ರಾಷ್ಟ್ರೀಯ ಸುದ್ದಿ

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ತಿರುಗಿದ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ; ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್ ಎಸೆತ

ವರದಿಗಾರ (ಅ.8): ಪಶ್ಚಿಮ ಬಂಗಾಳ ಬಿಜೆಪಿ ಯುವ ಮೋರ್ಚಾ ಗುರುವಾರ ಆಯೋಜಿಸಿದ್ದ “ಮಾರ್ಚ್ ಟು ನಬನ್ನಾ” (ರಾಜ್ಯ ಸಚಿವಾಲಯಕ್ಕೆ ಜಾಥಾ) ಪ್ರತಿಭಟನಾ ಪ್ರದರ್ಶನ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಪೊಲೀಸರು ಜಲಫಿರಂಗಿ ಮತ್ತು ಲಾಠಿಚಾರ್ಜ್ ನಡೆಸಿ ಬಿಜೆಪಿ ಕಾರ್ಯಕರ್ತರನ್ನು ಚದುರಿಸಿದರು. ಹಲವು ಪ್ರತಿಭಟನಕಾರರಿಂದ ಮಾರಕಾಸ್ತ್ರ, ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.

ಕೋಲ್ಕತಾ ಮತ್ತು ಪಕ್ಕದ ಹೌರಾ ಜಿಲ್ಲೆಯಲ್ಲಿ ಪೊಲೀಸರ ಮೇಲೆ ಬಿಜೆಪಿ ಕಾರ್ಯಕರ್ತರು ಬಾಂಬ್ ಮತ್ತು ಇಟ್ಟಿಗೆಗಳನ್ನು ಎಸೆದಿದ್ದು, ಇದರಿಂದ ಹಲವು ಪೊಲೀಸರು ಗಾಯಗೊಂಡಿದ್ದಾರೆ. ಅಂತಿಮವಾಗಿ ಪ್ರತಿಭಟನಕಾರರನ್ನು ಪೊಲಿಸರು ಲಾಠಿ ಪ್ರಹಾರ ನಡೆಸಿ ಚದುರಿಸಿದರು.

ಘರ್ಷಣೆಯಲ್ಲಿ ರಾಜ್ಯ ಉಪಾಧ್ಯಕ್ಷ ರಾಜು ಬ್ಯಾನರ್ಜಿ ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಪಕ್ಷದ ಕಾರ್ಯಕರ್ತರು ಪ್ರತಿಭಟನೆಯ ವೇಳೆ ಟೈರ್‌ಗಳಿಗೆ ಬೆಂಕಿ ಹಚ್ಚಿದರು. ಅರ್ಜುನ್ ಸಿಂಗ್, ಕೈಲಾಶ್ ವಿಜಯ ವರ್ಗಿಯಾ, ಲಾಕೆಟ್ ಚಟರ್ಜಿ ಮತ್ತು ಮುಕುಲ್ ರಾಯ್ ಅವರಂತಹ ನಾಯಕರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪಿಸಿ ಯುವ ಮೋರ್ಚಾ ಏಳು ಬೇಡಿಕೆಗಳನ್ನು ಮುಂದಿಟ್ಟು ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ರಾಜ್ಯದ ನಾಲ್ಕು ವಿಭಾಗಗಳಿಂದ ನಬಣ್ಣಾಗೆ ಮೆರವಣಿಗೆ ಹೊರಟಿದ್ದರು.
ಹೌರಾ ಮೈದಾನದಿಂದ ಬಿಜೆವೈಎಂ ರಾಷ್ಟ್ರೀಯ ಅಧ್ಯಕ್ಷ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಪಶ್ಚಿಮ ಬಂಗಾಳ ಬಿಜೆವೈಎಂ ಘಟಕದ ಅಧ್ಯಕ್ಷ ಸೌಮಿತ್ರ ಖಾನ್‌ ನೇತೃತ್ವದಲ್ಲಿ ರ್ಯಾ ಲಿ ನಡೆಯಿತು.

ಪೊಲೀಸರು ಮಲ್ಲಿಕ್‌ ಗೇಟ್ ಬಳಿ ರ್ಯಾ ಲಿ ತಡೆದರು. ಆಗ ಬಿಜೆಪಿ ಕಾರ್ಯಕರ್ತರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಅಶ್ರುವಾಯು ಪ್ರಯೋಗ ನಂತರವೂ ಪರಿಸ್ಥಿತಿ ತಹಬದಿಗೆ ಬರದಿದ್ದಾಗ, ಕ್ಷಿಪ್ರ ಕಾರ್ಯಪಡೆಯ ಸಿಬ್ಬಂದಿ ಲಾಠಿಚಾರ್ಜ್‌ ನಡೆಸಿದ್ದು, ಹಲವರು ಗಾಯಗೊಂಡರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್‌ ಘೋಷ್‌ ನೇತೃತ್ವದಲ್ಲಿ ಕೋಲ್ಕತ್ತದ ಬುರ್ರಾ ಬಜಾರ್‌ನಲ್ಲಿ ಮೆರವಣಿಗೆ ಘರ್ಷಣೆಗೆ ತಿರುಗಿದೆ. ಪ್ರತಿಭಟನೆ ನಿಯಂತ್ರಣಕ್ಕೆ 5 ಸಾವಿರಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿತ್ತು ಪ್ರತಿಭಟನೆಯ ವೇಳೆ ಒಬ್ಬನಿಂದ ಒಂದು ಪಿಸ್ತೂಲ್‌ ವಶಕ್ಕೆ ಪಡೆಯಲಾಗಿದೆ ಹಾಗೂ ಕಾರ್ಯಕರ್ತರು ಪೊಲೀಸರ ಮೇಲೆಯೇ ಪೆಟ್ರೋಲ್‌ ಬಾಂಬ್‌ ಎಸೆದಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರವು ಯಾವುದೇ ಬೃಹತ್ ಸಭೆ, ಪ್ರತಿಭಟನೆ ನಡೆಸಲು ಅನುಮತಿ ನೀಡಿರಲಿಲ್ಲ. ಕೇವಲ 100 ಜನರು ಪಾಲ್ಗೊಂಡು ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿತ್ತು. ಹಲವು ಪ್ರತಿಭಟನಕಾರರಿಂದ ಮಾರಕಾಸ್ತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group