ಇಡೀ ವಿಶ್ವ ಮಾಧ್ಯಮಗಳ ಮತ್ತು ಬಲಿಷ್ಟ ರಾಷ್ಟ್ರಗಳ ಜಾಣ ಕುರುಡಿಗೆ ಕಾರಣವಾಗಿ ಬರ್ಮಾದ ಬೌದ್ಧ ಉಗ್ರಗಾಮಿ ನಾಯಕ ಆಶಿನ್ ವಿರಾತುನ ಹಿಂಬಾಲಕರ ಮತ್ತು ಸರ್ಕಾರಿ ಪಡೆಗಳ ಕ್ರೌರ್ಯಕ್ಕೆ ಬಲಿಯಾಗುತ್ತಿರುವ ರೋಹಿಂಗ್ಯಾ ನಿರಾಶ್ರಿತರ ಬೆಂಬಲಕ್ಕೆ ಸದಾ ಸಿದ್ಧವಾಗಿರುವ ಟರ್ಕಿ ಇದೀಗ ಮತ್ತೊಮ್ಮೆ ಅವರ ರಕ್ಷಣೆಗೆ ನೆರವಾಗುವ ಉದ್ದೇಶದೊಂದಿಗೆ ಬಾಂಗ್ಲಾದೊಂದಿಗೆ ಮಾನವೀಯತೆಯ ಮನವಿಯೊಂದನ್ನು ಮಾಡಿದೆ. ಬರ್ಮಾದ ರಾಖೈನ್ ಪ್ರಾಂತ್ಯದಿಂದ ನುಗ್ಗುವ ರೋಹಿಂಗ್ಯಾ ನಿರಾಶ್ರಿತರಿಗೆ ತಮ್ಮ ಗಡಿಯನ್ನು ತೆರೆದು ಅವರಿಗೆ ಆಶ್ರಯ ಕೊಡಬೇಕೆಂದೂ, ಅದರ ಎಲ್ಲಾ ಖರ್ಚು ವೆಚ್ಚಗಳನ್ನು ಟರ್ಕಿ ಭರಿಸುವುದಾಗಿಯೂ ಟರ್ಕಿಯ ವಿದೇಶಾಂಗ ಸಚಿವ ಮೆವ್ಲೂತ್ ಚಾವುಸೋಗ್ಲು ಅವರು ಎ ಕೆ ಪಕ್ಷದ ಬಕ್ರೀದ್ ಆಚರಣೆಯ ಸಂದರ್ಭದ ನೇಪತ್ಯದಲ್ಲಿ ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ.
ಇಸ್ಲಾಮೀ ಸಹಕಾರವನ್ನು ನಾವು ಒಟ್ಟುಗೂಡಿಸಿದ್ದು, ಈ ವರ್ಷಾಂತ್ಯದೊಳಗೆ ರಾಖೈನ್ ಪ್ರಾಂತ್ಯದಲ್ಲಿ ಎಲ್ಲರನ್ನೂ ಸೇರಿಸಿಕೊಂಡು ರೋಹಿಂಗ್ಯಾ ನಿರಾಶ್ರಿತರ ಸಮಸ್ಯೆಯ ನಿರ್ಣಾಯಕ ಮತ್ತು ಶಾಶ್ವತ ಪರಿಹಾರಕ್ಕಾಗಿ ಚರ್ಚೆ ನಡೆಸಲಿದ್ದೇವೆ ಎಂದವರು ಇದೇ ವೇಳೆ ತಿಳಿಸಿದರು. ಟರ್ಕಿಯನ್ನು ಹೊರತುಪಡಿಸಿ ಇತರೆ ಯಾವುದೇ ಮುಸ್ಲಿಂ ರಾಷ್ಟ್ರಗಳು ಬರ್ಮಾ ಹತ್ಯಾಕಾಂಡದ ಕುರಿತು ಸಂವೇದನಾಶೀಲರಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಜಾಗತಿಕ ಮಟ್ಟದಲ್ಲಿ ಮಾನವೀಯ ನೆರವು ನೀಡುವುದರಲ್ಲಿ ವಿಶ್ವಸಂಸ್ಥೆಯ ನಂತರದ ಸ್ಥಾನದಲ್ಲಿ ಟರ್ಕಿ ಇದೆಯೆಂದು ಚಾವುಸೋಗ್ಲು ತಿಳಿಸಿದರು. ವಿಶ್ವಸಂಸ್ಥೆ 6.3 ಬಿಲಿಯನ್ ಡಾಲರ್ ನೆರವು ನೀಡಿದ್ದರೆ, ಟರ್ಕಿ 6 ಬಿಲಿಯನ್ ಡಾಲರ್ ನೆರವು ನೀಡಿದೆ ಎಂದರು.
ಟರ್ಕಿ ಅಧ್ಯಕ್ಷ ರೆಸಿಪ್ ಎರ್ದೋಗನ್ ಈದುಲ್ ಅಝಾದ ಪ್ರಯುಕ್ತ 13 ಮುಸ್ಲಿಂ ರಾಷ್ಟ್ರಗಳ ಮುಖಂಡರೊಂದಿಗೆ ಫೋನ್ ಮುಖಾಂತರ ಮಾತನಾಡಿದ್ದು, ಈ ವೇಳೆ ರೋಹಿಂಗ್ಯಾ ಸಮಸ್ಯೆಯ ಕುರಿತು ತನ್ನ ಕಾಳಜಿಯನ್ನು ವ್ಯಕ್ತಪಡಿಸಿದ ನಂತರ ಚಾವುಸೋಗ್ಲು ಈ ಮಾನವೀಯ ನೆರವಿಗಾಗಿ ಬಾಂಗ್ಲಾದೊಂದಿಗೆ ಮನವಿ ಮಾಡಿದ್ದಾರೆ. ಖುದ್ದು ವಿದೇಶಾಂಗ ಸಚಿವರು ಕೂಡಾ
ರಾಖೈನ್ ಫ್ರಾಂತ್ಯದ ಸಲಹಾ ಸಮಿತಿ ಮುಖ್ಯಸ್ಥ ಮತ್ತು ಮಾಜಿ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿಯಾಗಿರುವ ಕೋಫಿ ಅನ್ನಾನ್’ರೊಂದಿಗೂ ಈ ಕುರಿತು ಚರ್ಚಿಸಿದ್ದಾರೆ.
