ವರದಿಗಾರ (ಅ.11) ಹತ್ರಾಸ್ ಸಂತ್ರಸ್ತೆ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಿದ್ದರೂ, ಪೊಲೀಸರು ಮಾತ್ರ ಅತ್ಯಾಚಾರ ನಡೆದೇ ಇಲ್ಲ ಎಂದು ಹೇಳುತ್ತಿದ್ದಾರೆ, ಪರೋಕ್ಷವಾಗಿ ಅವರು ಸಂತ್ರಸ್ತೆಯನ್ನು ಮನುಷ್ಯಳಂತೆ ಪರಿಗಣಿಸಿಯೇ ಇಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಬಹಳಷ್ಟು ಮಂದಿ ದಲಿತರು, ಮುಸ್ಲಿಮರು, ಆದಿವಾಸಿಗಳನ್ನು ಮನುಷ್ಯರೆಂದು ಪರಿಗಣಿಸುತ್ತಿಲ್ಲ. ಇದು ನಾಚಿಕೆಪಡುವಂತಹ ವಾಸ್ತವ ಸ್ಥಿತಿ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.ಹತ್ರಾಸ್ ಅತ್ಯಾಚಾರ ಘಟನೆಯನ್ನು ಪ್ರಸ್ತಾಪಿಸಿರುವ ಅವರು ತೀವ್ರ ಟೀಕಾಪ್ರಹಾರ ನಡೆಸಿದ್ದಾರೆ.
ಯಾರು ಅತ್ಯಾಚಾರಕ್ಕೆ ಒಳಗಾಗಿಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ, ಅಲ್ಲಿನ ಪೊಲೀಸರು ಪದೇ ಪದೇ ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಂದರೆ, ಆ ಸಂತ್ರಸ್ತೆ ಹೆಣ್ಣು ಮಗಳು ಯಾರಿಗೂ ಏನು ಅಲ್ಲವೆ ? ಎಂದು ರಾಹುಲ್ ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶ ಹತ್ರಾಸ್ ನಲ್ಲಿ ಕಳೆದ ತಿಂಗಳು 19 ವರ್ಷದ ಯುವತಿಯ ಮೇಲೆ ಮೇಲ್ವರ್ಗದ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿ, ಬರ್ಬರವಾಗಿ ಹತ್ಯೆ ನಡೆಸಿದ್ದರು. ಈ ಘಟನೆಯ ಬಗ್ಗೆ ಉತ್ತರ ಪ್ರದೇಶ ಸರ್ಕಾರದ ಮನವಿಯಂತೆ ಸಿಬಿಐ ತನಿಖೆ ನಡೆಸಲು ಕೇಂದ್ರ ಸರ್ಕಾರ ಶನಿವಾರ ಅಧಿಸೂಚನೆ ಹೊರಡಿಸಿದೆ. ಅಲ್ಲದೆ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಕಳೆದ ವಾರ ರಾಹುಲ್ ಗಾಂಧಿ, ಸಹೋದರಿ ಪ್ರಿಯಾಂಕ ಗಾಂಧಿ ಭೇಟಿ ಮಾಡಿ ಸಾಂತ್ವನ ಹೇಳಿದ್ದರು.
