ವರದಿಗಾರ (ಅ.12) ಪ್ರಾಣಿಗಳ ‘ಹಲಾಲ್ ಬಲಿಯನ್ನು ನಿಷೇಧಿಸುವಂತೆ ಸೂಚಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
‘ನಿಮ್ಮ ಅರ್ಜಿ ಚೇಷ್ಟೆ ಸ್ವರೂಪದಿಂದ ಕೂಡಿದೆ’ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ನ್ಯಾಯಪೀಠ ಅರ್ಜಿದಾರರಾದ ಅಖಂಡ್ ಭಾರತ್ ಮೋರ್ಚಾ (ಎಬಿಎಂ) ಗೆ ಕಟುವಾಗಿ ಹೇಳಿದೆ.
‘ನಿಮ್ಮ ಅರ್ಜಿಯನ್ನು ವಜಾಗೊಳಿಸುತ್ತಿದ್ದೇವೆ. ಈ ರೀತಿಯ ವಿಷಯಗಳು ವಿಚಾರಣೆಗೆ ಅರ್ಹವಲ್ಲ.’ ನ್ಯಾಯಪೀಠ ಹೇಳಿದೆ.
‘ಸಸ್ಯಾಹಾರಿ ಅಥವಾ ಮಾಂಸಾಹಾರಿ ಯಾರು ಎಂದು ನ್ಯಾಯಾಲಯ ನಿರ್ಧರಿಸಲು ಸಾಧ್ಯವಿಲ್ಲ. ಹಲಾಲ್ ಕಟ್ (ಬಲಿ) ಮಾಂಸವನ್ನು ತಿನ್ನಲು ಬಯಸುವವರು ಹಲಾಲ್ ಮಾಂಸವನ್ನು ತಿನ್ನಬಹುದು. ಜತ್ಕಾ ಮಾಂಸವನ್ನು ತಿನ್ನಲು ಬಯಸುವವರು ಜತ್ಕಾ ಮಾಂಸವನ್ನು ತಿನ್ನಬಹುದು.’ ಎಂದು ನ್ಯಾಯಮೂರ್ತಿ ಕೌಲ್ ಅವರು ಅಖಂಡ್ ಭಾರತ್ ಮೋರ್ಚಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಅರ್ಜಿದಾರರಾದ ಎಬಿಎಂ, ಪ್ರಾಣಿಗಳ ಹಲಾಲ್ ಬಲಿಯನ್ನು ನಿಷೇಧಿಸುವಂತೆ ನಿರ್ದೇಶನ ಕೋರಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿತ್ತು. ಆದರೆ, ಸುಪ್ರೀಂ ಕೋರ್ಟ್ ಅರ್ಜಿಯಲ್ಲಿ ಯಾವುದೇ ಪರಿಗಣಿಸುವಂತಹ ಅಂಶಗಳು ಕಂಡುಬಾರದ ಹಿನ್ನೆಲೆಯಲ್ಲಿ ಅದನ್ನು ವಜಾಗೊಳಿಸಿದೆ.
