ವರದಿಗಾರ (ಅ.17) ನ್ಯೂಜಿಲೆಂಡ್ ಕ್ರೈಸ್ಟ್ ಚರ್ಚ್ ನಲ್ಲಿ ನಡದ ಮಸೀದಿ ದಾಳಿ ಸಮಯದಲ್ಲಿ ಮುಸ್ಲಿಮರ ಪರವಾಗಿ ನಿಂತು ಧೈರ್ಯ ತುಂಬಿದ ಪ್ರಧಾನಿ ಜೆಸಿಂದಾ ಅರ್ಡೆರ್ನ್ ಅವರು ನ್ಯೂಜಿಲೆಂಡ್ ಸಾರ್ವತ್ರಿಕ ಚುನಾವಣೆಯಲ್ಲಿ ಎರಡನೇ ಬಾರಿ ಜನಾದೇಶಪಡೆದು ಪ್ರಚಂಡ ಗೆಲುವು ಸಾಧಿಸಿದ್ದಾರೆ.
ಮುಖ್ಯವಿರೋಧ ಪಕ್ಷವಾದ ನ್ಯಾಷನಲ್ ಪಾರ್ಟಿಯ ನಾಯಕ ಜುಡಿತ್ ಕಾಲಿನ್ಸ್ ಸೋಲು ಒಪ್ಪಿಕೊಂಡಿದ್ದಾರೆ. ಅರ್ಡರ್ನ್ ಅವರ ಲೇಬರ್ ಪಾರ್ಟಿಯು ಶೇಕಡ 49 ಬೆಂಬಲ ಗಳಿಸಿದೆ. 1930ರ ನಂತರ ಅತಿ ದೊಡ್ಡ ಮತದ ಪಾಲು ಹೊಂದಿದ ಪಕ್ಷವಾಗಿದೆ.
ಚುನಾವಣೆಯಲ್ಲಿ ಶೇ 49ರಷ್ಟು ಮತಗಳು ಜೆಸಿಂದಾ ಅವರ ಲಿಬರಲ್ ಲೇಬರ್ ಪಕ್ಷದ ಪರವಾಗಿದ್ದು, ಕನ್ಸರ್ವೇಟಿವ್ ರಾಷ್ಟ್ರೀಯ ಪಕ್ಷವು ಶೇ 27ರಷ್ಟು ಮತಗಳನ್ನಷ್ಟೇ ಪಡೆದಿದೆ. ನ್ಯೂಜಿಲೆಂಡ್ನ ಚುನಾವಣಾ ಇತಿಹಾಸದಲ್ಲಿ 24 ವರ್ಷಗಳ ಬಳಿಕ ಸಂಸತ್ನಲ್ಲಿ ಲೇಬರ್ ಪಕ್ಷವು ಏಕಾಂಗಿಯಾಗಿ ಬಹುಮತ ಪಡೆದಿದ್ದು, ಯಾವುದೇ ಮೈತ್ರಿ ಇಲ್ಲದೇ ಆಡಳಿತದ ಚುಕ್ಕಾಣಿ ಹಿಡಿಯಲಿದೆ. ಚುನಾವಣೆಯಲ್ಲಿ, ಉಪಪ್ರಧಾನಿ ವಿನ್ಸ್ಟನ್ ಪೀಟರ್ ಅವರ ನ್ಯೂಜಿಲೆಂಡ್ ಫಸ್ಟ್ ಪಕ್ಷವು ಠೇವಣಿ ಕಳೆದುಕೊಂಡಿದ್ದು, ಲಿಬರಿಟೇರಿಯನ್ ಆ್ಯಕ್ಟ್ ಪಕ್ಷವು ಶೇ 8ರಷ್ಟು ಹಾಗೂ ಗ್ರೀನ್ ಪಕ್ಷವು ಶೇ 7.5ರಷ್ಟು ಮತವನ್ನು ಪಡೆದಿದೆ.
ಕೊರೊನಾ ಸೋಂಕನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಕೀರ್ತಿಗೂ ಜೆಸಿಂದಾ ಪಾತ್ರರಾಗಿದ್ದಾರೆ.
