ರಾಜ್ಯ ಸುದ್ದಿ

ಡಿಜೆ ಹಳ್ಳಿ ಘಟನೆ ಹಿಂದೆ ಎಸ್ ಡಿಪಿಐ ಕೈವಾಡ ಇದೆ ಎಂದು ಹೇಳಿದವರು ಈಗ ಏನು ಹೇಳುತ್ತಾರೆ ?; ಸಿದ್ದರಾಮಯ್ಯ ಪ್ರಶ್ನೆ

ವರದಿಗಾರ (ಅ.17) ಡಿಜೆ ಹಳ್ಳಿ, ಕೆಜಿ ಹಳ್ಳಿ ಘಟನೆ ಹಿಂದೆ ಎಸ್ ಡಿಪಿಐ ಕೈವಾಡ ಇದೆ ಎಂದು ಹಿಂದೆ ಸಚಿವರಾದ ಬಸವರಾಜ ಬೊಮ್ಮಾಯಿ ಮತ್ತು ಅಶೋಕ್ ಹೇಳಿದ್ದರು. ಈಗ ಅವರು ಏನು ಹೇಳುತ್ತಿದ್ದಾರೆ. ನಾವು ಯಾವುದನ್ನು ನಂಬಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಡಿ.ಜೆ.ಹಳ್ಳಿ ಮತ್ತು ಕೆ.ಜಿ. ಹಳ್ಳಿ ಘಟನೆ ಕುರಿತು ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರು ಸಂಪತ್ ರಾಜ್ ಅವರ ವಿರುದ್ಧ ಆರೋಪ ಮಾಡಿದ್ದಾರೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರ ಜೊತೆ ಮಾತುಕತೆ ನಡೆಸುತ್ತೇನೆ. ಬಿಜೆಪಿಯವರ ತಪ್ಪಿನಿಂದ, ಪೊಲೀಸರ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ನಾನು ವಿಧಾನಸಭೆಯಲ್ಲಿ ಹೇಳಿದ್ದೇನೆ. ಆ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದರು.

ದೂರು ಕೊಟ್ಟ ತಕ್ಷಣ ಪ್ರವಾದಿ ನಿಂದನೆ ಮಾಡಿದ ನವೀನ್ ನನ್ನು ಬಂಧಿಸಿದ್ದರೆ ಗಲಭೆ ಸಂಭವಿಸುತ್ತಿರಲಿಲ್ಲ. ನವೀನ್ ಬಂಧನಕ್ಕೆ ಪೊಲೀಸರು ವಿಳಂಬ ಮಾಡಲು ಕಾರಣ ಏನು ? ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು. ಪೊಲೀಸರ ವೈಫಲ್ಯ ಸಾಕಷ್ಟಿದೆ ಎಂದು ಸಿದ್ದರಾಮಯ್ಯ ಹರಿಹಾಯ್ದರು.

ನೆರೆ ಹಾವಳಿಯಿಂದಾಗಿ ಕಲ್ಯಾಣ ಕರ್ನಾಟಕ ನಲುಗಿ ಹೋಗಿದ್ದರೂ ಸಂತ್ರಸ್ತರ ಮೊರೆ ಆಲಿಸಬೇಕಾದ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಪ್ರವಾಹದಿಂದ ಕಲ್ಯಾಣ ಕರ್ನಾಟಕ ಕೊಚ್ಚಿ ಹೋಗುತ್ತಿದೆ. ಜನ ತಮ್ಮ ಜೀವ ಉಳಿದರೆ ಸಾಕು ಎಂದು ಒದ್ದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಂತ್ರಸ್ತ್ರರ ಮೊರೆ ಆಲಿಸಬೇಕಾದ, ಅವರಿಗೆ ಸಾಂತ್ವನ ಹೇಳಬೇಕಾದ ಸಚಿವರು ನಾಪತ್ತೆಯಾಗಿದ್ದಾರೆ. ಕೆಲ ಸಚಿವರು ಉಪ ಚುನಾವಣೆಯಲ್ಲಿ ಮುಳುಗಿ ಹೋಗಿದ್ದಾರೆ. ಸರ್ಕಾರ ಭ್ರಷ್ಟಾಚಾರದಲ್ಲಿ ನಿರತವಾಗಿ ಪ್ರವಾಹದ ಬಗ್ಗೆ ಮೈ ಮರೆತಿದೆ ಎಂದು ಅವರು ಟೀಕಿಸಿದರು.
ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಸಕಲ ನೆರವು ಎಂದು ಬಾಯಿ ಮಾತಿನಲ್ಲಿ ಹೇಳುತ್ತಾರೆ. ರಾಜ್ಯ ಸರ್ಕಾರ ಹಲವು ಬಾರಿ ಮನವಿ ಸಲ್ಲಿಸಿದರೂ ಕೇಂದ್ರ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ.

