ವರದಿಗಾರ (ಅ.9): ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿ ಈ ವರ್ಷದ ಜನವರಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ವಹಿಸಿಕೊಂಡ ಎಂಟು ತಿಂಗಳ ಬಳಿಕ, ಈ ವಾರ “ಹೊಸ ಸಾಕ್ಷ್ಯಗಳೊಂದಿಗೆ” ಎನ್ಐಎ ಚಾರ್ಜ್ಶೀಟ್ ಸಲ್ಲಿಸುವ ಸಾಧ್ಯತೆಯಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಸಾಮಾಜಿಕ ಕಾರ್ಯಕರ್ತ ಗೌತಮ್ ನವಲಖಾ, ಗೋವಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಪ್ರಾಧ್ಯಾಪಕ ಆನಂದ್ ತೇಲ್ತುಂಬ್ಡೆ, ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹನಿ ಬಾಬು ಮತ್ತು ಕಬೀರ್ ಕಲಾ ಮಂಚ್ನ ಮೂವರು ಕಲಾವಿದರಾದ ಸಾಗರ್ ಗೋರ್ಖೆ, ರಮೇಶ್ ಗೈಚೋರ್ ಮತ್ತು ಅವರ ಪತ್ನಿ ಜ್ಯೋತಿ ಜಗ್ತಾಪ್ ಅವರನ್ನು ದೋಷಾರೋಪ ಪಟ್ಟಿಯಲ್ಲಿ ಸೇರಿಸಲು ಎನ್ಐಎ ಮುಂದಾಗಿದೆ.
ಗೈಚೋರ್, ಜಗತಾಪ್ ಮತ್ತು ಗೋರ್ಖೆ ಅವರನ್ನು ಸೆಪ್ಟೆಂಬರ್ ಆರಂಭದಲ್ಲಿ ಬಂಧಿಸಲಾಗಿತ್ತು. ತೇಲ್ತುಂಬ್ಡೆ ಮತ್ತು ನವಲಖಾ ಈ ವರ್ಷದ ಏಪ್ರಿಲ್ನಲ್ಲಿ ಎನ್ಐಎ ಮುಂದೆ ಶರಣಾಗಿದ್ದರು. ಈ ವರ್ಷದ ಜುಲೈನಲ್ಲಿ ಬಾಬು ಅವರನ್ನು ಬಂಧಿಸಲಾಗಿತ್ತು.
ಅವರೆಲ್ಲರ ವಿರುದ್ಧ ಐಪಿಸಿಯ ವಿವಿಧ ಕಲಂಗಳು ಸೇರಿದಂತೆ, ಕಠಿಣ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ-ಯುಎಪಿಎಯಡಿ ಪ್ರಕರಣ ದಾಖಲಿಸಲಾಗಿದೆ.
ಎನ್ಐಎ ಮೂಲವೊಂದರ ಪ್ರಕಾರ, ಆರೋಪಿಗಳು “ನಕ್ಸಲರ ನಗರ ಘಟಕಗಳ ಭಾಗವಾಗಿ” ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೋಷಾರೋಪಪಟ್ಟಿಯಲ್ಲಿ ಹೇಳಲಾಗಿದೆ.
ಎನ್ಐಎ ಚಾರ್ಜ್ಶೀಟ್ನಲ್ಲಿ ಆರು ಮಂದಿಯನ್ನು ಹೆಸರಿಸಲಾಗಿದ್ದರೂ, 2018 ರಿಂದ ನ್ಯಾಯಾಂಗ ಬಂಧನದಲ್ಲಿದ್ದ ಮಾನವ ಹಕ್ಕುಗಳ ಕಾರ್ಯಕರ್ತರಾದ ಸುಧಾ ಭಾರದ್ವಾಜ್, ಸಾಮಾಜಿಕ ಕಾರ್ಯಕರ್ತರಾದ ವೆರ್ನಾನ್ ಗೊನ್ಸಾಲ್ವೆಸ್, ಅರುಣ್ ಫೆರೆರಾ, ಪ್ರಾಧ್ಯಾಪಕ ಶೋಮಾ ಸೇನ್ ಮತ್ತು ಇತರರನ್ನು ಪಟ್ಟಿಯಲ್ಲಿ ಸೇರಿಸಿಲ್ಲ. ಭಾರದ್ವಾಜ್ ವಿರುದ್ಧ ಈ ವರ್ಷದ ಜನವರಿಯಲ್ಲಿ ಪುಣೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಭರದ್ವಾಜ್ ಮತ್ತು ವರವರ ರಾವ್ ಅವರನ್ನು 26 ಆಗಸ್ಟ್ 2018 ರಂದು ಗೊನ್ಸಾಲ್ವೆಸ್ ಮತ್ತು ಫೆರೀರಾ ಅವರೊಂದಿಗೆ ಬಂಧಿಸಿದರೆ, ಸೇನ್ ಅವರನ್ನು 6 ಜೂನ್ 2018 ರಂದು ವಶಕ್ಕೆ ತೆಗೆದುಕೊಳ್ಳಲಾಗಿದೆ.
