತಗೆ ಕೊರೊನಾ ಪರಿಹಾರದ ಇಪ್ಪತ್ತು ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಏನಾಯಿತು? ಯಾರಿಗೆ? ಎಷ್ಟು ತಲುಪಿದೆ? ಪಿ.ಎಂ. ಕೇರ್ಸ್ ನಿಧಿಗೆ ಬಂದ ದುಡ್ಡೆಷ್ಟು? ಕೊರೊನಾ ನಿಯಂತ್ರಣ ಮತ್ತು ಪರಿಹಾರಕ್ಕಾಗಿ ಆ ನಿಧಿಯಿಂದ ಬಳಕೆಯಾದ ದುಡ್ಡಿನ ಮೊತ್ತವೆಷ್ಟು? ಎಂಬುದನ್ನೂ ತಿಳಿಸಬೇಕಿತ್ತು ಎಂದು ತಿಳಿಸಿದ್ದಾರೆ.

ಕೊರೊನಾ ಸೋಂಕು ಪ್ರಾರಂಭಗೊಂಡಾಗ ಪ್ರಧಾನಿಯವರು ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಜೂನ್ ನಲ್ಲಿ ಪ್ರಕಟಿಸಿದ್ದರು. ಅದು ಎಷ್ಟು ಜನರಿಗೆ ತಲುಪಿದೆ? ರಾಜ್ಯದ ಬಿಜೆಪಿ ಸರ್ಕಾರ ಅನ್ನಭಾಗ್ಯದಲ್ಲಿ ನೀಡಲಾಗುತ್ತಿದ್ದ ಅಕ್ಕಿಯನ್ನು ಹತ್ತರಿಂದ ಏಳು ಕಿಲೋಗೆ ಇಳಿಸಿದೆ, ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚಲು ಹೊರಟಿದೆ. ಮಿತವ್ಯಯ ಪಾಲನೆ ಮಾಡಿ ಲಭ್ಯ ಇರುವ ಸಂಪನ್ಮೂಲವನ್ನು ಕೊರೊನಾ ನಿಯಂತ್ರಣಕ್ಕಾಗಿ ಬಳಸಬೇಕಾದ ರಾಜ್ಯದ ಬಿಜೆಪಿ ಸರ್ಕಾರ ಕೊರೊನಾ ಕಾಯಿಲೆಯ ಪರಿಹಾರದ ನೆಪದಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದೆ. ಇದೇನಾದರೂ ಪ್ರಧಾನಿಯವರ ಗಮನಕ್ಕೆ ಬಂದಿದೆಯೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group