ವರದಿಗಾರ (ಅ.11) ಕೊರೊನಾ ವೈರಸ್ಗೆರ ತುತ್ತಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೊರೋನಾ ಪರೀಕ್ಷೆಯನ್ನು ವ್ಯವಸ್ಥಿತವಾಗಿ ಸಮರೋಪಾದಿಯಲ್ಲಿ ಮಾಡಿದರೆ ಇನ್ನು ಜಾಸ್ತಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಸಂಭವ ಇರುವುದರಿಂದ ಮಕ್ಕಳ ಆರೋಗ್ಯದ ದೃಷ್ಟಿಯಲ್ಲಿ ಸದ್ಯಕ್ಕೆ ಶಾಲೆಗಳನ್ನು ಪ್ರಾರಂಭ ಮಾಡಬಾರದು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ –ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹನ್ನಾನ್ ಆಗ್ರಹಿಸಿದ್ದಾರೆ.
ಪಕ್ಷದ ವತಿಯಿಂದ ಈಗಾಗಲೇ ಸುಮಾರು 20 ಜಿಲ್ಲೆಗಳಲ್ಲಿ ಪೋಷಕರ, ಮಕ್ಕಳ ಹಕ್ಕುಗಳ ಚಿಂತಕರ, ಸಾಮಾಜಿಕ ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದ್ದು, ಎಲ್ಲರ ಒಮ್ಮತಾಭಿಪ್ರಾಯ ಸಾರಾಂಶ ಯಾವ ಕಾರಣಕ್ಕೂ ಸದ್ಯಕ್ಕೆ ಶಾಲೆಗಳನ್ನು ಪ್ರಾರಂಭ ಮಾಡಬಾರದು ಎಂಬುದಾಗಿ ಆಗಿದೆ ಎಂದು ಹನ್ನಾನ್ ತಿಳಿಸಿದ್ದಾರೆ.
ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಒತ್ತಡಕ್ಕೆ ಮಣಿದು ಸರ್ಕಾರ ಏನಾದರೂ ಶಾಲೆಗಳನ್ನು ಪ್ರಾರಂಭಿದರೆ ಅದರಿಂದ ಆಗುವ ಅನಾಹುತಕ್ಕೆ ಸರ್ಕಾರವೇ ಹೊಣೆಯಾಗಲಿದೆ. ಈ ಒಂದು ವರ್ಷ ಎಲ್ಲಾ ಮಕ್ಕಳನ್ನು ಪ್ರಮೋಶನ್ ಕೊಟ್ಟು ಪಾಸ್ ಮಾಡಲಿ, ಹಾಗೆ ಮಾಡುವುದರಿಂದ ಕಳೆದುಕೊಳ್ಳುವುದು ಏನು ಇಲ್ಲ. ಈ ಮುಂಜಾಗೃತ ಕ್ರಮ ಕಾಲೇಜು ವಿದ್ಯಾರ್ಥಿಗಳಿಗೂ ಅನ್ವಯವಾಗಲಿ ಎಂದು ಅವರು ಅಭಿಪ್ರಾಯಿಸಿದ್ದಾರೆ.