ಅತಿವೃಷ್ಟಿಯಿಂದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 10-15 ಸಾವಿರ ಕೋಟಿ ರೂ. ನಷ್ಟವಾಗಿದೆ. ಈ ರೀತಿಯ ದಪ್ಪ ಚರ್ಮದ ಸರ್ಕಾರವನ್ನು ಎಂದೂ ನೋಡಿಲ್ಲ. ಪ್ರವಾಹದ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಮೊದಲೇ ಹೇಳಿದ್ದರೂ ಸರ್ಕಾರ ಕಿವಿಗೊಡಲಿಲ್ಲ. ನಮ್ಮ ಸಲಹೆಗಳನ್ನು ಗಂಭೀರವಾಗಿಯೂ ಪರಿಗಣಿಸುವುದಿಲ್ಲ. ಎಷ್ಟೇ ಪತ್ರ ಬರೆದರೂ ಉತ್ತರ ನೀಡುವುದಿಲ್ಲ ಎಂದು ಟೀಕಿಸಿದರು.

ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಮ್ಮ ಅಭ್ಯರ್ಥಿ ಕುಸುಮಾ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಪೊಲೀಸರು ಸುಳ್ಳು ಕೇಸು ದಾಖಲು ಮಾಡಿದ್ದಾರೆ. ಪೊಲೀಸರನ್ನು ತಳ್ಳಿ ನಾನು ಮತ್ತು ಅಭ್ಯರ್ಥಿ ಚುನಾವಣಾಧಿಕಾರಿಗಳ ಕಚೇರಿ ಒಳಗೆ ಹೋಗಿರುವುದಾಗಿ ಎಫ್ ಐ ಆರ್ ನಲ್ಲಿ ತಿಳಿಸಲಾಗಿದೆ. ಈ ಘಟನೆ 11.15 ರಲ್ಲಿ ನಡೆದಿದೆ ಎಂದಿದ್ದಾರೆ. ನಾನು ಚುನಾವಣಾಧಿಕಾರಿಗಳ ಕಚೇರಿ ಬಳಿಗೆ ಹೋದಾಗ 11.45 ಆಗಿತ್ತು. ಸರ್ಕಾರ ಉಪ ಚುನಾವಣೆಯಲ್ಲಿ ಪೊಲೀಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ನಾವು ಗೇಟು ಅಥವಾ ಪೊಲೀಸರನ್ನು ತಳ್ಳಿಲ್ಲ. ಇದು ಸುಳ್ಳು ಆರೋಪ. ನಾನು ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುತ್ತೇನೆ. ಹೀಗಾಗಿ ಸಚಿವರುಗಳು ನನ್ನ ಬಗ್ಗೆ ಏನೇ ಟೀಕೆ ಮಾಡಿದರೂ ಐ ಡೋಂಟ್ ಕೇರ್ ಎಂದು ಸಿದ್ದರಾಮಯ್ಯ ಹೇಳಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group