ವರದಿಗಾರ (ಅ.19) ದೇಶದ ಬಗ್ಗೆ ಕಾಳಜಿಯೇ ಇಲ್ಲದ, ಅರಿವಿಲ್ಲದ ಮೋದಿ ಸರ್ಕಾರವು ಭಾರತೀಯ ಜನರನ್ನು ಜಾಗತಿಕ ಹಸಿವು ಸೂಚ್ಯಂಕದಲ್ಲಿ ಕರುಣಾಜನಕ ಸ್ಥಿತಿಗೆ ತಂದಿಟ್ಟಿದೆ. 2020ರ ಜಾಗತಿಕ ಹಸಿವು ಸೂಚ್ಯಂಕದ 107 ದೇಶಗಳಲ್ಲಿ ಭಾರತ 94ನೇ ಸ್ಥಾನದಲ್ಲಿದ್ದು ಹಾಗೂ ನೆರೆಯ ದೇಶಗಳಾದ ನೆಪಾಳ(73),ಪಾಕಿಸ್ತಾನ(88),ಬಾಂಗ್ಲಾದೇಶ(75),ಇಂಡೊನೇಷ್ಯಾ(70) ಗಳಿಗಿಂತ ಕೆಳಗಿನ ಸ್ಥಾನದಲ್ಲಿರುವುದು ಬಹಳ ಅಪಮಾನಕರ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಡಾ.ಎಸ್.ಕ್ಯೂ.ಆರ್. ಇಲಿಯಾಸ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದೇ ರೀತಿ ಸೂಚ್ಯಂಕದಲ್ಲಿ ಭಾರತವು ಅಭಿವೃದ್ಧಿ ಹೊಂದದ ರಾಷ್ಟ್ರಗಳಾದ ರವಾಂಡ, ನೈಜೀರಿಯಾ, ಅಫ್ಘಾನಿಸ್ತಾನ, ಲೈಬೀರಿಯ, ಮೊಜಾಂಬಿಕ್ ಮತ್ತು ಚಾಡ್ ದೇಶಗಳಿಗಿಂತ ಕೆಳಗಿರುವುದು ಬಹಳ ಚಿಂತಾಜನಕ ಹಾಗೂ ದೌರ್ಭಾಗ್ಯಪೂರ್ಣ ಎಂದು ಅವರು ಹೇಳಿದರು.
ಮೋದಿ ಸರ್ಕಾರವು ಭಾರತೀಯ ನಾಗರಿಕರ ಗುಣಮಟ್ಟದ ಜೀವನಕ್ಕಾಗಿ ಯಾವುದೇ ಯೋಜನೆ ಹೊಂದಿಲ್ಲ ಮತ್ತು ಚುನಾವಣಾ ಲಾಭಕ್ಕಾಗಿ ದೇಶವನ್ನು ವ್ಯರ್ಥ ಸಮಸ್ಯೆಗಳಲ್ಲಿ ತೊಡಗಿಸಿ ಧ್ರುವಿಕರಿಸುತ್ತಿದೆ ಎಂದು ಇಲಿಯಾಸ್ ಆರೋಪಿಸಿದ್ದಾರೆ.
ಮೋದಿ ಸರ್ಕಾರವು ದೇಶದ ಗೌರವವನ್ನು ಹಾಳುಮಾಡುತ್ತಿದೆ ಎಂದು ಆರೋಪಿಸಿದ ಅವರು. ಸರ್ಕಾರವು ನೈಜ ಸಮಸ್ಯೆಗಳಾದ ಅಪೌಷ್ಟಿಕತೆ, ಮರಣ, ಆಹಾರ ಭದ್ರತೆ ಖಚಿತಪಡಿಸುವುದು, ಉದ್ಯೋಗ ಕಲ್ಪಿಸುವುದು ಮತ್ತು ಒಳ್ಳೆಯ ಆರೋಗ್ಯ ಕೇಂದ್ರಗಳನ್ನು ಒದಗಿಸುವುದು ಇತ್ಯಾದಿಗಳ ಕಡೆ ಗಮನ ಹರಿಸಿದ್ದರೆ 21 ನೇ ಶತಮಾನದ ಭಾರತವು ಜಾಗತಿಕವಾಗಿ ಮುಂಚೂಣೀ ದೇಶವಾಗುತಿತ್ತು ಎಂದು ಅವರು ಹೇಳಿದ್ದಾರೆ.
