ವರದಿಗಾರ (ಅ.9): ಎಲ್ಗರ್ ಪರಿಷತ್-ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿ ಎಂಟು ಮಂದಿ ಸಾಮಾಜಿಕ ಕಾರ್ಯಕರ್ತರು, ಶಿಕ್ಷಣ ತಜ್ಞರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಶುಕ್ರವಾರ ಮುಂಬೈ ನ್ಯಾಯಾಲಯಕ್ಕೆ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಜನವರಿಯಲ್ಲಿ ಪುಣೆ ಪೊಲೀಸರಿಂದ ತನಿಖೆ ಕೈಗೆತ್ತಿಕೊಂಡ ನಂತರ ಎನ್ಐಎ ಸಲ್ಲಿಸಿದ ಮೊದಲ ಚಾರ್ಜ್ಶೀಟ್ ನಲ್ಲಿ ಶಿಕ್ಷಣ ತಜ್ಞ ಆನಂದ್ ತೆಲ್ತುಂಬ್ದೆ, ಸಾಮಾಜಿಕ ಕಾರ್ಯಕರ್ತ ಗೌತಮ್ ನವಲಖಾ, ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹನಿ ಬಾಬು, ಸಾಂಸ್ಕೃತಿಕ ಗುಂಪು ಕಬೀರ್ ಕಲಾ ಮಂಚ್ ನ ಸದಸ್ಯರಾದ ಸಾಗರ್ ಗೋರ್ಖೆ, ರಮೇಶ್ ಗೈಚೋರ್ ಮತ್ತು ಜ್ಯೋತಿ ಜಗ್ತಾಪ್ , ಜಾರ್ಖಂಡ್ ಮೂಲದ ಪಾದ್ರಿ ಮತ್ತು ಬುಡಕಟ್ಟು ಹಕ್ಕುಗಳ ಕಾರ್ಯಕರ್ತ ಫಾದರ್ ಸ್ಟಾನ್ ಸ್ವಾಮಿ ಮತ್ತು ಪರಾರಿಯಾಗಿರುವ ನಿಷೇಧಿತ ಸಿಪಿಐ (ಮಾವೋವಾದಿ) ಕಾರ್ಯಕರ್ತ ಮಿಲಿಂದ್ ತೇಲ್ತುಂಬ್ಡೆ ಹೆಸರನ್ನು ಸೇರಿಸಲಾಗಿದೆ.
ಈ ಹಿಂದೆ ಬಂಧಿಸಲ್ಪಟ್ಟ ಸುರೇಂದ್ರ ಗಾಡ್ಲಿಂಗ್, ಮಹೇಶ್ ರಾವತ್, ಸುಧೀರ್ ಧವಾಲೆ, ರೋನಾ ವಿಲ್ಸನ್, ಅರುಣ್ ಫೆರೆರಿಯಾ, ವೆರ್ನಾನ್ ಗೊನ್ಸಾಲ್ವೆಸ್, ಪಿ ವರವರ ರಾವ್, ಶೋಮಾ ಸೇನ್ ಮತ್ತು ಸುಧಾ ಭಾರದ್ವಾಜ್ ಸೇರಿ ಒಂಬತ್ತು ಆರೋಪಿಗಳ ವಿರುದ್ಧ ಪುಣೆ ಪೊಲೀಸರು ಚಾರ್ಜ್ಶೀಟ್ಗಳನ್ನು ಸಲ್ಲಿಸಿದ್ದರು.
ಗುರುವಾರ ಬಂಧಿಸಲ್ಪಟ್ಟ 83 ವರ್ಷದ ಸ್ವಾಮಿಯನ್ನು ರಾಂಚಿಯಿಂದ ಮುಂಬೈಗೆ ಕರೆತಂದು ಇಂದು ಮಧ್ಯಾಹ್ನ 1.30 ಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅವರನ್ನು ಅಕ್ಟೋಬರ್ 23 ರವರೆಗೆ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ. ಅವರನ್ನು ತಾಲೋಜ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
