ವರದಿಗಾರ (ಅ.17) ಉತ್ತರ ಪ್ರದೇಶದ ಅಜಯ ಬಿಷ್ಟ್ ಸರಕಾರ ಹಥ್ರಾಸ್ ಘಟನೆಯಲ್ಲಿ ಅತ್ಯಾಚಾರಿಗಳ ಪರವಾದ ನಿಲುವುಗಳನ್ನು ತೆಗೆದುಕೊಳ್ಳುತ್ತಿದೆ ಎಂಬ ಆರೋಪಗಳ ಮಧ್ಯೆಯೇ ಅದನ್ನು ಸಾಬೀತುಪಡಿಸುವಂತಹ ಮತ್ತೊಂದು ಘಟನೆ ರಾಜ್ಯದಲ್ಲಿ ನಡೆದಿದೆ. ಬಿಜೆಪಿ ಶಾಸಕ ಹಾಗೂ ಆತನ ಮಗ ಪೊಲೀಸ್ ಠಾಣೆಯೊಂದಕ್ಕೆ ತನ್ನ ಬೆಂಬಲಿಗರೊಂದಿಗೆ ದಾಳಿ ಮಾಡಿ, ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಠಾಣೆಯಲ್ಲಿ ಬಂಧಿತನಾಗಿದ್ದ ಆರೋಪಿಯೋರ್ವನನ್ನು ಬಿಡಿಸಿಕೊಂಡು ಹೋಗಿರುವ ಘಟನೆ ವೀಡೀಯೋ ವೈರಲ್ ಆಗುತ್ತಿದೆ. ಠಾಣೆಗೆ ಬಂದು ಬಲವಂತವಾಗಿ ಆರೋಪಿಯನ್ನು ಬಿಡಿಸಿಕೊಳ್ಳುವುದಕ್ಕಿಂತ ಮೊದಲು ಅಲ್ಲಿ ನಡೆಸಿದ ದಾಂದಲೆಯ ವೀಡೀಯೋಗೆ ಇದೀಗ ಆಕ್ರೋಶ ವ್ಯಕ್ತವಾಗುತ್ತಿದೆ.
ಬಿಜೆಪಿ ಶಾಸಕ ಲೋಕೇಂದ್ರ ಪ್ರತಾಪ್ ಸಿಂಗ್ ಮತ್ತು ಅವರ ಪುತ್ರ ಮಧ್ಯರಾತ್ರಿ ಲಖೀಂಪುರದಲ್ಲಿರುವ ಮಹಮ್ಮದಿ ಪೊಲೀಸ್ ಠಾಣೆಗೆ ಆಗಮಿಸಿ, ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಠಾಣೆಯಿಂದ ಬಿಡಿಸಿಕೊಂಡು ಹೋಗಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಪಕ್ಷದ ಕಾರ್ಯಕರ್ತರು ಆರೋಪಿಯನ್ನು ಬಿಡುಗಡೆ ಮಾಡಲು ಬೀಗದ ಕೀಗಳನ್ನು ಕೇಳುತ್ತಿರುವುದು ಕೇಳಿಬರುತ್ತಿದೆ. ಈ ವೇಳೆ ಪೊಲೀಸರು ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರನ್ನು ವಿರೋಧಿಸುವ ಧೈರ್ಯ ತೋರಲಿಲ್ಲ, ಶಾಸಕ ಮತ್ತು ಅವರ ಬೆಂಬಲಿಗರು ಆರೋಪಿಯ ಜೊತೆ ವಾಪಾಸಾಗಿದ್ದಾರೆ.ಆದರೆ ಗೂಂಡಾಗಿರಿ ತೋರಿದ ಬಿಜೆಪಿ ಶಾಸಕ ಲೋಕೇಂದ್ರ ಪ್ರತಾಪ್ ಸಿಂಗ್ ಮಾತ್ರ ಇಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ, ನನ್ನ ಇಮೇಜ್ ಗೆ ಧಕ್ಕೆ ತರಲು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಶುಕ್ರವಾರ, ಬಲ್ಲಿಯಾ ಜಿಲ್ಲೆಯ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ ಡಿಎಂ) ಮತ್ತು ಸರ್ಕಲ್ ಆಫೀಸರ್ (ಸಿಒ) ಮುಂದೆಯೇ ಬಿಜೆಪಿ ಶಾಸಕನ ಸಹಾಯಕನೋರ್ವ ತನ್ನ ಎದುರಾಳಿಯ ವಿರುದ್ಧ ಗುಂಡು ಹಾರಿಸಿದ ಮರುದಿನವೇ, ಬಲ್ಲಿಯಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು ಆರೋಪಿ ಧೀರೇಂದ್ರ ಸಿಂಗ್ ನನ್ನು ಸಮರ್ಥಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಆತ ತನ್ನ ಸ್ವಯಂ ರಕ್ಷಣೆಗಾಗಿ ಗುಂಡು ಹಾರಿಸಿದ ಎಂದು ಶಾಸಕ ಹೇಳಿದ್ದರು.
