ವರದಿಗಾರ (ಅ.9): ಮಾಜಿ ಬಿಗ್ ಬಾಸ್ ಸ್ಪರ್ಧಿ, ನಟಿ ಸನಾ ಖಾನ್ ಅವರು ಚಿತ್ರರಂಗಕ್ಕೆ ಗುಡ್ ಬೈ ಹೇಳಿ ಸೃಷ್ಟಿಕರ್ತನ ಆದೇಶ ಪಾಲಿಸುವ ನಿರ್ಧಾರ ಕೈಗೊಂಡಿದ್ದಾರೆ. ಈ ಬಗ್ಗೆ ಗುರುವಾರ ಇನ್ ಸ್ಟ್ರಾಗ್ರಾಮ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು ಈಗ ‘ಮಾನವೀಯತೆಗೆ ಸೇವೆ ಸಲ್ಲಿಸಲು ಮತ್ತು ನನ್ನ ಸೃಷ್ಟಿಕರ್ತನ ಆದೇಶಗಳನ್ನು ಪಾಲಿಸಲು’ ಮುಂದಾಗಿದ್ದೇನೆ ಎಂದು ತಿಳಿಸಿದ್ದಾರೆ.
ಸನಾ ಅವರು ಹಿಂದಿ, ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ ಪೋಸ್ಟ್ ಮಾಡಿದ ಸುದೀರ್ಘ ಪತ್ರದಲ್ಲಿ ತಮ್ಮ ಮನದಿಂಗಿತವನ್ನು ಹಂಚಿಕೊಂಡಿದ್ದಾರೆ. “ಅತ್ಯಂತ ಕರುಣಾಮಯಿಯೂ ಕರುಣಾಳುವೂ ಆದ ಅಲ್ಲಾಹನ ನಾಮದೊಂದಿಗೆ, ಸಹೋದರ ಸಹೋದರಿಯರೇ,
ಇಂದು ನಾನು ನನ್ನ ಜೀವನದ ಅತ್ಯಂತ ಮಹತ್ವದ ಘಟ್ಟದಲ್ಲಿ ನಿಂತಿರುವಾಗ ನಿಮ್ಮ ಜೊತೆ ಮಾತನಾಡುತ್ತಿದ್ದೇನೆ. ನಾನು ವರ್ಷಗಳ ಕಾಲ ಚಲನಚಿತ್ರ ರಂಗದ ಭಾಗವಾಗಿದ್ದೆ ಹಾಗೂ ಈ ಸಂದರ್ಭ ನನಗೆ ಹೆಸರು, ಖ್ಯಾತಿ, ಹಣ ಎಲ್ಲವೂ ದೊರೆತಿದೆ. ಆದರೆ ಹೆಸರು ಮತ್ತು ಶ್ರೀಮಂತಿಕೆಯ ಹಿಂದೆ ಹೋಗುವುದಕ್ಕಾಗಿಯೇ ಮನುಷ್ಯ ಈ ಭೂಮಿಗೆ ಬಂದಿದ್ದಾನೆಯೇ ಎಂಬ ಪ್ರಶ್ನೆ ಕಾಡಿದೆ. ಕಷ್ಟದಲ್ಲಿರುವವರಿಗೆ ಹಾಗೂ ಅಸಹಾಯಕರ ಸೇವೆ ಮಾಡುವುದು ಕೂಡ ಮನುಷ್ಯನ ಕರ್ತವ್ಯವಲ್ಲವೇ ? ಯಾವುದೇ ಕ್ಷಣ ನಾವು ಸಾಯಬಹುದಲ್ಲವೇ ? ನಾವಿಲ್ಲಿದ ನಂತರ ಏನಾಗುತ್ತದೆ ? ಈ ಪ್ರಶ್ನೆಗಳಿಗೆ ಬಹಳ ಸಮಯದಿಂದ ಉತ್ತರ ಹುಡುಕುತ್ತಿದ್ದೇನೆ. ಭೂಮಿಯಲ್ಲಿನ ಈ ಜೀವನ ಸಾವಿನ ನಂತರದ ಉತ್ತಮ ಜೀವನಕ್ಕಾಗಿ ಎಂದು ನಾನು ಅರಿತೆ, ಆದುದರಿಂದ ಸೃಷ್ಟಿಕರ್ತನ ಆದೇಶದಂತೆ ಬದುಕಬೇಕು ಹಾಗೂ ಹಣ, ಹೆಸರು ಮಾತ್ರ ಗುರಿಯಾಗಬಾರದು. ಇಂದಿನಿಂದ ನಾನು ಈ ಮನರಂಜನಾ ಕ್ಷೇತ್ರಕ್ಕೆ ಖಾಯಂ ಆಗಿ ಗುಡ್ ಬೈ ಹೇಳಿ ಜನರ ಸೇವೆಯಲ್ಲಿ ತೊಡಗಿಕೊಂಡು ಸೃಷ್ಟಿಕರ್ತನ ಆದೇಶವನ್ನು ಪಾಲಿಸುತ್ತೇನೆ. ಇದು ನನ್ನ ಅತ್ಯಂತ ಸಂತೋಷದ ಕ್ಷಣ. ಈ ಪಯಣದಲ್ಲಿ ನನಗೆ ಅಲ್ಲಾಹ್ ಸಹಾಯ ಮತ್ತು ಮಾರ್ಗದರ್ಶನ ನೀಡಲಿ ಎಂದು ಅವರು ಬರೆದುಕೊಂಡಿದ್ದಾರೆ.
