ರಾಜ್ಯ ಸುದ್ದಿ

ದಲಿತರ ಕೇರಿಗೂ ದೇವರ ಉತ್ಸವ ಬರಲಿ ಎಂದ ದಲಿತ ಯುವಕರಿಗೆ 50 ಸಾವಿರ ರೂ.ದಂಡ !

ವರದಿಗಾರ, (ಅ.19) ದಲಿತರ ಕೇರಿಗೂ ದೇವರ ಉತ್ಸವ ಬರಲಿ ಎಂದು ಮನವಿ ಸಲ್ಲಿಸಿದ ಕಾರಣಕ್ಕೆ ಗ್ರಾಮದ ಮೇಲ್ವರ್ಗದ ಮುಖಂಡರು ಬಡ ದಲಿತ ಕಾರ್ಮಿಕನೊಬ್ಬನಿಗೆ ಐವತ್ತು ಸಾವಿರ ರೂಪಾಯಿ ದಂಡ ವಿಧಿಸಿರುವ ಆಘಾತಕಾರಿ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದಲ್ಲಿ ನಡೆದಿದೆ. ದಂಡ ಕಟ್ಟಲು ಹಣವಿಲ್ಲದೆ ಆತ ಮಡದಿಯ ಒಡವೆಗಳನ್ನು ಒತ್ತೆ ಇಟ್ಟು ಹಣ ಕಟ್ಟಿದ್ದಾರೆ.

ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಚಾಮುಂಡೇಶ್ವರಿ ದೇವಸ್ಥಾನವಿದ್ದು ನವರಾತ್ರಿ ಸಂದರ್ಭದಲ್ಲಿ ಚಾಮುಂಡೇಶ್ವರಿ ಉತ್ಸವ ನಡೆಯುತ್ತದೆ.

ಪ್ರತಿ ಬಾರಿಯಂತೆ ಈ ಬಾರಿಯೂ ಯಳಂದೂರು ತಹಶೀಲ್ದಾರ್ ಸುದರ್ಶನ್ ಅವರ ನೇತೃತ್ವದಲ್ಲಿ ಗ್ರಾಮಸ್ಥರ ಪೂರ್ವ ಭಾವಿ ಸಭೆ ಕರೆಯಲಾಗಿತ್ತು. ಸಭೆಗೂ ಮುನ್ನ ತಹಶೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿದ ದಲಿತ ಸಮುದಾಯದ ಹಲವು ಯುವಕರು, ಚಾಮುಂಡೇಶ್ವರಿ ದೇಗುಲ ಮುಜರಾಯಿ ಇಲಾಖೆಗೆ ಸೇರಿದೆ, ಆದರೆ ದೇವರ ಉತ್ಸವ ಕೇವಲ ಸವರ್ಣೀಯರ ಬೀದಿಗಳಲ್ಲಿ ನಡೆಯುತ್ತದೆ. ಈ ಬಾರಿ ದಲಿತರ ಬೀದಿಗೂ ಉತ್ಸವ ಬರಬೇಕು ಎಂದು ಮನವಿ ಮಾಡಿದ್ದರು.

ಸಭೆಯಲ್ಲಿ ದಲಿತರ ಬೀದಿಯ ನಿಂಗರಾಜು ಎಂಬಾತ ದಲಿತರ ಬೀದಿಗೂ ದೇವರ ಉತ್ಸವ ಬರಬೇಕು ಎಂದು ಒತ್ತಾಯಿಸಿದ್ದರು. ಸಭೆ ಮುಗಿಸಿ ಯಳಂದೂರಿನಿಂದ ವಾಪಸ್ ಬಂದು ಗ್ರಾಮದ ಮುಖಂಡರು ಮಾರನೇ ದಿನವೇ ಸೇರಿ ನ್ಯಾಯಪಂಚಾಯ್ತಿ ನಡೆಸಿ, ನಿಂಗರಾಜುವನ್ನು ತರಾಟೆಗೆ ತೆಗೆದುಕೊಂಡು ಐವತ್ತು ಸಾವಿರದ ನೂರ ಒಂದು ರೂಪಾಯಿ ದಂಡ ವಿಧಿಸಿದ್ದಾರೆ. ಇಷ್ಟೇ ಅಲ್ಲದೆ ತಹಶೀಲ್ದಾರ್ರಿಗೆ ಅರ್ಜಿ ನೀಡಲು ಹೋಗಿದ್ದ ನಿಂಗರಾಜುವಿನ ಸ್ನೇಹಿತ ಶಂಕರಮೂರ್ತಿಗೂ ಹತ್ತು ಸಾವಿರದ ನೂರ ಒಂದು ರೂಪಾಯಿ ದಂಡ ವಿಧಿಸಿದ್ದಾರೆ.

ಬಡ ಕೂಲಿ ಕಾರ್ಮಿಕನಾದ ನಿಂಗರಾಜುಗೆ 50 ಸಾವಿರ ರೂಪಾಯಿಯಷ್ಟು ದೊಡ್ಡ ಮೊತ್ತ ಹೊಂದಿಸುವುದು ಕಷ್ಟವಾಗಿದೆ. ಕೊನೆಗೆ ಪತಿಯ ಕಷ್ಟ ನೋಡಲಾಗದೆ ಪತ್ನಿ ತನ್ನ ಕಿವಿಯೋಲೆ ಹಾಗು ಇತರೆ ಒಡವೆಗಳನ್ನು ಬಿಚ್ಚಿ ಗಿರವಿ ಇಟ್ಟು ದಂಡದ ಹಣ ಕಟ್ಟಿದ್ದಾರೆ. ಈ ಅನ್ಯಾಯದ ಬಗ್ಗೆ ನಿಂಗರಾಜು ಅವರು ಯಳಂದೂರು ತಹಶೀಲ್ದಾರ್ಅವರಿಗೆ ದೂರು ಸಲ್ಲಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group