ವರದಿಗಾರ (ಅ.15): ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆಯಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಅವರ ಕೈವಾಡ ಬಗ್ಗೆ ಸಾಕ್ಷಿಗಳು ದೊರೆಯುತ್ತಿದ್ದಂತೆ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸುವಂತೆ ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮೇಯರ್ ಸಂಪತ್ ರಾಜು ವಿರುದ್ಧ ಯಾವುದೇ ದ್ವೇಷದ ರಾಜಕಾರಣ ಮಾಡಿಲ್ಲ. ಪೊಲೀಸ್ ತನಿಖೆಯಲ್ಲಿ ಎಲ್ಲವೂ ಸ್ಪಷ್ಟವಾಗಿ ಹೇಳಿದ್ದಾರೆ. ಪೊಲೀಸ್ ಮಾಹಿತಿ ಆಧರಿಸಿ ಅವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಒತ್ತಾಯಿಸಿದರು.
ತಮಗೆ ಆಗಿರುವ ಅನ್ಯಾಯ ಸರಿಪಡಿಸುವ ಕೆಲಸವನ್ನು ಕೆಲವು ಮಾಧ್ಯಮಗಳು ಮಾಡಿವೆ. ಅನ್ಯಾಯ ಮಾಡಿದವರನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಶಾಸಕರನ್ನು ಕೊಲೆ ಮಾಡಿದ ಆರೋಪ ಬಂದಿರುವುದರಿಂದ ಕೂಡಲೇ ಪಕ್ಷದಿಂದ ಹೊರಹಾಕಬೇಕು. ತಮಗೆ ಸಂಪತ್ ರಾಜ್ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ತಾವು ಪಕ್ಷಕ್ಕೆ ಸೇರುವ ಸಂದರ್ಭದಲ್ಲಿ ಸಂಪತ್ ರಾಜ್ ಆಕ್ಷೇಪ ವ್ಯಕ್ತಪಡಿಸಿದ್ದರು. ಘಟನೆ ಬಳಿಕ ತಾವು ಸಂಪತ್ ರಾಜ್ ಅವರಿಗೆ ಕರೆ ಮಾಡಿಲ್ಲ. ಸಂಪತ್ ರಾಜ್ ತಮಗೂ ಕರೆ ಮಾಡಿಲ್ಲ. ಚಾರ್ಜ್ ಶೀಟ್ ಆಧರಿಸಿ ಕ್ರಮ ಕೈಗೊಳ್ಳಬೇಕು. ಪಕ್ಷದಿಂದ ಹೊರಹಾಕಬೇಕು. ಪಕ್ಷಕ್ಕೆ ಹಾನಿ ಮಾಡುವವರನ್ನು ಹೊರಹಾಕಬೇಕು. ಈ ಸಂಬಂಧ ಶಾಸಕಾಂಗ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಂಪತ್ ರಾಜ್ ಅವರನ್ನು ಪಕ್ಷದಿಂದ ಉಚ್ಛಾಟಿಸಲು ಆಗ್ರಹಿಸುವುದಾಗಿ ಹೇಳಿದರು.
