ವರದಿಗಾರ (ಅ.14) ಹತ್ರಾಸ್ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ ಜನಮಾನಸದಿಂದ ಮಾಯುವ ಮುನ್ನವೇ ಉತ್ತರ ಪ್ರದೇಶದಲ್ಲಿ ಪೈಶಾಚಿಕ ರೀತಿಯಲ್ಲಿ ದಲಿತ ಬಾಲಕಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರವೆಸಗಿದ ಭೀಭತ್ಸ ಘಟನೆ ನಡೆದಿದ್ದು, ಸಂತ್ರಸ್ತೆ ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಉತ್ತರ ಪ್ರದೇಶದ ಚಿತ್ರಕೂಟ್ ನ ಕೊತ್ವಾಲಿ ಪ್ರದೇಶದ ವ್ಯಾಪ್ತಿಯ ಕೌಮ್ರಾಹಾ ಕ ಪುರ್ವಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಕ್ಟೋಬರ್ 8ರಂದು ಬಾಲಕಿ ಹೊಲಕ್ಕೆ ಹೋಗಿದ್ದಾಗ ಮೂವರು ಆಕೆಯನ್ನು ಅಪಹರಿಸಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಗ್ರಾಮದ ಮೂವರು ಪುರುಷರು ಮಗಳನ್ನು ಅಪಹರಿಸಿ ನಂತರ ಅತ್ಯಾಚಾರವೆಸಗಿದ್ದಾರೆ. ಹಲವು ಗಂಟೆಗಳ ಬಳಿಕ ಆಕೆಯ ಕೈ ಕಾಲು, ಕಟ್ಟಿ, ಹತ್ತಿರದ ನರ್ಸರಿಯಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಕುಟುಂಬದ ಸದಸ್ಯರು ದೂರಿನಲ್ಲಿ ತಿಳಿಸಿದ್ದಾರೆ.
“ನನ್ನ ಮಗಳನ್ನು ಅಕ್ಟೋಬರ್ 8 ರಂದು ಮೂವರು ಪುರುಷರು ಮೋಟಾರ್ ಸೈಕಲ್ನಲ್ಲಿ ಕರೆದೊಯ್ದು ಆಕೆಯೊಂದಿಗೆ ಕ್ರೂರವಾಗಿ ವರ್ತಿಸಿದ್ದಾರೆ. ಮಗಳು ನರ್ಸರಿಯಲ್ಲಿ ಕೈ ಮತ್ತು ಕಾಲು ಕಟ್ಟಿದ ಸ್ಥಿತಿಯಲ್ಲಿ ಮಲಗಿರುವುದನ್ನು ಕಂಡು ನಾವು ಅವಳನ್ನು ಮನೆಗೆ ಕರೆತಂದೆವು. ನಾವು ಅಪರಾಧಿಗಳ ಹೆಸರನ್ನು ತಿಳಿದುಕೊಳ್ಳಲು ಆಕೆಯಿಂದ ಪ್ರಯತ್ನಿಸಿದೆವು, ಆದರೆ ಈ ಘಟನೆಯಿಂದ ಅವಳು ಆಘಾತಕ್ಕೊಳಗಾಗಿದ್ದರಿಂದ ಅವಳು ಯಾವುದಕ್ಕೂ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ ಎಂದು ಬಾಲಕಿಯ ತಾಯಿ ಹೇಳಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ, ಬಾಲಕಿ ಆಘಾತಕ್ಕೆ ಒಳಗಾಗಿದ್ದರಿಂದ ಪೊಲೀಸರಿಗೆ ಆಕೆ ಏನನ್ನೂ ಹೇಳಲಿಲ್ಲ. ಬಳಿಕ ಮನೆಯಲ್ಲೇ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಚಿತ್ರಕೂಟದ ಎಎಸ್ಪಿ ಪ್ರಕಾಶ್ ಸ್ವರೂಪ್ ಪಾಂಡೆ ತಿಳಿಸಿದ್ದಾರೆ.
