ವರದಿಗಾರ (ಅ.16) ಉತ್ತರ ಪ್ರದೇಶದ ಜಲಾನ್ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತನ್ನ ತಾಯಿಯನ್ನು ನೋಡಲು ತೆರಳುತ್ತಿದ್ದಾಗ 11ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳನ್ನು ಇಬ್ಬರು ವ್ಯಕ್ತಿಗಳು ಅರಣ್ಯ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರವೆಸಗಿರುವ ಘಟನೆ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಬಾಲಕಿ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿದಾಗ ಆರೋಪಿಗಳು ಪರಾರಿಯಾಗಿದ್ದಾರೆ. ಬಳಿಕ ಇಬ್ಬರು ಆರೋಪಿಗಳ ಫೇಸ್ ಬುಕ್ ಪ್ರೊಫೈಲ್ ಫೋಟೋ ಮೂಲಕ ಪತ್ತೆ ಹಚ್ಚಲಾಗಿದ್ದು, ಸೋಶಿಯಲ್ ಮೀಡಿಯಾ ಬಳಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಜಲಾನ್ ಪೊಲೀಸ್ ವರಿಷ್ಠಾಧಿಕಾರಿ ಯಶ್ವೀರ್ ಸಿಂಗ್ ಹೇಳಿದ್ದಾರೆ
ಇಬ್ಬರು ವ್ಯಕ್ತಿಗಳು ತನ್ನನ್ನು ಕಾಡಿಗೆ ಎಳೆದೊಯ್ಯುತ್ತಿದ್ದಾಗ, ಓರ್ವ ಇನ್ನೊಬ್ಬರ ಹೆಸರನ್ನು ಕರೆದಿದ್ದಾನೆ. ಸಂತ್ರಸ್ತೆ ಈ ಹೆಸರನ್ನು ಪೊಲೀಸರಿಗೆ ತಿಳಿಸಿರುವುದನ್ನು ಹೊರತುಪಡಿಸಿ ಉಳಿದ ಯಾವ ಮಾಹಿತಿಯನ್ನೂ ನೀಡಿಲ್ಲ. ಕೊನೆಗೆ ಫೇಸ್ ಬುಕ್ ಖಾತೆಗಳ ಮೂಲಕ ಆರೋಪಿಗಳನ್ನು ಸಂತ್ರಸ್ತೆ ಗುರುತಿಸಿದ್ದಾಳೆ. ಇದರ ಆಧಾರದಲ್ಲಿ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ.
ಆಟೋ ಚಾಲಕ ಗೌರವ್ ಸೋನಿ ಎಂಬಾತನನ್ನು ಆತನ ಮನೆಯಿಂದಲೇ ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ನೀರಜ್ ಸೋನಿ ಎಂಬಾತನನ್ನು ಕೂಡ ಬಂಧಿಸಲಾಗಿದೆ. ಸಂತ್ರಸ್ತೆಯ ತಾಯಿ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ತಂದೆ ಕೂಡ ಆಸ್ಪತ್ರೆಗೆ ತೆರಳಿದ್ದರು. ಮನೆಯಲ್ಲಿ ಒಬ್ಬಳೇ ಇದ್ದ ಸಂತ್ರಸ್ತೆ ರಾತ್ರಿ ಆಸ್ಪತ್ರೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
