ವರದಿಗಾರ (ಅ.13) ಉತ್ತರ ಪ್ರದೇಶದ ಪ್ರಾಂತೀಯ ನಾಗರಿಕ ಸೇವೆಗಳ (ಪಿಸಿಎಸ್) ಪ್ರಾಥಮಿಕ ಪರೀಕ್ಷೆ ನಡೆಯುತ್ತಿದ್ದಾಗಲೇ ಭಾನುವಾರ 17 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಕಾಲೇಜು ಕ್ಯಾಂಪಸ್ ನಲ್ಲೇ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಝಾನ್ಸಿ ಕಾಲೇಜಿನಲ್ಲಿ ಪೊಲೀಸರು ಇದ್ದರೂ, ನಾಗರಿಕ ಸೇವೆಗಳ ಪರೀಕ್ಷೆ ನಡೆಯುತ್ತಿದ್ದಾಗಲೇ ವಿದ್ಯಾರ್ಥಿಯ ದರೋಡೆ ಮಾಡಿ ಅತ್ಯಾಚಾರವೆಸಗಿ ಅದನ್ನು ಚಿತ್ರೀಕರಿಸಿದ್ದಾರೆ ಎಂದು ದಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
10 ನೇ ತರಗತಿಯ ವಿದ್ಯಾರ್ಥಿನಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ತನ್ನನ್ನು ಕಾಲೇಜು ವಿದ್ಯಾರ್ಥಿಗಳ ಗುಂಪೊಂದು ಕ್ಯಾಂಪಸ್ನ ಹಾಸ್ಟೆಲ್ ಕೋಣೆಗೆ ಬಲವಂತವಾಗಿ ಕರೆದೊಯ್ದಿದೆ. ತನ್ನ ಬಳಿ ಇದ್ದ 2 ಸಾವಿರ ರೂ. ದರೋಡೆ ಮಾಡಿದೆ. ಈ ವೇಳೆ ಅತ್ಯಾಚಾರವೆಸಗಿದ್ದು, ಅದನ್ನು ಇತರರು ಚಿತ್ರೀಕರಿಸಿದ್ದಾರೆ ಎಂದು ತಿಳಿಸಿದ್ದಾಳೆ.
ಈ ಘಟನೆಯ ಬಗ್ಗೆ ಯಾರಿಗಾದರೂ ತಿಳಿಸಿದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ವಿದ್ಯಾರ್ಥಿಗಳು ಬೆದರಿಕೆ ಹಾಕಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿ 8 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಜಾನ್ಸಿ ಎಸ್ ಎಸ್ ಪಿ ದಿನೇಶ್ ಕುಮಾರ್ ಪಿ ತಿಳಿಸಿದ್ದಾರೆ.
“ಕೆಲವು ಪೊಲೀಸ್ ಸಿಬ್ಬಂದಿಗಳು ಹುಡುಗಿಯ ಕೂಗಾಟ ಕೇಳಿ ಅಲ್ಲಿಗೆ ಹೋಗಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಆಕೆಯನ್ನು ಪೊಲೀಸರು ಸಿಪ್ರಿ ಬಜಾರ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ಆಕೆ ನಡೆದ ಘಟನೆಯನ್ನು ಪೊಲೀಸರಿಗೆ ವಿವರಿಸಿದ್ದಾಳೆ. ಅವಳು ಆರೋಪಿಗಳಲ್ಲಿ ಒಬ್ಬನನ್ನು ಭರತ್ ಎಂದು ಗುರುತಿಸಿದ್ದಾಳೆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ರೋಹಿತ್ ಸೈನಿ, ಭರತ್ ಕುಶ್ವಾಹ, ಶೈಲೇಂದ್ರ ನಾಥ್ ಪಾಠಕ್, ಮಾಯಾಂಕ ಶಿವೇರಾ, ವಿಪಿನ್ ತಿವಾರಿ, ಮೋನು ಪರ್ಯಾ, ಧರ್ಮೇಂದ್ರ ಸೇನ್, ಸಂಜಯ್ ಕುಶ್ವಾಹ ಬಂಧಿತ ಆರೋಪಿಗಳು. ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ದರೋಡೆ, ಸುಲಿಗೆ, ಹಲ್ಲೆ, ಕ್ರಿಮಿನಲ್ ಸಂಚು ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.
ಕಾಲೇಜಿನ ಪ್ರಾಂಶುಪಾಲರ ಪ್ರಕಾರ, ಆರೋಪಿಗಳು ದ್ವಿತೀಯ ವರ್ಷದ ವಿದ್ಯಾರ್ಥಿಗಳು. ಘಟನೆಯಲ್ಲಿ ಭಾಗಿಯಾಗಿರುವ ಇತರ ವಿದ್ಯಾರ್ಥಿಗಳ ಗುರುತನ್ನು ಪತ್ತೆಹಚ್ಚಲು ಪೊಲೀಸರೊಂದಿಗೆ ಸಹಕಾರ ನೀಡಲಾಗುವುದು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ
