ರಾಷ್ಟ್ರೀಯ ಸುದ್ದಿ

ರೈತರಿಗೆ ಮರಣಶಾಸನ ಬರೆಯಲು ಹೊರಟ ಬಿಜೆಪಿ ಸರ್ಕಾರ: ಸುರ್ಜೇವಾಲ ಟೀಕಾಪ್ರಹಾರ

Surjewala

ಬಿಜೆಪಿ ಸರ್ಕಾರ ರೈತರ ಸಮಾಧಿಯ ಮೇಲೆ ಬಂಡವಾಳಶಾಹಿಗಳಿಗೆ ನೆರವು ಕಲ್ಪಿಸಲು ಮುಂದಾಗಿದೆ; ಸಿದ್ದರಾಮಯ್ಯ

“ಬಿಜೆಪಿ ತಂದಿರುವ ಜನವಿರೋಧಿ ಕಾಯಿದೆಗಳನ್ನು ಕಸದಬುಟ್ಟಿಗೆ ಹಾಕಿ ಮೂಲ ಕಾಯಿದೆಯನ್ನು ಯಥಾವತ್ ಉಳಿಸುತ್ತೇವೆ”

ವರದಿಗಾರ (ಅ.11) ಕೇಂದ್ರದ ಬಿಜೆಪಿ ನೇತೃತ್ವದ ಪ್ರಧಾನಿ ನರೇಂದ್ರಮೋದಿ ಸರ್ಕಾರ ಕೃಷಿ ಸಂಬಂಧಿತ ಕಾಯ್ದೆಗಳ ಮೂಲ ಸ್ವರೂಪವನ್ನೇ ತಿದ್ದುಪಡಿ ಮಾಡುವ ಮೂಲಕ ಅಂಬಾನಿ-ಅದಾನಿಗಳಿಗೆ ಅನುಕೂಲ ಮಾಡಿ ರೈತರಿಗೆ ಮರಣ ಶಾಸನ ಬರೆಯಲು ಮುಂದಾಗಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ.

ಮಂಡ್ಯದ ಅಂಬೇಡ್ಕರ್ ಭವನದಲ್ಲಿ ನಡೆದ ರೈತ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2014ರಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ರೈತರ ಭೂಸ್ವಾಧೀನ ಕಾಯ್ದೆ ರೈತರಿಗೆ ಭದ್ರತೆ ಒದಗಿಸಿತ್ತು. ಆದರೆ ನಂತರ ಬಂದ ಮೋದಿ ಸರ್ಕಾರ ರೈತರ ಈ ಹಕ್ಕುಗಳನ್ನು ಮೊಟಕುಗೊಳಿಸಿ ಅವರನ್ನು ದುರ್ಬಲ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.

ಕನಿಷ್ಠ ಬೆಂಬಲ ಬೆಲೆ ಕೂಡ ರದ್ದು ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ಆ ಮೂಲಕ ಕೈಗಾರೀಕರಣ ಮತ್ತು ಖಾಸಗೀಕರಣಕ್ಕೆ ಕೆಂಪು ಹಾಸು ಹಾಸಿದೆ. ಇದನ್ನು ಪ್ರತಿಯೊಬ್ಬರೂ ವಿರೋಧಿಸಬೇಕಿದೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಈ ಹಿಂದೆ ಚೆಕ್ ಮೂಲಕ ಲಂಚ ಪಡೆದು ಕುಖ್ಯಾತರಾದರೆ, ಅವರ ಪುತ್ರ ಆರ್ ಟಿಜಿಎಸ್ ಮೂಲಕ ಲಂಚ ಪಡೆಯುವ ಮೂಲಕ ಕಡು ಭ್ರಷ್ಟ ಆಡಳಿತಕ್ಕೆ ಕಾರಣರಾಗಿದ್ದಾರೆ. ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ರೈತರ ಸಮಾಧಿಯ ಮೇಲೆ ಬಂಡವಾಳಶಾಹಿಗಳಿಗೆ ನೆರವು ಕಲ್ಪಿಸಲು ಮುಂದಾಗಿದ್ದು, ಅದಕ್ಕಾಗಿ ಭೂ ಸುಧಾರಣಾ, ಎಪಿಎಂಸಿ ಹಾಗೂ ವಿದ್ಯುತ್ ಕಾಯಿದೆಗಳಿಗೆ ತಿದ್ದುಪಡಿ ತರಲು ಮುಂದಾಗಿದೆ. ಸದನದಲ್ಲಿ ಯಾವುದೇ ಚರ್ಚೆ ಇಲ್ಲದೆ ತುರ್ತಾಗಿ ಸುಗ್ರೀವಾಜ್ಞೆ ಮೂಲಕ ಕಾಯಿದೆಯನ್ನು ಜಾರಿಗೊಳಿಸುವ ಅಗತ್ಯವೇನಿತ್ತು ಎಂಬ ಪ್ರಶ್ನೆ ನಾಡಿನ ಜನರನ್ನು ಕಾಡುತ್ತಿದೆ ಎಂದರು.

ಬಿಜೆಪಿಯವರಿಗೆ ಡಾ. ಬಿ.ಆರ್. ಅಂಬೇಡ್ಕರ್ ರವರು ರಚಿಸಿದ ಸಂವಿಧಾನದ ಮೇಲೆ ಕಿಂಚಿತ್ತೂ ವಿಶ್ವಾಸವಿಲ್ಲ. ಅದಕ್ಕಾಗಿ ಮೋದಿ ಹಾಗೂ ಅಮಿತ್ ಷಾ ಅವರು ತಮ್ಮ ಬೆಂಬಲಿಗ ಅನಂತಕುಮಾರ್ ಹೆಗಡೆ ಮೂಲಕ ಸಂವಿಧಾನವನ್ನೇ ಬದಲಿಸುವ ಹೇಳಿಕೆ ಕೊಡಿಸಿದ್ದಾರೆ. ಆದರೆ, ಸಂವಿಧಾನವನ್ನು ಭಾರತದ ಪ್ರತಿಯೊಬ್ಬ ನಾಗರೀಕನೂ ಒಪ್ಪಿರುವುದರಿಂದ ಅದನ್ನು ಬದಲಿಸುವ ಅಥವಾ ಮೂಲರೂಪಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನವೂ ನಡೆಯದು. ನಮ್ಮ ಪಕ್ಷ ಮುಂದಿನ ಚುನಾವಣೆಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ನಿಶ್ಚಿತ. ಆಗ ಇವರು ತಂದಿರುವ ಜನವಿರೋಧಿ ಕಾಯಿದೆಗಳನ್ನು ಕಸದಬುಟ್ಟಿಗೆ ಹಾಕಿ ಮೂಲ ಕಾಯಿದೆಯನ್ನು ಯಥಾವತ್ ಉಳಿಸುವುದಾಗಿ ಭರವಸೆ ನೀಡಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group