ವರದಿಗಾರ (ಅ.9): ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಏಜೆಂಟ್ ಒಬ್ಬನಿಗೆ ಭಾರತದ ಯುದ್ಧವಿಮಾನಗಳ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡುತ್ತಿದ್ದ ಆರೋಪದ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಭಯೋತ್ಪಾದಕ ನಿಗ್ರಹ ತಂಡ (ಎಟಿಎಸ್) ಅಧಿಕಾರಿಗಳು, ಹೆಚ್ಎಎಲ್ ಉದ್ಯೋಗಿಯೊಬ್ಬನನ್ನು ಬಂಧಿಸಿದ್ದಾರೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗೆ ಭಾರತದ ಯುದ್ಧವಿಮಾನಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ದೀಪಕ್ ಶಿರ್ಸಾತ್ (41) ಎಂಬಾತನನ್ನು ಎಟಿಎಸ್ ತಂಡ ಬಂಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈತ ಎಚ್ ಎಎಲ್ ನಲ್ಲಿ ಸಹಾಯಕ ಸೂಪರ್ ವೈಸರ್ ಆಗಿ (ಪರಿಶೀಲನೆ) ಕೆಲಸ ಮಾಡುತ್ತಿದ್ದ.
ಪಾಕಿಸ್ತಾನದ ಐಎಸ್ಐ ಜೊತೆ ನಿರಂತರ ಸಂಪರ್ಕದಲ್ಲಿದ್ದ ಈತ ಯುದ್ಧವಿಮಾನಗಳ ಸಂಬಂಧ ಸೂಕ್ಷ್ಮ ಮಾಹಿತಿಯನ್ನು ಐಎಸ್ಐಗೆ ರವಾನಿಸತ್ತಿದ್ದ. ನಾಸಿಕ್ನ ಓಜಾರ್ನಲ್ಲಿರುವ ಹೆಚ್ಎಎಲ್ನ ವಿಮಾನ ತಯಾರಿಕಾ ಘಟಕ ಹಾಗೂ ನಿರ್ಬಂಧಿತ ಪ್ರದೇಶಗಳ ಬಗ್ಗೆಯೂ ಮಾಹಿತಿ ರವಾನಿಸುತ್ತಿದ್ದುದು ತಿಳಿದುಬಂದಿದೆ ಎಂದು ಎಟಿಎಸ್ ಮೂಲಗಳು ತಿಳಿಸಿವೆ.
ಆರೋಪಿ ವಿರುದ್ಧ 1923ರ ಅಧಿಕೃತ ರಹಸ್ಯಗಳ ಕಾಯ್ದೆಯ ಸೆಕ್ಷನ್ 3, 4 ಮತ್ತು 5ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈತನಿಂದ ಮೂರು ಮೊಬೈಲ್ ಫೋನ್, ಐದು ಸಿಮ್ ಕಾರ್ಡ್ ಹಾಗೂ ಎರಡು ಮೆಮೋರಿ ಕಾರ್ಡ್ಗಳನ್ನು ವಶಪಡಿಸಿಕೊಂಡಿದ್ದು, ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಐದು ದಿನಗಳ ಕಾಲ ಎಟಿಎಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.
