ಯೋಗಿ ಸರಕಾರ ಅತ್ಯಾಚಾರಿಗಳಿಗೆ ಬೆಂಗವಲಾಗುತ್ತಿದೆ; ಫಯಾಜ್ ದೊಡ್ಡಮನೆ
ವರದಿಗಾರ (ಅ.12) ಹಥ್ರಾಸ್ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ಹೋಗುತ್ತಿದ್ದ ಕ್ಯಾಂಪಸ್ ಫ್ರಂಟ್ ನಿಯೋಗ ಮತ್ತು ಪತ್ರಕರ್ತನನ್ನು ಬಂಧಿಸಿ ಯು.ಎ. ಪಿ. ಎ ಕೇಸು ದಾಖಲಿಸಿದ್ದನ್ನು ಖಂಡಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಪ್ರತಿಭಟನೆಯನ್ನು ನಡೆಸಿ ಬಂಧನಮುಕ್ತಗೊಳಿಸುವಂತೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ -ಸಿ.ಎಫ್.ಐ ಒತ್ತಾಯಿಸಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತಾಡಿದ ರಾಜ್ಯಾಧ್ಯಕ್ಷ ಫಯಾಜ್ ದೊಡ್ಡಮನೆ, ‘ಯೋಗಿ ಆಳುವ ಉತ್ತರ ಪ್ರದೇಶದಲ್ಲಿ ಹೆಣ್ಮಕ್ಕಳು, ಮಹಿಳೆಯರು ಭೀತಿಯಿಂದ ಬದುಕುತ್ತಿದ್ದಾರೆ, ರಾಜ್ಯದಲ್ಲಿ ಅತ್ಯಾಚಾರ ಅತಿಯಾಗಿ ಬೆಳೆಯುತ್ತಿರುವಾಗ ಯಾವುದೇ ಕ್ರಮ ಕೈಗೊಳ್ಳದೆ ಇರುವ ಸರಕಾರ ನ್ಯಾಯದ ಪರ ಧ್ವನಿ ಎತ್ತುವವರನ್ನು ಅನ್ಯಾಯವಾಗಿ ಬಂಧಿಸಿ ಯು.ಎ. ಪಿ.ಎ ಹಾಕುವ ಮೂಲಕ ಠಾಕೂರ್ ಸಮುದಾಯಕ್ಕೆ ಸೇರಿದ ಮೇಲ್ವರ್ಗದ ಅತ್ಯಾಚಾರಿಗಳಿಗೆ ಬೆಂಗವಲಾಗುತ್ತಿದೆ’ ಎಂದು ಆರೋಪಿಸಿದ್ದು , ಶೀಘ್ರ ಕ್ಯಾಂಪಸ್ ಫ್ರಂಟ್ ನಾಯಕರು ಮತ್ತು ಪತ್ರಕರ್ತನ ಮೇಲೆ ಹಾಕಿದ ಯು. ಎ ಪಿ. ಎ ಕೇಸನ್ನು ಹಿಂತೆಗೆಯಬೇಕೆಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ರಾಜ್ಯ ಸಮಿತಿ ಸದಸ್ಯೆ ಶೈಮಾ ಶರೀಫ್, ಬೆಂಗಳೂರು ಜಿಲ್ಲಾಧ್ಯಕ್ಷ ಝುಬೈರ್ ಮಾತನಾಡಿದರು. ಯೋಗಿ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುವ ಬಿತ್ತಿಪತ್ರ ಗಳನ್ನು ಪ್ರದರ್ಶಿಸಲಾಯಿತು. ಯೋಗಿಯ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆಯುವ ಮೂಲಕ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯದರ್ಶಿ ಅಥವುಲ್ಲಾ , ರಿಯಾಜ್ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಆಖಿಬ್ ಚಾಮರಾಜ ಪೇಟೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
