ವರದಿಗಾರ (ಅ.12) ಉತ್ತರಪ್ರದೇಶದ ಹತ್ರಾಸ್ ಸಾಮೂಹಿಕ ಅತ್ಯಾಚಾರ, ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ಸರ್ಕಾರ ಆರೋಪಿಗಳನ್ನು ರಕ್ಷಿಸುತ್ತಿದೆ. ಮಾತ್ರವಲ್ಲ ಈ ವಿಚಾರದಲ್ಲಿ ರಾಜ್ಯ ಸರ್ಕಾರದ ವರ್ತನೆ ಅನೈತಿಕ ಮತ್ತು ಅಮಾನವೀಯ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
‘ಸಂತ್ರಸ್ತರಿಗೆ ನ್ಯಾಯ ಒದಗಿಸುವ ಬದಲು, ರಾಜ್ಯ ಸರ್ಕಾರ ಆರೋಪಿಗಳನ್ನು ರಕ್ಷಿಸುತ್ತಿದೆ. ನಾನು ಹತ್ರಾಸ್ ಗ್ಯಾಂಗ್ರೇಪ್ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾದಾಗ ಇದು ನನಗೆ ಸ್ಪಷ್ಟವಾಗಿದೆ’ ಎಂದು ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
ದೇಶಾದ್ಯಂತ ಮಹಿಳೆಯರ ಮೇಲಿನ ಅನ್ಯಾಯಗಳ ವಿರುದ್ಧ ಧ್ವನಿ ಎತ್ತೋಣ. ಇದು ಬದಲಾವಣೆಯತ್ತ ಒಂದು ಹೆಜ್ಜೆಯಾಗಿರುತ್ತದೆ” ಎಂದು ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
