ವರದಿಗಾರ (ಅ.8): ಹಿಂದೂ ಧರ್ಮದ ಒಂದು ವಿಭಾಗದಲ್ಲಿ ಭಯೋತ್ಪಾದನೆಯ ಪ್ರಸ್ತಾಪವಿದ್ದ ಪಠ್ಯಪುಸ್ತಕವನ್ನು ಇಂಗ್ಲೆಂಡ್ನ ಶಾಲೆಯೊಂದು, ಬ್ರಿಟಿಷ್ ಹಿಂದೂ ಸಂಘಟನೆಗಳು ಮತ್ತು ಹಲವು ಪೋಷಕರ ಪ್ರತಿಭಟನೆ ಹಿನ್ನೆಲೆಯಲ್ಲಿ ತನ್ನ ವೆಬ್ ಸೈಟ್ ನಿಂದ ಹಿಂದಕ್ಕೆ ಪಡೆದು ಕ್ಷಮೆಯಾಚಿಸಿದೆ.
ಇಂಗ್ಲೆಂಡ್ನ ವೆಸ್ಟ್ ಮಿಡ್ಲ್ಯಾಂಡ್ಸ್ ಪ್ರದೇಶದ ಸೋಲಿಹಲ್ನಲ್ಲಿರುವ ಲ್ಯಾಂಗ್ಲೆ ಶಾಲೆ ಬುಧವಾರ, ‘ಜಿಸಿಎಸ್ಇ ಧಾರ್ಮಿಕ ಅಧ್ಯಯನಗಳು: ಧರ್ಮ ಶಾಂತಿ ಮತ್ತು ಸಂಘರ್ಷ ಕಾರ್ಯಪುಸ್ತಕ’ ಎಂಬ ಪಠ್ಯಪುಸ್ತಕವನ್ನು ಕೆಲವು ವರ್ಷಗಳ ಹಿಂದೆ ಬಾಹ್ಯವಾಗಿ ಖರೀದಿಸಲಾಗಿದ್ದು, ಈಗ ಅದನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
“ದುರದೃಷ್ಟವಶಾತ್, ಈ ಪುಸ್ತಕವನ್ನು ಹಲವು ವರ್ಷಗಳ ಹಿಂದೆ ಬಾಹ್ಯವಾಗಿ ಖರೀದಿಸಲಾಗಿದೆ. ನಮ್ಮ ಶಾಲೆಯಲ್ಲಿ ರಚಿಸಿದ್ದಲ್ಲ. ಇದನ್ನು ಶಾಲೆಯಲ್ಲಿ ಬಳಸಲಾಗುವುದಿಲ್ಲ ಎಂದು ನಾವು ನಿಮಗೆ ಭರವಸೆ ನೀಡುತ್ತೇನೆ ಎಂದು ಲ್ಯಾಂಗ್ಲೆ ಸ್ಕೂಲ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಈ ಪಠ್ಯವನ್ನು ನಮ್ಮ ವೆಬ್ಸೈಟ್ನಿಂದ ತಕ್ಷಣ ತೆಗೆದುಹಾಕಲಾಗಿದೆ. ಯಾವುದೇ ತಪ್ಪು ಸಂಭವಿಸಿದ್ದರೆ ನಾವು ಕ್ಷಮೆಯಾಚಿಸುತ್ತೇವೆ ಎಂದು ಅದು ಹೇಳಿದೆ. ಆಕ್ರೋಶಗೊಂಡ ಪೋಷಕರು ಮತ್ತು ಹಿಂದೂ ಗುಂಪುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಈ ಪಠ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು. ಮಹಾಭಾರತ ಯುದ್ಧವನ್ನು ಕುರಿತು ಈ ಪಠ್ಯದಲ್ಲಿ ತಪ್ಪಾಗಿ ಅರ್ಥೈಸಲಾಗಿತ್ತು ಎನ್ನಲಾಗಿದೆ.
