ವರದಿಗಾರ (ಅ.8): ಪ್ರಧಾನಿ ನರೇಂದ್ರಮೋದಿ ಸರ್ಕಾರ ಕೊರೊನಾ ಸೋಂಕಿನಲ್ಲಿ ಭಾರತವನ್ನು ವಿಶ್ವದ ನಂಬರ್ ಒನ್ ದೇಶವನ್ನಾಗಿ ಮಾಡುವ ಧಾವಂತದಲ್ಲಿದ್ದರೆ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊರೊನಾ ಸೋಂಕಿನಲ್ಲಿ ಕರ್ನಾಟಕವನ್ನು ದೇಶದ ನಂಬರ್ ಒನ್ ಮಾಡುವ ಉತ್ಸಾಹದಲ್ಲಿದ್ದಾರೆ. ಈ ಇಬ್ಬರು ನಾಯಕರು ದೇಶಕ್ಕೆ ಮತ್ತು ರಾಜ್ಯಕ್ಕೆ ಕೊರೊನಾಕ್ಕಿಂತಲೂ ಅಪಾಯಕಾರಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕೊರೊನಾ ಉಲ್ಭಣಗೊಳ್ಳಲು ರಾಜ್ಯ ಸರ್ಕಾರದ ಭ್ರಷ್ಟಾಚಾರವೇ ಕಾರಣವೇ ಹೊರತು ಜನರಲ್ಲ. ಕೊರೊನಾ ಸೋಂಕಿನಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ ಭಾರತ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ತಮ್ಮ ದುರಾಡಳಿತದ ಮೂಲಕ ಈ ಜೋಡಿ ದೇಶವನ್ನು ಮತ್ತು ರಾಜ್ಯವನ್ನು ಕೊರೊನಾ ಸೋಂಕಿನಲ್ಲಿ ಮೊದಲ ಸ್ಥಾನಕ್ಕೇರಿಸಲು ಪಣತೊಟ್ಟಂತಿದೆ.
ರಾಜ್ಯದಲ್ಲಿ ಪ್ರತಿದಿನ ಕೊರೊನಾ ಸೋಂಕಿನ ಸರಾಸರಿ 10,000 ಪ್ರಕರಣಗಳು ದಾಖಲಾಗುತ್ತಿವೆ. ಪ್ರತಿದಿನ ಸರಾಸರಿ 100 ಸಾವುಗಳಾಗುತ್ತಿವೆ. ಇಲ್ಲಿಯ ವರೆಗೆ 6.68 ಲಕ್ಷ ಜನರಿಗೆ ಕೊರೊನಾ ಸೋಂಕು ತಗಲಿದೆ. 1.16 ಲಕ್ಷಕ್ಕೂ ಅಧಿಕ ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೆಲ್ಲವನ್ನು ಕಂಡು ಕಾಣದಂತಿರುವ ಬಿ.ಎಸ್.ಯಡಿಯೂರಪ್ಪ ಸರ್ಕಾರಕ್ಕೆ ಕೊರೊನಾ ಸೋಂಕು ಬಡಿದಂತಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಉಲ್ಭಣಗೊಳ್ಳಲು ಜನರ ನಿರ್ಲಕ್ಷ್ಯ ಕಾರಣ ಎಂಬ ಅತಿಪ್ರಚಾರದ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಕೊರೊನಾ ನಿಯಂತ್ರಣದಲ್ಲಿನ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ತನ್ನ ಆಡಳಿತದ ವೈಫಲ್ಯದಿಂದಾಗಿ ಖಾಲಿಯಾಗಿರುವ ಖಜಾನೆ ತುಂಬಿಸಲು ಮದ್ಯದಂಗಡಿಯಿಂದ ಮಾಲ್ ವರೆಗೆ, ದೇವಸ್ಥಾನಗಳಿಂದ ಹೊಟೇಲ್ ಗಳ ವರೆಗೆ ಎಲ್ಲವನ್ನು ತೆರೆದಿಟ್ಟು ಜನರನ್ನು ಕೈಬೀಸಿ ಕರೆಯುತ್ತಿರುವ ರಾಜ್ಯ ಸರ್ಕಾರ ಕೊರೊನಾ ಉಲ್ಭಣಗೊಳ್ಳಲು ಜನತೆಯೇ ಕಾರಣ ಎಂದು ದೂಷಿಸುತ್ತಿರುವುದು ಜನತೆಗೆ ಬಗೆಯುತ್ತಿರುವ ದ್ರೋಹ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಕೊರೊನಾ ಸೋಂಕಿನಿಂದಾಗಿ ಸಾವು-ನೋವು ಹೆಚ್ಚಲು ಮುಖ್ಯ ಕಾರಣ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಯಲ್ಲಿನ ವೈಫಲ್ಯ. ಕೊರೊನಾ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆ ಮೇಲೆ ನಂಬಿಕೆ ಇಲ್ಲ, ಖಾಸಗಿ ಆಸ್ಪತ್ರೆಗೆ ಹೋಗಲು ಕೈಯಲ್ಲಿ ದುಡ್ಡಿಲ್ಲ. ಇದರಿಂದಾಗಿ ಪರೀಕ್ಷೆ ಮಾಡಿಕೊಳ್ಳದೆ, ಸರಿಯಾದ ಚಿಕಿತ್ಸೆ ಪಡೆಯದೆ ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.
