ಪ್ರಮುಖ ಹುದ್ದೆಗಳಿಂದ ಮುಸ್ಲಿಮರನ್ನು ಹೊರಗಿಡುತ್ತಿರುವ ಸರ್ಕಾರ
ವರದಿಗಾರ (ಅ.8): ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ಮೆಹಬೂಬಾ ಮುಫ್ತಿ ಅಧಿಕಾರ ಕಳೆದಕೊಂಡ 2018ರ ಜೂನ್ ನಂತರ, ಕಾಶ್ಮೀರಿಗಳು ಮತ್ತು ಮುಸ್ಲಿಂ ಅಧಿಕಾರಿಗಳನ್ನು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡಲಾಗುತ್ತಿದೆ ಅಥವಾ ಪ್ರಮುಖ ಸ್ಥಾನಗಳಿಂದ ಅವರನ್ನು ದೂರವಿಡಲಾಗಿದೆ ಎಂದು ಕಾಶ್ಮೀರ ಆಡಳಿತ ಸೇವೆಯ (ಕೆಎಎಸ್) ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.
“ಕಳೆದ ವರ್ಷ ಕೇಂದ್ರ ಸರ್ಕಾರವು 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಈ ಪ್ರಕ್ರಿಯೆ ವೇಗ ಪಡೆದುಕೊಂಡಿದೆ ಎಂದು ಹೆಸರು ಹೇಳಲು ಇಚ್ಛಿಸದ ಶ್ರೀನಗರದ ಸಿವಿಲ್ ಸೆಕ್ರೆಟರಿಯೇಟ್ನಲ್ಲಿ ಸೇವೆ ಸಲ್ಲಿಸುತ್ತಿರುವ ಕೆಎಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆಗಸ್ಟ್ 5, 2019ರ ನಂತರ, ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಬಳಿಕ ಸ್ಥಳೀಯ ಮುಸ್ಲಿಂ ಅಧಿಕಾರಿಗಳು ಸಚಿವಾಲಯದ ಪ್ರಮುಖ ಹುದ್ದೆಗಳಲ್ಲಿ ಕಂಡುಬಂದಿಲ್ಲ ಎಂದು ಅವರು ಆರೋಪಿಸಿದ್ದಾರೆ.
“ಇಂದು ನೀವು ಸಚಿವಾಲಯಕ್ಕೆ ಹೋದರೆ ಕಾಶ್ಮೀರಿಯೇತರರು ಮತ್ತು ಮುಸ್ಲಿಮೇತರರು ಪ್ರಮುಖ ಸಭೆಗಳನ್ನು ನಡೆಸುವುದು, ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಂಡುಬರುತ್ತದೆ. ಮುಸ್ಲಿಮರು ಮತ್ತು ಕಾಶ್ಮೀರಿ ಅಧಿಕಾರಿಗಳನ್ನು ದೂರವಿಡಲಾಗಿದೆ ಎಂದು ಅಧಿಕಾರಿ ಹೇಳಿದರು.
ಜಮ್ಮು ಕಾಶ್ಮೀರ ಮುಸ್ಲಿಂ ಬಹುಸಂಖ್ಯಾತ ಕೇಂದ್ರಾಡಳಿತ ಪ್ರದೇಶವಾಗಿದೆ. 2011 ರ ಜನಗಣತಿಯ ಪ್ರಕಾರ, ಜಮ್ಮು ಕಾಶ್ಮೀರದಲ್ಲಿ ಒಟ್ಟು 12.5 ಮಿಲಿಯನ್ ಜನಸಂಖ್ಯೆ ಇದ್ದು, ಈ ಪೈಕಿ ಮುಸ್ಲಿಮರು ಶೇ. 68.31 ಮತ್ತು ಹಿಂದೂಗಳು ಶೇ. 28.43ರಷ್ಟಿದ್ದಾರೆ. ರಾಜ್ಯದ 20 ಜಿಲ್ಲೆಗಳ ಪೈಕಿ 17 ರಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೆ, ಆದರೆ ರಾಜ್ಯದ ಆಡಳಿತ ಸೇವೆಗಳಲ್ಲಿ ಸ್ಥಳೀಯ ಅಧಿಕಾರಿಗಳ ಸಂಖ್ಯೆ ತೀರಾ ಕಡಿಮೆಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