ಕಳೆದ ಆಗಸ್ಟ್ 25 ರಂದು ಮಯನ್ಮಾರಿನ ಭದ್ರತಾ ಪಡೆಗಳು ರಾಖೈನ್ ಪ್ರಾಂತ್ಯದ ಮುಸ್ಲಿಮರ ವಿರುದ್ಧ ನಡೆಸಿದ ಹೊಸ ದಾಳಿಯ ನಂತರ ನಿರಾಶ್ರಿತರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನ ಮಾಡಲು ಶುರು ಮಾಡಿದ್ದರು. ಇದನ್ನು ತಪ್ಪಿಸಲು ಬಾಂಗ್ಲಾ ಬರ್ಮಾದೊಂದಿಗಿರುವ ತನ್ನ ಗಡಿಯನ್ನು ಮುಚ್ಚಿತ್ತು. ಮಾಧ್ಯಮ ವರದಿಯ ಪ್ರಕಾರ ಬರ್ಮಾದ ಪಡೆಗಳು ರೋಹಿಂಗ್ಯಾ ಗ್ರಾಮದ ಮುಸ್ಲಿಮರ ಮನೆಗಳನ್ನು ಮೋರ್ಟಾರ್ ಮತ್ತು ಮೆಶಿನ್ ಗನ್’ಗಳ ಮೂಲಕ ನಾಶಪಡಿಸುತ್ತಿದ್ದಾರೆ. 2012 ರಲ್ಲಿ ಮೊದಲ ಬಾರಿಗೆ ರಾಖೈನ್ ಪ್ರಾಂತ್ಯದಲ್ಲಿ ಮುಸ್ಲಿಮರ ಮತ್ತು ಬೌದ್ಧಾನುಯಾಯಿಗಳ ಮಧ್ಯೆ ಗಲಭೆ ಪ್ರಾರಂಭವಾಗಿತ್ತು. ತದ ನಂತರ ಆಶಿನ್ ವಿರಾತುನ ನೇತೃತ್ವದಲ್ಲಿ ತೀವ್ರಗಾಮಿಗಳು ಎಲ್ಲೆಂದರಲ್ಲಿ ಮುಸ್ಲಿಮರ ಮೇಲೆ ದಾಳಿ ಮಾಡುತ್ತಲೇ ಇದ್ದಾರೆ. ರಾಷ್ಟ್ರದ ಭದ್ರತಾ ಪಡೆಗಳೂ ಈ ಕಾರ್ಯದಲ್ಲಿ ತಮ್ಮ ಪಾಲನ್ನೂ ನೀಡುತ್ತಿವೆ.
ವಿಶ್ವಸಂಸ್ಥೆಯು, ರಾಖೈನ್ ಪ್ರಾಂತ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದರ ಕುರಿತು ಉಲ್ಲೇಖಿಸಿತ್ತು. ಅಲ್ಲಿ ಸಾಮೂಹಿಕ ಅತ್ಯಾಚಾರ, ಮಹಿಳೆ ಮತ್ತು ಮಕ್ಕಳ ಸಾಮೂಹಿಕ ಕೊಲೆ, ಭೀಕರವಾಗಿ ಹೊಡೆಯುವಂತಹಾ ಮಾನವೀಯತೆಯನ್ನೇ ನಾಚಿಸುವಂತಹಾ ಕೃತ್ಯಗಳು ನಡೆಯುತ್ತದೆಯೆಂದು ವಿಶ್ವಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿತ್ತು. ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ನೇತೃತ್ವದ ಸಮಿತಿಯು ರೋಹಿಂಗ್ಯಾ ಮುಸ್ಲಿಮರಿಗೆ ಪೌರತ್ವ ನೀಡಬೇಕೆನ್ನುವ ಸಲಹೆಯನ್ನು ಬೌದ್ಧ ತೀವ್ರಗಾಮಿಗಳ ವಿರೋಧದಿಂದಾಗಿ ಇನ್ನೂ ಅನುಷ್ಟಾನಕ್ಕೆ ಬಂದಿಲ್ಲ. ರೋಹಿಂಗ್ಯಾ ನಿರಾಶ್ರಿತರ ಮಾರಣಹೋಮ ನಡೆಯುತ್ತಿದ್ದರೂ ಬರ್ಮಾದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಆಂಗ್ ಸ್ಯಾನ್ ಸೂಕಿ ತುಟಿ ಬಿಚ್ಚದಿರುವುದನ್ನು ಮಾನವ ಹಕ್ಕು ಕಾರ್ಯಕರ್ತರು ಖಂಡಿಸಿದ್ದಾರೆ. ಈ ಮಧ್ಯೆ ಟರ್ಕಿಯ ಮಾನವೀಯ ನೆರವಿನ ಘೋಷಣೆಗೆ ಬಾಂಗ್ಲಾ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತದೋ ಎಂದು ಕಾದು ನೋಡಬೇಕಾಗಿದೆ.
