ವರದಿಗಾರ (ಅ.9): ಕೆಲವು ಟಿವಿ ಚಾನೆಲ್ ಗಳು ‘ಸುಳ್ಳು ಟಿಆರ್ಪಿ ದಂಧೆ’ಯಲ್ಲಿ ತೊಡಗಿವೆ ಎಂದು ಮುಂಬೈ ಪೊಲೀಸರು ಸುದ್ದಿಗೋಷ್ಠಿಯಲ್ಲಿ ಹೇಳಿದ ಕೆಲವೇ ಗಂಟೆಗಳಲ್ಲೇ, ಖ್ಯಾತ ಕೈಗಾರಿಕೋದ್ಯಮಿ ರಾಜೀವ್ ಬಜಾಜ್, ತಮ್ಮ ಕಂಪನಿ ಈ ಮೂರು ಚಾನೆಲ್ಗಳನ್ನು ಕಪ್ಪುಪಟ್ಟಿಗೆ ಸೇರಿಸಿದ್ದು, ಈ ಚಾನೆಲ್ ಗಳಿಗೆ ಜಾಹೀರಾತು ನೀಡುವುದಿಲ್ಲ ಎಂದು ಹೇಳಿದ್ದಾರೆ.
ಸಮಾಜಕ್ಕೆ ಹಾನಿಕಾರಕ ಎಂದು ಭಾವಿಸಿದ ಯಾವುದರೊಂದಿಗೂ ಬಜಾಜ್ ಕಂಪನಿ ಸಂಬಂಧ ಹೊಂದುವುದಿಲ್ಲ ಎಂದು ರಾಜೀವ್ ಬಜಾಜ್ ತಿಳಿಸಿದ್ದಾರೆ. ಈ ಚಾನೆಲ್ ಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಈ ನಿರ್ಧಾರವನ್ನು ನಮ್ಮ ಸಂಸ್ಥೆಯ ಮಾರ್ಕೆಟಿಂಗ್ ಮುಖ್ಯಸ್ಥರು ಈ ಹಿಂದೆಯೇ ಕಾರ್ಯರೂಪಕ್ಕೆ ತಂದಿದ್ದರಾದರೂ ಇದೀಗ ಅದನ್ನು ಬಹಿರಂಗವಾಗಿ ಹೇಳುತ್ತಿದ್ದೇನೆ ಎಂದು ರಾಹುಲ್ ಹೇಳಿದ್ದಾರೆ.
ರಿಪಬ್ಲಿಕ್ ಟಿವಿ ಮತ್ತು ಇತರ ಕೆಲವು ಚಾನೆಲ್ ಗಳು ಟಿಆರ್ ಪಿಗಾಗಿ ಅಕ್ರಮ ಮಾರ್ಗ ಅನುಸರಿಸಿದ ಆರೋಪ ಎದುರಿಸುತ್ತಿದೆ. ಈ ಬಗ್ಗೆ ಮುಂಬೈ ಪೊಲೀಸ್ ಮಹಾನಿರ್ದೇಶಕ ಪರಂವೀರ್ ಸಿಂಗ್ ನಿನ್ನೆಯಷ್ಟೇ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಮಾತ್ರವಲ್ಲ ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದರು.
ಉದ್ಯಮದಲ್ಲಿ ಬ್ರಾಂಡ್ ಪ್ರಮುಖ ಪಾತ್ರ ವಹಿಸುತ್ತದೆ ನಿಜ. ಆದರೆ ಲಾಭ ಮಾತ್ರವೇ ಸಂಸ್ಥೆಗಳ ಉದ್ದೇಶವಾಗಬಾರದು. ಸಮಾಜದ ಒಳಿತನ್ನೂ ಯೋಚಿಸಬೇಕು. ದ್ವೇಷ ಹರಡಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವವರ ಕುರಿತು ಎಚ್ಚರಿಕೆ ವಹಿಸಬೇಕು ಎಂದು ರಾಜೀವ್ ತಿಳಿಸಿದ್ದಾರೆ.
